ಇಂದು ಜಿಗಣೇಹಳ್ಳಿಯಲ್ಲಿ ಶ್ರೀ ಮೈಲಾರಲಿಂಗ ಕಾರ್ಣಿಕೋತ್ಸವ

| Published : Feb 24 2024, 02:31 AM IST

ಇಂದು ಜಿಗಣೇಹಳ್ಳಿಯಲ್ಲಿ ಶ್ರೀ ಮೈಲಾರಲಿಂಗ ಕಾರ್ಣಿಕೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ, ರಾಜ್ಯದ ಹಾಗೂ ಜಗತ್ತಿನ ಭವಿಷ್ಯದಲ್ಲಿ ನಡೆವ ರಾಜಕಾರಣ, ಅಭಿವೃದ್ಧಿ, ಅಪಾಯಗಳ ಪರಿಣಾಮಗಳ ಕುರಿತು ಎಚ್ಚರಿಸುವ ಶ್ರೀ ಮೈಲಾರ ಮೈಲಾರಲಿಂಗಸ್ವಾಮಿ ಕಾರ್ಣಿಕೋತ್ಸವವು ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ.

ಕಡೂರು ಕೃಷ್ಣಮೂರ್ತಿಕನ್ನಡಪ್ರಭ ವಾರ್ತೆ ಕಡೂರು

ಇಂದು ಭರತ ಹುಣ್ಣಿಮೆಯಲ್ಲಿ ನಡೆವ ರಾಜ್ಯ, ದೇಶ ಹಾಗೂ ಪ್ರಪಂಚದ ಭವಿಷ್ಯದ ಆಗುಹೋಗುಗಳ ಕುರಿತು ನುಡಿವ ಶ್ರೀ ಮೈಲಾರಲಿಂಗ ಸ್ವಾಮಿಯವರ ಕಾರ್ಣಿಕೋತ್ಸವ ಇಂದು ಕಡೂರು ತಾಲೂಕಿನ ಜಿಗಣೇಹಳ್ಳಿ ಗ್ರಾಮದಲ್ಲಿ ನಡೆಯಲಿದೆ.ದೇಶದ, ರಾಜ್ಯದ ಹಾಗೂ ಜಗತ್ತಿನ ಭವಿಷ್ಯದಲ್ಲಿ ನಡೆವ ರಾಜಕಾರಣ, ಅಭಿವೃದ್ಧಿ, ಅಪಾಯಗಳ ಪರಿಣಾಮಗಳ ಕುರಿತು ಎಚ್ಚರಿಸುವ ಶ್ರೀ ಮೈಲಾರ ಮೈಲಾರಲಿಂಗಸ್ವಾಮಿ ಕಾರ್ಣಿಕೋತ್ಸವವು ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ಸುಮಾರು 5-10 ನಿಮಿಷಗಳು ಗೊರವಯ್ಯ ನುಡಿವ ಮಾತುಗಳು ದೇಶದ ಭವಿಷ್ಯದ ಮೇಲೆ ಪರಿಣಾಮ ಬೀರುವುದನ್ನು ಗೊರವಯ್ಯನ ಬಾಯಲ್ಲಿ ನುಡಿವ ನುಡಿಗಳ ಅಡಗಿರುವುದನ್ನು ಭಕ್ತರು ಬಿಡಿಸಿ ಹೇಳುವುದರ ಜೊತೆಗೆ ಅವನಲೋಕಿಸಲಾಗುತ್ತದೆ.

ಹಾಗಾಗಿ ಶ್ರೀ ಮೈಲಾರಲಿಂಗ ಸ್ವಾಮಿ ಕಾರ್ಣಿಕವು ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ಕಡೂರು ತಾಲೂಕಿನ ಜಿಗಣೇಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ತೆಲುಗುಗೌಡ ಸಮಾಜದವರೇ ಹೆಚ್ಚಾಗಿದ್ದು, ಈ ಗ್ರಾಮಗಳಲ್ಲಿ ಶ್ರೀ ಮೈಲಾರಲಿಂಗ ಸ್ವಾಮಿಯು ಭಕ್ತ ಸಮೂಹದ ಆರಾಧ್ಯ ದೈವವಾಗಿದೆ. ವೇದಾ ಹಳ್ಳದ ತಟದಲ್ಲಿ ನಡೆಮುಡಿಯೊಂದಿಗೆ ಹೆಣ್ಣು ಮಕ್ಕಳು, ದೊಡ್ಡವರು ಮಕ್ಕಳು ಎನ್ನದೆ ಸಾವಿರಾರು ಸಂಖ್ಯೆಯಲ್ಲಿ ಸೇರುವ ಕಾರ್ಣಿಕವು ಜಾತ್ರೆಯಂತೆ ಕಂಗೊಳಿಸುತ್ತದೆ. ಇನ್ನು, ಶ್ರೀಸ್ವಾಮಿ ಆಣತಿಯಂತೆ ಕಾರ್ಣಿಕ ನುಡಿವ ವ್ಯಕ್ತಿಗೆ ದೇವರ ವಸ್ತ್ರಗಳೊಂದಿಗೆ ಮೌನ ವೃತ ಆಚರಿಸಲು ಆಣೆ ಮಾಡಿಕೊಡಲಾಗುತ್ತದೆ.ಭರತ ಹುಣ್ಣಿಮೆಯಲ್ಲಿ ಬರುವ ಶ್ರೀ ಮೈಲಾರಲಿಂಗ ಸ್ವಾಮಿ ಕಾರ್ಣಿಕೋತ್ಸವವು ಹೆಚ್ಚಿನ ಮಹತ್ವ ಪಡೆದಿದೆ. ಮೂಲ ಸ್ಥಾನವಿರುವ ರಾಜ್ಯದ ಹಾವೇರಿ ಜಿಲ್ಲೆಯ ಮೈಲಾರದಲ್ಲಿ ನಡೆವ ಶ್ರೀಮೈಲಾರಲಿಂಗ ಸ್ವಾಮಿ ಅವರ ಕಾರ್ಣಿಕವು ಪ್ರಾಮುಖ್ಯತೆ ಪಡೆದಿದ್ದು, ಅದರಂತೆ ಕಡೂರು ತಾಲೂಕಿನ ಜಿಗಣೇಹಳ್ಳಿಯ ಮತ್ತು ಬೀರೂರಿನ ಶ್ರೀ ಕಾರ್ಣಿಕಕ್ಕೆ ಇತಿಹಾಸವಿದೆ. ಈ ನಿಟ್ಟಲ್ಲಿ ಜಿಗಣೇಹಳ್ಳಿ ಗ್ರಾಮದಲ್ಲಿ ಶನಿವಾರ (ಇಂದು) ಶ್ರೀಮೈಲಾರಲಿಂಗ ಸ್ವಾಮಿ ಮತ್ತು ಇತರೆ ಪರಿವಾರ ದೇವರುಗಳೊಂದಿಗೆ ಗ್ರಾಮದ ವೇದಾಹಳ್ಳದಲ್ಲಿ ಪುಣ್ಯಾಹ ಕಾರ್ಯ ನಡೆಯುತ್ತದೆ. ಶ್ರೀ ಸ್ವಾಮಿಯವರ ಉತ್ಸವದೊಂದಿಗೆ ಕಾರ್ಣಿಕ ನಡೆವ ಜಾಗಕ್ಕೆ ಗೊರವಯ್ಯನನ್ನು ಕರೆ ತರಲಾಗುವುದು. ಉತ್ಸವದ ಬಳಿಕ ಕಾರ್ಣಿಕ ನುಡಿವ ಜಾಗಕ್ಕೆ ಬಂದು ಸಮಯಕ್ಕೆ ಸರಿಯಾಗಿ ಕಾರ್ಣಿಕ ನಡೆಯಲಿದೆ.

ಕಾರ್ಣಿಕ ನುಡಿವ ಗೊರವಯ್ಯನ 8 ದಿನಗಳ ನಡೆಮಡಿ ಆಚರಣೆ

ಶ್ರೀ ಸ್ವಾಮಿಯವರ ಕಾರ್ಣಿಕೋತ್ಸವದ ನುಡಿ ನುಡಿಯುವ ಗೊರವಯ್ಯ ಎಂಟು ದಿನಗಳಿಂದ ದೇವಾಲಯದ ಎದುರಿನ ಬಿಲ್ವಪತ್ರೆ ಮರದ ಬಳಿ ಹಸಿರು ಚಪ್ಪರದ ಗುಡಿಸಲನ್ನು ನಿರ್ಮಿಸಿ ಅದರಲ್ಲಿ ಎಂಟು ದಿನಗಳ ಕಾಲ ಉಪವಾಸ ಮಾಡುವ ಜೊತೆ ಮೌನವ್ರತದಲ್ಲಿ ಇರುವ ಅವರನ್ನು ಯಾರೂ ಮಾತನಾಡಿಸುವಂತಿಲ್ಲ. ನಡೆಮಡಿಯಿಂದ ಶಿಷ್ಟಾಚಾರ ಗಳನ್ನು ಪಾಲಿಸುವ ಮೂಲಕ ಕಾರ್ಣಿಕ ನುಡಿಯಲು ಸಿದ್ಧರಾಗುತ್ತಾರೆ. ಕಾರ್ಣಿಕ ನುಡಿವ ಗೊರವಯ್ಯನವರಾಗಿರುವ ಜಿಗಣೇಹಳ್ಳಿ ಮಂಜುನಾಥ್ ಮೌನವ್ರತ, ನಿಯಮದಂತೆ ಬೆಳಿಗ್ಗೆ ಕೇವಲ 1 ಕಪ್ ಹಾಲು ಕುಡಿದು 1 ಬಿಲ್ವಪತ್ರೆ ಎಸಳು ಮಾತ್ರ ತಿಂದು ಎಂಟು ದಿನಗಳಿಂದ ಯಾವುದೇ ಆಹಾರ ಸೇವಿಸದೆ ಶ್ರದ್ಧಾ ಭಕ್ತಿಯಿಂದ ನಿಯಮ ಆಚರಿಸುತ್ತಿದ್ದಾರೆ. ಶನಿವಾರ ಮಧ್ಯಾಹ್ನ ಸುಮಾರು 3.30ರ ಸಮಯಕ್ಕೆ ವೇದಾಹಳ್ಳದ ತಟದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಭಕ್ತರ ಸಮ್ಮುಖದಲ್ಲಿ ಕಾರ್ಣಿಕ ನಡೆಯಲಿದೆ.