ಸಾರಾಂಶ
ಮಂದಿರ ಹೋರಾಟದ ದಿನದಿಂದಲೂ ಕಾಂಗ್ರೆಸ್ ದ್ವಂದ್ವದಲ್ಲಿದೆ. ದೇಶಕ್ಕಿಂತ ಮತ ಬ್ಯಾಂಕ್ ಬಗ್ಗೆ ಕಾಂಗ್ರೆಸ್ ಹಾಗೂ ಪಕ್ಷದ ಮುಖಂಡರು ವಿಚಾರ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟೀಕಿಸಿದರು.
ಧಾರವಾಡ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷ ಶ್ರೀರಾಮನ ವಿಷಯದಲ್ಲಿ ಯಾವತ್ತೂ ಗೊಂದಲದಲ್ಲಿದ್ದು, ಶ್ರೀರಾಮನ ಶಾಪ ಅವರಿಗೆ ತಟ್ಟಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂದಿರ ಹೋರಾಟದ ದಿನದಿಂದಲೂ ಕಾಂಗ್ರೆಸ್ ದ್ವಂದ್ವದಲ್ಲಿದೆ. ದೇಶಕ್ಕಿಂತ ಮತ ಬ್ಯಾಂಕ್ ಬಗ್ಗೆ ಕಾಂಗ್ರೆಸ್ ಹಾಗೂ ಪಕ್ಷದ ಮುಖಂಡರು ವಿಚಾರ ಮಾಡುತ್ತಿದ್ದಾರೆ. ಹೀಗಾಗಿ ಅಯೋಧ್ಯೆಗೆ ಹೋದರೆ ಹೇಗೆ? ಪರಿಣಾಮ ಏನು ಎಂದು ಯೋಚಿಸುತ್ತಿದ್ದಾರೆ.
ಒಟ್ಟಾರೆ ಕಾಂಗ್ರೆಸ್ ಪಕ್ಷ ಈ ವಿಷಯದಲ್ಲಿ ಕನಫ್ಯೂಸ್ ಆಗಿದೆ. ಸೋಮವಾರ ರಜೆ ನೀಡುವ ಬಗ್ಗೆ ಸಿದ್ದರಾಮಯ್ಯ ರಾಹುಲ್ ಗಾಂಧಿಯನ್ನು ಕೇಳಿ ತೀರ್ಮಾನ ತೆಗೆದುಕೊಳ್ಳುವ ಸ್ಥಿತಿಗೆ ಬಂದಿದ್ದಾರೆ.
ಹೀಗಾಗಿಯೇ ದೇಶದಲ್ಲಿ ಮೂರು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಸರ್ಕಾರವಿದೆ. ಬರುವ ದಿನಗಳಲ್ಲಿ ಅಲ್ಲೂ ಇರೋದಿಲ್ಲ ಎಂದರು.
ಕಾಂಗ್ರೆಸ್ ನಾಯಕರಿಗೆ ರಾಮ ಕನಸಲ್ಲಿ ಬಂದ ವಿಚಾರವಾಗಿ ಮಾತನಾಡಿದ ಅವರು, ಅವರಿಗೆ ರಾಮ ಕನಸಲ್ಲಿ ಬಂದಿದ್ದ ಎನ್ನುವುದೇ ಅದ್ಭುತ. ರಾಮ ನಿಮಗೆ ಸದ್ಬುದ್ಧಿ ಬರಲಿ ಎಂದು ಹೇಳಿರಬೇಕು.
ಇಡೀ ಜಗತ್ತಿನಲ್ಲಿ ಎಲ್ಲರೂ ಸಂತೋಷ ಪಡುತ್ತಿದ್ದಾರೆ. ನೀವ್ಯಾಕೆ ಹುಚ್ಚರಂತೆ ಮಾಡುತ್ತಿದ್ದೀರಿ ಎಂದು ರಾಮ ಅವರನ್ನು ಕೇಳಿರಬೇಕು. ಅವರಿಗೆ ರಾಮನೇ ಸದ್ಬುದ್ಧಿ ಕೊಡಲಿ ಎಂದರು.
ಮುನೇನಕೊಪ್ಪ ಬಿಜೆಪಿಯಲ್ಲೇ ಉಳಿಯುವುದಾಗಿ ಹೇಳಿದ್ದಾರೆ. ಮಾಜಿ ಶಾಸಕ, ಬಿಜೆಪಿ ಮುಖಂಡ ಶಂಕರ ಪಾಟೀಲ ಮುನೇನಕೊಪ್ಪ ಬಿಜೆಪಿಯಲ್ಲಿಯೇ ಉಳಿಯುವುದಾಗಿ ಹೇಳಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜ. 31ರ ವರೆಗೆ ಎಲ್ಲೂ ಗುರುತಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ಹೀಗಾಗಿ ಜ. 31ರ ನಂತರ ನೋಡೋಣ ಎಂದರು. ಕುಮಾರಸ್ವಾಮಿ ಜೊತೆ ಯಡಿಯೂರಪ್ಪ ಸಭೆ ವಿಚಾರವಾಗಿ ಮಾತನಾಡಿದ ಅವರು, ನನಗೆ ಯಡಿಯೂರಪ್ಪ ಕರೆ ಮಾಡಿದ್ದರು.
ವಿಧಾನಪರಿಷತ್ ಸದಸ್ಯರ ಚುನಾವಣೆ ಕುರಿತು ಚರ್ಚೆ ಆಗುತ್ತಿದೆ. ಆರು ವಿಧಾನ ಪರಿಷತ್ ಸ್ಥಾನಗಳಿವೆ. ಅದಕ್ಕಾಗಿ ಸಭೆ ಮಾಡುತ್ತಿದ್ದಾರೆ. ಆದರೆ, ಮಂಡ್ಯ ಲೋಕಸಭಾ ಟಿಕೆಟ್ ಬಗ್ಗೆ ಚರ್ಚೆ ಆಗಿಲ್ಲ ಎಂದರು.