ಮಾ.11ರಿಂದ ಶ್ರೀ ರಾಘ‍ವೇಂದ್ರ ಸಪ್ತಾಹ ಮಹೋತ್ಸವ

| Published : Jan 25 2024, 02:01 AM IST

ಸಾರಾಂಶ

ಮಾ.11ರಿಂದ ನಡೆಯುವ ಶ್ರೀ ರಾಘವೇಂದ್ರ ರಾಯರ ಸಪ್ತಾಹದಲ್ಲಿ ಏಳೂ ದಿನಗಳ ಕಾಲ ಬೆಳಿಗ್ಗೆ ಹಾಗೂ ಸಂಜೆ ವಿವಿಧ ಪೂಜಾ ಕೈಂಕರ್ಯಗಳು ಹಾಗೂ ಉಪನ್ಯಾಸಗಳು ನಡೆಯಲಿವೆ ಎಂದು ಡಾ.ಸಿ.ಕೆ.ಆನಂದ ತೀರ್ಥಾಚಾರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಶ್ರೀ ರಾಘವೇಂದ್ರ ಗುರು ಸೌರ್ವಭೌಮರ ಪಟ್ಟಾಭಿಷೇಕ ಮತ್ತು ಜನ್ಮದಿನದ ಸಂಸ್ಮರಣೆಗೆ 31ನೇ ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವವನ್ನು ಮಾ.11ರಿಂದ 17ರವರೆಗೆ ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಗುರು ಸಾರ್ವಭೌಮ ಸಪ್ತಾಹ ಕಾರ್ಯಕ್ರಮದ ಸಮಿತಿಯ ಪ್ರಚಾರ ಮತ್ತು ಮಾಧ್ಯಮ ಸಮಿತಿಯ ಮುಖ್ಯಸ್ಥ ಡಾ.ಸಿ.ಕೆ.ಆನಂದ ತೀರ್ಥಾಚಾರ್ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾ.11ರಿಂದ ಏಳು ದಿನ ನಡೆಯುವ ಶ್ರೀ ರಾಘವೇಂದ್ರ ರಾಯರ ಸಪ್ತಾಹದಲ್ಲಿ ಪ್ರಾತಃಕಾಲ 6ಕ್ಕೆ ಸುಪ್ರಭಾತ ಪ್ರಾತಃಸ್ಮರಣೆ, 7.30ಕ್ಕೆ ಗುರುರಾಯರಿಗೆ ಅಷ್ಟೋತ್ತರ ಸಹಿತ ಕ್ಷೀರಾಭಿಷೇಕ, 8.30ಕ್ಕೆ ಪ್ರವಚನ, ಶ್ರೀ ಪಲಿಮಾರು ಮಠದ ಸುಧಾ ವಿದ್ಯಾರ್ಥಿಗಳಿಂದ ನಡೆಯಲಿದೆ. ಬೆಳಿಗ್ಗೆ 9ರಿಂದ 11ರವರೆಗೆ ಶ್ರೀ ರಾಘವೇಂದ್ರ ರಾಯರ ಅಷ್ಟಾಕ್ಷರ ಮಂತ್ರದ ಸ್ವಾಹಾಕಾರ ಹೋಮವಿರುತ್ತದೆ ಎಂದರು.

ಬೆಲಿಗ್ಗೆ 10.30ಕ್ಕೆ ಪಾದಪೂಜೆ, ಕನಕಾಭಿಷೇಕ, ಲಕ್ಷ ಪುಷ್ಪಾರ್ಚನೆ, ಮಹಾ ಮಂಗಳಾರತಿ ನಡೆಯಲಿದೆ. ಸಂಜೆ 7.30ಕ್ಕೆ ಶ್ರೀ ಗುರುರಾಜರಿಗೆ ದೀಪೋತ್ಸವ, ಸ್ವಸ್ತಿವಾಚನ, ಮಹಾನೀರಾಜನ ನೆರವೇರಲಿದೆ. ಮಾ.11ರಂದು ಶ್ರೀ ಗಣಪತಿ, ನವಗ್ರಹ ಹೋಮ, ಜ.12ಕ್ಕೆ ಮನ್ಯುಸೂಕ್ತ ಪುರಶ್ಚರಣ ಹೋಮ, ಶ್ರೀ ಹರಿವಾಯುಸ್ತುತಿ ಹೋಮ, ಜ.13ರಂದು ಶ್ರೀ ಪವಮಾನ ಹೋಮ, ಜ.14ರಂದು ಶ್ರೀ ಹಯಗ್ರೀವ ಮತ್ತು ಶ್ರೀ ವೇದವ್ಯಾಸ ಮಂತ್ರಗಳ ಹೋಮ, ಜ.15ಕ್ಕೆ ಶ್ರೀ ಪುರುಷ ಸೂಕ್ತ, ಶ್ರೀ ಸೂಕ್ತ ಹೋಮ, ಜ.16ಕ್ಕೆ ಶ್ರೀ ಸುದರ್ಶನ ಹೋಮ, ಜ.17ಕ್ಕೆ ಶ್ರೀ ಧನ್ವಂತರಿ ಹೋಮ ನಡೆಯಲಿದೆ ಎಂದು ಅವರು ಹೇಳಿದರು.

ಸಮಿತಿಯ ಕಾರ್ಯದರ್ಶಿ ಕಂಪ್ಲಿ ಗುರುರಾಜಾಚಾರ್ ಮಾತನಾಡಿ, ಶ್ರೀ ರಾಘವೇಂದ್ರ ಸಪ್ತಾಹ ಕಾರ್ಯಕ್ರಮಕ್ಕೆ ಮಂತ್ರಾಲಯ ಕ್ಷೇತ್ರದ ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನದ ಅರ್ಚಕರಾದ ಶ್ರೀ ಅರ್ಚಕ ಪರಿಮಳಾಚಾರ್ಯ ಕುಟುಂಬದವರು ತಮ್ಮ ಮನೆಯಲ್ಲಿ ನಿತ್ಯ ಪೂಜೆಗೊಳ್ಳುವ ಶ್ರೀ ಗುರುರಾಯರ ಚಲ ಬೃಂದಾವನ ಮತ್ತು ಶ್ರೀ ಪ್ರಹ್ಲಾದರಾಜರ ವಿಗ್ರಹದೊಂದಿಗೆ ದಾವಣಗೆರೆ ನಗರಕ್ಕೆ ಆಗಮಿಸಿ, ಏಳು ದಿನಗಳ ಕಾಲ ಬೃಂದಾವನಕ್ಕೆ ಪೂಜಾ ವಿಧಿ ವಿಧಾನಗಳ ಜೊತೆಗೆ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.

ಸಪ್ತಾಹ ಏಳು ದಿನಗಳು ಮಂತ್ರಾಲಯದ ಶ್ರೀ ರಾಘವೇಂದ್ರ ಸಪ್ತಾಹ ಕಾರ್ಯಾಚರಣ ಸಮಿತಿ ಹಾಗೂ ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವ ಸಮಿತಿ ಕಾರ್ಯಕ್ರಮ ನಿರ್ವಹಣೆ ಮಾಡಲಿವೆ. ಏಳೂ ದಿನಗಳ ಕಾಲ ಬೆಳಿಗ್ಗೆ ಹಾಗೂ ಸಂಜೆ ವಿವಿಧ ಪೂಜಾ ಕೈಂಕರ್ಯಗಳು ಹಾಗೂ ಉಪನ್ಯಾಸಗಳು ನಡೆಯಲಿವೆ. ಶ್ರೀ ರಾಘವೇಂದ್ರ ಸ್ವಾಮಿಗಳ ಸಾಮಾಜಿಕ ಕಾರ್ಯಗಳು, ಕೊಡುಗೆಗಳು, ಮಹಿಮೆಯನ್ನು ಒಳಗೊಂಡ ಜೀವನ ಚರಿತ್ರೆಯ ಮಹತ್ವವನ್ನು ತಿಳಿಯುವ ಸುವರ್ಣ ಅವಕಾಶ ಇದಾಗಿದೆ. ಸರ್ವ ಭಕ್ತಾದಿಗಳು ಶ್ರೀ ರಾಘವೇಂದ್ರ ಸಪ್ತಾಹ-2024ರಲ್ಲಿ ಪಾಲ್ಗೊಂಡು, ತನು, ಮನ, ಧನಗಳ ಮೂಲಕ ಸೇವೆಯನ್ನು ಸಲ್ಲಿಸಿ, ಶ್ರೀ ರಾಘವೇಂದ್ರ ಸ್ವಾಮಿಗಳ ಉಪಾಸ್ಯಮೂರ್ತಿ ಶ್ರೀ ಮೂಲ ರಾಮಚಂದ್ರದೇವರ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ಅವರು ಮನವಿ ಮಾಡಿದರು.

ಸಮಿತಿಯ ಕೋಶಾಧ್ಯಕ್ಷ ಡಾ.ಶಶಿಕಾಂತ, ಖಜಾಂಚಿ ಜೆ.ಬದರಿ ನಾರಾಯಣ, ಪಿ.ಕೆ.ಪ್ರಕಾಶ, ಶ್ರೀನಿವಾಸ ನರಗನಹಳ್ಳಿ, ಪಲ್ಲಕ್ಕಿ ವಾಸುದೇವಾಚಾರ್, ಸತ್ಯಬೋಧ ಕುಲಕರ್ಣಿ ಇತರರು ಇದ್ದರು.