ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ಜಾತ್ರೆ: 65ನೇ ರಥೋತ್ಸವ ಸಂಪನ್ನ

| Published : Jan 17 2024, 01:47 AM IST

ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ಜಾತ್ರೆ: 65ನೇ ರಥೋತ್ಸವ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಶಾಂತಳ್ಳಿಯ ಶ್ರೀ ಕುಮಾರಲಿಂಗೇಶ್ವರ ಸ್ವಾಮಿಯ ಜಾತ್ರೋತ್ಸವದ ಅಂಗವಾಗಿ 65ನೇ ರಥೋತ್ಸವ ದೇವಾಲಯ ಆವರಣದಲ್ಲಿ ಸಾವಿರಾರ ಸಂಖ್ಯೆ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಪ್ರಮುಖರು ರಥವನ್ನು ಎಳೆಯುವ ಮೂಲಕ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಇಲ್ಲಿಗೆ ಸಮೀಪದ ಐತಿಹಾಸಿಕ ಹಿನ್ನೆಲೆಯುಳ್ಳ ಶಾಂತಳ್ಳಿಯ ಶ್ರೀ ಕುಮಾರಲಿಂಗೇಶ್ವರ ಸ್ವಾಮಿಯ ಜಾತ್ರೋತ್ಸವದ ಅಂಗವಾಗಿ 65ನೇ ರಥೋತ್ಸವ ದೇವಾಲಯ ಆವರಣದಲ್ಲಿ ಮಂಗಳವಾರ ಸಾವಿರಾರ ಸಂಖ್ಯೆ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ದೇವಾಲಯ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಕೆ.ಎಂ.ಲೋಕೇಶ್, ಶಾಂತಳ್ಳಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಎಂ.ಧರ್ಮಪ್ಪ ಸಂಸದ ಪ್ರತಾಪ್ ಸಿಂಹ, ಶಾಸಕ ಡಾ.ಮಂತರ್ ಗೌಡ, ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್, ಮಾಜಿ ಎಂಎಲ್‌ಸಿಗಳಾದ ಎಸ್.ಜಿ.ಮೇದಪ್ಪ, ವೀಣಾ ಅಚ್ಚಯ್ಯ, ಮೈಸೂರು ಗೋಪಾಲಗೌಡ ಆಸ್ಪತ್ರೆಯ ಮಾಲೀಕ ಡಾ.ಶ್ರಶೂಷ್‍ಗೌಡ, ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ಪ್ರತಿನಿಧಿ ಹರಪಳ್ಳಿ ರವೀಂದ್ರ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್ ಸೇರಿದಂತೆ ಗ್ರಾಮದ ಪ್ರಮುಖರು ರಥವನ್ನು ಎಳೆಯುವ ಮೂಲಕ ಚಾಲನೆ ನೀಡಿದರು.

ಗ್ರಾಮದ ಮುಖ್ಯ ರಸ್ತೆಯಲ್ಲಿ ರಥ ಎಳೆಯಲಾಯಿತು. ಗ್ರಾಮ ನಿವಾಸಿಗಳು ತಮ್ಮ ಮನೆಯ ಮುಂದೆ ರಥ ಬರುತ್ತಿದ್ದಂತೆ ರಸ್ತೆಯನ್ನು ನೀರಿನಿಂದ ತೊಳೆದು, ರಂಗೋಲಿ ಬಿಡಿಸಿ, ಈಡುಗಾಯಿ ಒಡೆದು ಪೂಜೆ ಸಲ್ಲಿಸಿದರು. ಕೀಲು ಕುದುರೆ ಮತ್ತು ಬೊಂಬೆ ಕುಣಿತ ಜನರನ್ನು ಆಕರ್ಷಿಸಿತು. ಇಕ್ಕೆಲಗಳಲ್ಲೂ ಭಕ್ತರು ನಿಂತು ರಥೋತ್ಸವವನ್ನು ವೀಕ್ಷಿಸಿದರು.

ದೂರದೂರಿನಿಂದ ಆಗಮಿಸಿದ ಭಕ್ತಾದಿಗಳು ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಹರಕೆ ತೀರಿಸಿದರು. ಗ್ರಾಮೀಣ ಭಾಗದಲ್ಲಿ ರೈತರು ಬೆಳೆದ ವಿಶೇಷ ತರಕಾರಿಗಳನ್ನು ವಸ್ತುಪ್ರದರ್ಶನದಲ್ಲಿ ಪ್ರದರ್ಶಿಸಿದರು. ಕಸೂತಿ ವಸ್ತುಗಳು, ಪರಿಶುದ್ಧ ಜೇನು ಮಾರಾಟಕ್ಕೆ ಇಡಲಾಯಿತು. ನವದಂಪತಿಗಳು ಪೂಜೆ ಸಲ್ಲಿಸಿದರು. ಕಳೆದ ಶನಿವಾರದಿಂದ ಜಾತ್ರೋಥ್ಸವ ಪ್ರಾರಂಭವಾಗಿತ್ತು.ಫಲತಾಂಬೂಲ ಸಮರ್ಪಣೆ: ಕೊಡಗು ರಾಜರ ಆಳ್ವಿಕೆ ಕಾಲದಿಂದ ಆಚರಣೆಯಲ್ಲಿರುವ ಪದ್ದತಿಯಂತೆ ಕೊತ್ತನಳ್ಳಿ, ಕುಡಿಗಾಣ, ಬೀದಳ್ಳಿ, ಹೆಗ್ಗಡಮನೆ, ಕುಮಾರಳ್ಳಿ, ಬಾಚಳ್ಳಿ, ಕೂತಿನಾಡು, ತೋಳುನಾಡು, ಯಡೂರು, ತಲ್ತಾರೆಶೆಟ್ಟಳ್ಳಿ ಗ್ರಾಮಗಳ ಗ್ರಾಮಸ್ಥರು ವಾದ್ಯಗೋಷ್ಠಿಯಿಂದ ದೇವಾಲಯದ ಪ್ರದಕ್ಷಿಣೆ ಹಾಕಿ ದೇವರಿಗೆ ಫಲತಾಂಬೂಲ ಅರ್ಪಿಸಿ ಊರಿನ ಸಮೃದ್ಧಿಗೆ ಸಾಮೂಹಿಕ ಪೂಜೆ ಸಲ್ಲಿಸಿದರು.

ಕುಮಾರಳ್ಳಿ, ಜಕ್ಕನಳ್ಳಿ, ಇನಕನಹಳ್ಳಿ, ಕೊತ್ತನಳ್ಳಿ ಗ್ರಾಮಸ್ಥರು ಹಾಗು ದೇವರ ವಡೇಕಾರರು ಬರಿಗಾಲಿನಲ್ಲಿ 10ಕಿ.ಮೀ.ದೂರದಲ್ಲಿರುವ ಪುಷ್ಪಗಿರಿ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ಬೆಟ್ಟದಲ್ಲಿರುವ ಕುಮಾರಲಿಂಗೇಶ್ವರಸ್ವಾಮಿಯ ಪಾದುಕೆಗಳಿಗೆ ಪೂಜೆ ಸಲ್ಲಿಸಿ, ಜ್ಯೋತಿ ಬೆಳಗಿಸಿ ಪೂಜೆ ಸಲ್ಲಿಸಿದರು. ಜಾತ್ರೋತ್ಸವ ಮೂರು ದಿನ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು.ಕ್ಷೇತ್ರ, ಜಾತ್ರೆಯ ಇತಿಹಾಸ: ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ಈ ನಾಡಿನ ಆರಾಧ್ಯ ದೇವರು. ಪ್ರತಿಯೊಬ್ಬರ ಮನೆಯಲ್ಲೂ ಮನೆದೇವರಾಗಿ ಕುಮಾರಲಿಂಗೇಶ್ವರನ್ನನ್ನೇ ಪೂಜೆ ಮಾಡುತ್ತಾರೆ. ವರ್ಷಂಪ್ರತಿ ಒಂದು ವಾರದವರೆಗೆ ಜಾತ್ರೋತ್ಸವ ನಡೆಯುತ್ತದೆ. ತಾವು ಬೆಳೆದ ಕೃಷಿಬೆಳೆಗಳನ್ನು ದೇವರಿಗೆ ಅರ್ಪಿಸಿ ನಂತರ ಬಳಕೆ ಮಾಡುವುದು ಇಲ್ಲಿನ ಜನರು ಪದ್ದತಿಯಾಗಿದೆ. ಗುರು ಹಿರಿಯರ ಅಪೇಕ್ಷೆಯಂತೆ ಕಳೆದ 6 ದಶಕಗಳಿಂದ ಪ್ರತಿವರ್ಷ ರಥೋತ್ಸವ ಹಾಗೂ ಒಂದು ವಾರದ ತನಕ ಧಾರ್ಮಿಕ ವಿಧಿ ವಿಧಾನದಂತೆ ದೇವರ ಪೂಜೆ ಉತ್ಸವಗಳು ನಡೆಯುತ್ತವೆ. ಹೊರ ಜಿಲ್ಲೆ, ಹೊರ ರಾಜ್ಯಗಳಿಂದಲೂ ಸಹಸ್ರಾರು ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸುತ್ತಾರೆ.

ಸಮಾರೋಪ: ಬುಧವಾರ ಸಮಾರೋಪ ಸಮಾರಂಭ ಮಧ್ಯಾಹ್ನ 3ಕ್ಕೆ ನಡೆಯಲಿದೆ. ವಿವಿಧ ಶಾಲಾ ಮಕ್ಕಳಿಂದ ನೃತ್ಯ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ. ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಅತೀಹೆಚ್ಚು ಅಂಕಪಡೆದು ರಾಜ್ಯದಲ್ಲೇ ಪ್ರಥಮ ಸ್ಥಾನಪಡೆದ ತಲ್ತಾರೆಶೆಟ್ಟಳ್ಳಿ ಗ್ರಾಮದ ಕೆ.ಎ.ಅನನ್ಯ, ಕೆಎಸ್‍ಆರ್‍ಟಿಸಿ ನಿವೃತ್ತ ಡಿಸಿಎಂ ಕೆ.ಎ. ರವೀಂದ್ರ, ಜೀಪು ಚಾಲಕ ಡಿ.ಬಿ. ನವೀನ್ ಅವರನ್ನು ಸನ್ಮಾನಿಸಲಾಗುತ್ತದೆ.