ಮಂತ್ರಾಲಯದಲ್ಲಿ ಅದ್ಧೂರಿಯಾಗಿ ನಡೆದ ಶ್ರೀರಾಮೋತ್ಸವ

| Published : Jan 23 2024, 01:47 AM IST

ಮಂತ್ರಾಲಯದಲ್ಲಿ ಅದ್ಧೂರಿಯಾಗಿ ನಡೆದ ಶ್ರೀರಾಮೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಅಯ್ಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ ಹಾಗೂ ಬಾಲರಾಮದೇವರ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಸುಕ್ಷೇತ್ರ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಿಂದ ಶ್ರೀರಾಮೋತ್ಸವವನ್ನು ಸೋಮವಾರ ಅದ್ದೂರಿಯಾಗಿ ಆಚರಿಸಲಾಯಿತು.

ರಾಯಚೂರು: ಅಯ್ಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ ಹಾಗೂ ಬಾಲರಾಮದೇವರ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಸುಕ್ಷೇತ್ರ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಿಂದ ಶ್ರೀರಾಮೋತ್ಸವವನ್ನು ಸೋಮವಾರ ಅದ್ದೂರಿಯಾಗಿ ಆಚರಿಸಲಾಯಿತು.

ಶ್ರೀರಾಮೋತ್ಸವ ನಿಮಿತ್ತ ಶ್ರೀಮಠದಲ್ಲಿ ಶೋಭಯಾತ್ರೆ, 36 ಅಡಿ ಎತ್ತರ ಅಭಯ ರಾಮನ ಮೂರ್ತಿಗೆ ಪುಷ್ಪಾರ್ಚನೆ, ದೀಪೋತ್ಸವ ಸೇರಿ ವಿವಿಧ ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಶ್ರೀರಾಮೋತ್ಸವ ನಿಮಿತ್ತ ಶ್ರೀಮಠದ ಆವರಣದಲ್ಲಿನ ಯೋಗಿಂದ್ರ ಸಭಾಮಂಟಪದಲ್ಲಿ ಶೋಭಾಯಾತ್ರೆಗೆ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಚಾಲನೆ ನೀಡಿದರು. ಗ್ರಾಮದೇವತೆ ಶ್ರೀಮಂಚಾಲಮ್ಮದೇವಿ ಸನ್ನಿಧಿ ಮಾರ್ಗದಿಂದ ಆರಂಭಗೊಂಡ ಶೋಭಾಯಾತ್ರೆ ಪಂಚಮುಖಿ ದರ್ಶನ, ವೆಂಕಟೇಶ್ವರಸ್ವಾಮಿ ಸನ್ನಿಧಾನ, ಶ್ರೀರಾಮಲಿಂಗೇಶ್ವರಸ್ವಾಮಿ ದೇವಾಲಯ,ಸಂಸ್ಕೃತ ವಿದ್ಯಾಪೀಠದ ಮಾರ್ಗವಾಗಿ ಸುಜೀಂದ್ರ ನಗರ, ನಾಗಲದಿನ್ನಿ ರಸ್ತೆ, ರಾಮಚಂದ್ರನಗರ, ಬಸ್‌ನಿಲ್ದಾಣ ಮಾರ್ಗವಾಗಿ ರಾಘವೇಂದ್ರಪುರ, ಸುಶಮೀಂದ್ರ ಪಾರ್ಕ್ವಾಗಿ ಮುಖ್ಯರಸ್ತೆ, ರಾಘವೇಂದ್ರ ವೃತ್ತ ಶ್ರೀಮಠದ ಮುಖ್ಯದ್ವಾರದಿಂದ ಶ್ರೀಮಠದವರೆಗೆ ವಿವಿಧ ವ್ಯಾದ್ಯಮೇಳಗಳೊಂದಿಗೆ ಅದ್ದೂರಿಯಾಗಿ ನಡೆಯಸಲಾಯಿತು.

ಶೋಭಾಯಾತ್ರೆಯಲ್ಲಿ ಮಂತ್ರಾಲಯದ ಶ್ರೀಮಠದ ಶಾಲೆಯ ಮಕ್ಕಳು, ಶ್ರೀಮಠದ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು. ಅಲ್ಲದೇ ಅನೇಕ ಭಾಗಗಳಿಂದಲೂ ಶ್ರೀರಾಯರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ನಂತರ ಸುಕ್ಷೇತ್ರದ ಹೊರವಲಯದಲ್ಲಿನ ಇತ್ತೀಚೆಗೆ ಪ್ರತಿಷ್ಠಾಪಿಸಿರುವ 52 ಅಡಿ ಪೀಠದ ಸಮೇತದ 36 ಅಡಿ ಅಭಯ ರಾಮನ ಮೂರ್ತಿಗೆ ಕೇನ್‌ ಮುಖಾಂತರ ತೆರಳಿದ ಶ್ರೀಗಳು ಪುಷ್ಪಾರ್ಚನೆಯನ್ನು ಮಾಡಿ ವಿಶೇಷ ಪೂಜೆಯನ್ನು ನೆರವೇರಿಸಿದರು.

ಸುಮಾರು 6 ಎಕರೆ ಪ್ರದೇಶದಲ್ಲಿ ಅಭಯ ರಾಮನ ಮಂದಿರವನ್ನು ನಿರ್ಮಿಸಲಾಗುತ್ತಿದ್ದು, ಇತ್ತೀಚಗಷ್ಟೇ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು ಇಂದು ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಮೂರ್ತಿಗೆ ವಿಶೇಷ ಪೂಜೆಯನ್ನು ಮಾಡಲಾಯಿತು.

ಸಂಜೆ ಶ್ರೀಮಠದ ಮುಖ್ಯದ್ವಾರದ ಮಾರ್ಗದಲ್ಲಿ ದೀಪೋತ್ಸವವು ನಡೆಯಿತು. ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ದೀಪೋತ್ಸವಕ್ಕೆ ಚಾಲನೆ ನೀಡಿದರು ನಂತರ ಮಧ್ವಮಾರ್ಗದುದ್ದಕ್ಕು ಭಕ್ತರು ದೀಪವನ್ನು ಹಚ್ಚಿ ಜೈ ಶ್ರೀರಾಮ್‌ ಘೋಷಣೆ ಕೂಗಿದರು.