ಸಾರಾಂಶ
ತಾಲೂಕಿನ ಕಂದಿಕೆರೆ ಗ್ರಾಮದ ಶ್ರೀ ಶಿವಧೂತ ಸ್ವಾಮೀಜಿ ಆಶ್ರಮದಲ್ಲಿ ಸ್ವಾಮೀಜಿಯವರ ಗದ್ದುಗೆಯ ನೂತನ ಕಟ್ಟಡ ಉದ್ಘಾಟನೆಯನ್ನು ಕಬೀರಾನಂದ ಮಠದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ನೇರವೇರಿಸಿದರು.
ಕನ್ನಡಪ್ರಭ ವಾರ್ತೆ ಹಿರಿಯೂರು
ತಾಲೂಕಿನ ಕಂದಿಕೆರೆ ಗ್ರಾಮದ ಶ್ರೀ ಶಿವಧೂತ ಸ್ವಾಮೀಜಿ ಆಶ್ರಮದಲ್ಲಿ 44ನೇ ವರ್ಷದ ಪುಣ್ಯ ಶಿವಗಣಾರಾಧನೆ ಹಾಗೂ ಶ್ರೀ ಸುಖಮುನಿ ಸ್ವಾಮೀಜಿಯ ಗದ್ದುಗೆಯ ನೂತನ ಕಟ್ಟಡ ಉದ್ಘಾಟನೆಯನ್ನು ಕಬೀರಾನಂದ ಮಠದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ನೇರವೇರಿಸಿದರು.ಗದ್ದುಗೆ ಕಟ್ಟಡ ಉದ್ಘಾಟನೆ ಕುರಿತು ಜಗದೀಶ್ ಕಂದಿಕೆರೆ ಮಾತನಾಡಿ, ಶ್ರೀ ಶಿವಧೂತ ಸ್ವಾಮೀಜಿ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಜನಿಸಿ ಸದ್ಗುರು ಅಡವಿಸಿದ್ದರಿಗೆ ಶಿಷ್ಯರಾಗಿ ಅರಿವಿನಿಂದ ಆತ್ಮಶೋದನೆ ಮಾಡಿಕೊಂಡು ದಾವಣಗೆರೆ ಬಳಿಯ ಕೈದಿಹಳ್ಳಿಗೆ ಬಂದು ಪುಣ್ಯ ಪುರುಷರೆನಿಸಿಕೊಂಡರು. ಅಲ್ಲಿಂದ ಚಿತ್ರದುರ್ಗ ಬಳಿ ಮದಕರಿಪುರದಲ್ಲಿ ಶ್ರೀ ಮಾರುತಿಗುಡಿಯಲ್ಲಿ ಯೋಗಮಗ್ನರಾದ ಸಂದರ್ಭದಲ್ಲಿ ಆ ಊರಿನ ಜನರೆಲ್ಲ ರೋಗ ರುಜಿನಗಳಿಂದ ಬಳಲುತ್ತಿದ್ದುದನ್ನು ಕಂಡು ಅವರಿಗೆ ವಿಭೂತಿ ಭಸ್ಮ ನೀಡಿ ಅವರ ಕಾಯಿಲೆ, ಕಷ್ಟಗಳನ್ನೆಲ್ಲಾ ಪರಿಹರಿಸಿ ಪವಾಡ ಪುರುಷರಾದರು. ಅಲ್ಲಿನ ಭಕ್ತರೆಲ್ಲರೂ ಸೇರಿ ಮಠವೊಂದನ್ನು ಕಟ್ಟಿ ಗುರುಗಳನ್ನು ಕರೆದೊಯ್ದರು.
ಸ್ವಾಮೀಜಿಯ ಪ್ರಭಾವ ದಿನೆದಿನೇ ಹೆಚ್ಚುತ್ತಿದ್ದು ತಾಲೂಕಿನ ಕಂದಿಕೆರೆ ಗ್ರಾಮದಲ್ಲಿ ಬೀಕರ ಬರಗಾಲ ಆವರಿಸಿದ್ದಂತಹ ಸಮಯದಲ್ಲಿ ಇಲ್ಲಿಗೂ ಬಂದು ಭಕ್ತರ ಎದುರೇ ಮಳೆತರಿಸಿದ್ದು ಎಲ್ಲರಿಗೂ ವಿಸ್ಮಯವೆನಿಸಿತು. ಸ್ವಾಮೀಜಿ ಕಂದಿಕೆರೆಯಲ್ಲಿಯೇ ಜೀವೈಕ್ಯವಾಗಿದ್ದು ಅಂದಿನಿಂದ ಇಂದಿನವರೆಗೂ ಕಂದಿಕೆರೆ ಗ್ರಾಮದಲ್ಲಿ ಮಠ ನಿರ್ಮಾಣ ಮಾಡಿ ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ಗದಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಿಂದ ಶಿಷ್ಯರು ಮತ್ತು ಭಕ್ತರು ಆಗಮಿಸುವ ಪರಿಪಾಠ ಬೆಳೆದಿದೆ ಎಂದರು.ಈ ಸಂದರ್ಭದಲ್ಲಿ ಎಂಟಿ ತಿಪ್ಪೇಸ್ವಾಮಿ, ಶ್ರೀಕಂಠಪ್ಪ, ಇ.ಸಿದ್ದಯ್ಯ, ಕೆ.ಬಸವರಾಜು, ಕಂಬಣ್ಣ,ಹೋರಕೇರಪ್ಪ ಹಾಗೂ ಗ್ರಾಮಸ್ಥರು ಮತ್ತು ಭಕ್ತರು ಹಾಜರಿದ್ದರು.