ಬೀದರ್‌ನಲ್ಲಿ 21, 22ರಂದು ಶ್ರೀರಾಮೋತ್ಸವ: ರಾಜಶೇಖರ ಶಿವಾಚಾರ್ಯರು

| Published : Jan 18 2024, 02:06 AM IST

ಸಾರಾಂಶ

ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಬೀದರ್‌ನ ಸಾಯಿ ಸ್ಕೂಲ್ ಆವರಣದಲ್ಲಿ ಮಠಾಧೀಶರ ಒಕ್ಕೂಟ, ರಾಮಲೀಲಾ ಉತ್ಸವ ಸಮಿತಿಯಿಂದ ಆಯೋಜನೆ. ಜ.21ರಂದು ಸಂಜೆ 5 ಗಂಟೆಗೆ ಬೆಂಗಳೂರಿನ ಕಲಾವಿದರಿಂದ ಭಕ್ತಿಯ ಜಾಗರಣ ನಡೆಯಲಿದೆ. ಜ.22ರಂದು ಸಂಜೆ 5.30ಕ್ಕೆ ರಾಮನ ಮೂರ್ತಿಗೆ ಅಭಿಷೇಕ, ಹನುಮಾನ ಚಾಲೀಸಾ ಪಠಣ ಜರುಗಲಿದೆ.

ಕನ್ನಡಪ್ರಭ ವಾರ್ತೆ ಬೀದರ್

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನೂರಾರು ವರ್ಷಗಳ ಕನಸು ನನಸಾಗುವ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಬೀದರ್‌ನಲ್ಲಿ ಜ.21 ಮತ್ತು 22ರಂದು ಎರಡು ದಿನಗಳವರೆಗೆ ನಗರದ ಸಾಯಿ ಸ್ಕೂಲ್ ಪ್ರಾಂಗಣದಲ್ಲಿ ಶ್ರೀರಾಮೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾ ಮಠಾಧೀಶರ ಒಕ್ಕೂಟದ ಪೂಜ್ಯರಾದ ಮೇಹಕರನ ರಾಜಶೇಖರ ಶಿವಾಚಾರ್ಯರು ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಮಠಾಧೀಶರ ಒಕ್ಕೂಟ ಹಾಗೂ ರಾಮಲೀಲಾ ಉತ್ಸವ ಸಮಿತಿಯಿಂದ ಆಯೋಜಿಸಲಾಗುತ್ತಿರುವ ಕಾರ್ಯಕ್ರಮದಲ್ಲಿ ಜ.21ರಂದು ಸಂಜೆ 5 ಗಂಟೆಗೆ ಬೆಂಗಳೂರಿನ ಕಲಾವಿದರಿಂದ ಭಕ್ತಿಯ ಜಾಗರಣ ನಡೆಯಲಿದೆ.

ಜ.22ರಂದು ಸಂಜೆ 5.30ಕ್ಕೆ ರಾಮನ ಮೂರ್ತಿಗೆ ಅಭಿಷೇಕ, ಹನುಮಾನ ಚಾಲೀಸಾ ಪಠಣ ಜರುಗಲಿದೆ. ಸುಮಾರು 498 ಮಕ್ಕಳನ್ನು ವಿವಿಧ ವೇಷಭೂಷಣದಲ್ಲಿ ಸ್ತಬ್ಧ ಚಿತ್ರಗಳ ರೂಪದಲ್ಲಿ ತಯಾರು ಮಾಡಲಾಗುವುದು. ಅವರಿಂದ ರಾಮಲೀಲಾ ನಡೆಯುವುದು. ಈ ಕಾರ್ಯಕ್ರಮ ಯಾವುದೇ ಪಕ್ಷಕ್ಕೆ ಸೀಮಿತವಾಲ್ಲ. ಎಲ್ಲರೂ ಭಕ್ತಿಯಿಂದ ಭಾಗವಹಿಸುವಂತೆ ಅವರು ಮನವಿ ಮಾಡಿದರು. ಮನೆ-ಮನೆ ಶೃಂಗಾರ ಮಾಡಿ ಪೂಜೆ ಸಲ್ಲಿಸಿ

ಅಂದು ಪ್ರತಿ ಮನೆಯನ್ನು ರಂಗೋಲಿ ಹಾಕಿ ಶೃಂಗರಿಸಿ, ದೀಪಾವಳಿ ಹಬ್ಬದಂತೆ ಪೂಜೆ ಸಲ್ಲಿಸಿ ತಳಿರು ತೋರಣದೊಂದಿಗೆ ಅಲಂಕರಿಸಬೇಕು. ಎರಡು ದಿನ ಪ್ರತಿ ಮನೆ ಮೇಲೆ ಭಗವಾ ಧ್ವಜ ಹಾರಿಸಬೇಕೆಂದರು.

50 ಅಡಿ ಎತ್ತರದ ರಾಮನ ಕಟೌಟ್ಎರಡು ದಿನಗಳ ವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಸುಮಾರು 50 ಅಡಿ ಎತ್ತರದ ಶ್ರೀರಾಮನ ಕಟೌಟ್‌ ಹಾಕಲಾಗುವುದು. ಈ ಸಂದರ್ಭದಲ್ಲಿ 1990 ಹಾಗೂ 1992ರಲ್ಲಿ ಪಾಲ್ಗೊಂಡ 50 ಕಾರಸೇವಕರನ್ನು ಆಮಂತ್ರಿಸಿ ಅವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದಲ್ಲಿ ಬೆಂಗಳೂರು ಅಲ್ಲದೇ ಸ್ಥಳೀಯ ಕಲಾವಿದರಿಗೂ ಅವಕಾಶ ಕಲ್ಪಿಸಲಾಗುವುದು ಎಂದು ಠಾಕೂರ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಯಶಾಂತಲಿಂಗ ಮಹಾಸ್ವಾಮಿ ಹೀರನಾಗಾಂವ, ಡಾ. ಶಂಭುಲಿಂಗ ಶಿವಾಚಾರ್ಯರು ಡೋಣಗಾಪೂರ, ಶಾಂತವೀರ ಶಿವಾಚಾರ್ರು ಗಡಿಗೌಡಗಾಂವ,ಸಿದ್ದೇಶ್ವರ ಶಿವಾಚಾರ್ಯರು ಕಿಟ್ಟಾ, ಹಾವಲಿಂಗ ಶಿವಾಚಾರ್ಯರು, ಹಾಲಬರ್ಗಾ, ಪಂಡಿತಾರ್ಧ್ಯ ಶಿವಾಚಾರ್ಯರು ಹಳ್ಳಿಖೇಡ, ಚನ್ನಮಲ್ಲ ಸ್ವಾಮಿಗಳು ಹುಡಗಿ, ರುದ್ರಮುನಿ ಶಿವಾಚಾರ್ಯ ರಾಜೇಶ್ವರ, ವಿಶ್ವ ಹಿಂದು ಪರಿಷತ್‌ನ ರಾಮಕೃಷ್ಮ ಸಾಳೆ, ಬಿಜೆಪಿ ಮುಖಂಡರಾದ ಗುರುನಾಥ ಕೊಳ್ಳೂರ, ಮಾಜಿ ಶಾಸಕ ಸುಭಾಷ ಕಲ್ಲೂರ, ಬಾಬು ವಾಲಿ, ನಾಗರಾಜ ಕರ್ಪೂರ, ಗಿರಿರಾಜ, ಚಂದ್ರಶೇಖರ ಗಾದಾ, ಮಹೇಶ್ವರ ಸ್ವಾಮಿ ಇದ್ದರು.ರಾಮನನ್ನು ವಿರೋಧಿಸುವವರ ಕಣ್ಣಿಗೆ ಕಾಮಾಲೆ

ರಾಮನನ್ನು ಗೊಂಬೆ ಎಂದು ಕಾಂಗ್ರೆಸ್‌ನವರು ಹೇಳುತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಪೂಜ್ಯರು, ಯಾರು ರಾಮನನ್ನು ವಿರೋಧ ಮಾಡುತ್ತಾರೆ ಅವರೆಲ್ಲ ಕಣ್ಣಿಗೆ ಕಾಮಾಲೆ ಆಗಿದೆ. ಹೀಗಾಗಿ ಒಬ್ಬ ದೇವರನ್ನು ಗೊಂಬೆ ಎನ್ನುತ್ತಿದ್ದಾರೆ ಎಂದು ಮೇಹಕರನ ರಾಜಶೇಖರ ಶಿವಾಚಾರ್ಯರು ತಿಳಿಸಿದರು.