ಕನ್ನಡಪ್ರಭ ವಾರ್ತೆ ನಾಗಮಂಗಲ

ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ತಾಲೂಕಿನ ಹರಳಕೆರೆ ಗ್ರಾಮದಲ್ಲಿ ಭಾನುವಾರ ಶ್ರೀಸೀತಾಪತಿ ಜಾತ್ರಾ ಮಹೋತ್ಸವ ಮತ್ತು ಧೂಪಸೇವೆ ಕಾರ್ಯ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ನೆರವೇರಿತು.

ಗ್ರಾಮದ ಶ್ರೀಮಂಚಮ್ಮದೇವಿ ದೇವಸ್ಥಾನದಿಂದ ಶ್ರೀಸೀತಾಪತಿ ಸ್ವಾಮಿಯ ಬಿರುದು ಮತ್ತು ಪೂಜಾ ಸಾಮಗ್ರಿಗಳ ಹೊರೆಹೊತ್ತ ದೇವರ ಒಕ್ಕಲುಗಳು ಪಾದಯಾತ್ರೆಯಲ್ಲಿ ಗ್ರಾಮದ ಹೊರ ವಲಯದಲ್ಲಿರುವ ಸೀತಾಪತಿ ದೇವರ ಸನ್ನಿಧಾನಕ್ಕೆ ಬಂದ ನಂತರ ಅರ್ಚಕರು ಶ್ರೀರಾಮದೇವರಿಗೆ ವಿಶೇಷ ಪೂಜಾ ವಿಧಿವಿಧಾನ ಹಾಗೂ ಧಾರ್ಮಿಕ ಕೈಂಕರ್ಯಗಳನ್ನು ನಡೆಸಿದರು.

ನಂತರ ಸೀತಾಮಾತೆ ಶ್ರೀರಾಮ ಲಕ್ಷ್ಮಣ ಮತ್ತು ಹನುಮಂತ ದೇವರಿಗೆ ಮಹಾ ಮಂಗಳಾರತಿ, ನಾಮಸೇವೆ, ಧೂಪಸೇವೆ ನಡೆಯಿತು. ಜಿಲ್ಲೆ ಹಾಗೂ ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತರು ಹರಕೆ ರೂಪದಲ್ಲಿ ದೇವರಿಗೆ ಕಿಲೋ ಗಟ್ಟಲೆ ಸಾಮ್ರಾಣಿ ಮತ್ತು ಕರ್ಪೂರ ಸಮರ್ಪಿಸಿದರು.

ಸೀತಾಪತಿ ದೇವರಿಗೆ ಹೂ ಹಣ್ಣು, ತೆಂಗಿನಕಾಯಿ, ಊದುಬತ್ತಿಯ ಪೂಜೆ ಪುರಸ್ಕಾರಗಳಿಲ್ಲ. ಬದಲಿಗೆ ಸಾಮ್ರಾಣಿ ಹಾಗೂ ಕರ್ಪೂರವನ್ನೇ ಅಧಿಕ ಪ್ರಮಾಣದಲ್ಲಿ ಹರಕೆ ರೂಪದಲ್ಲಿ ಅರ್ಪಿಸಿದ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು. ಮಧ್ಯಾಹ್ನ ೧.೩೦ ಗಂಟೆಗೆ ಧೂಪದ ರಾಶಿಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಿತು. ನಂತರ ಜಾತ್ರೆಗೆ ಆಗಮಿಸಿದ್ದ ಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಸಲಾಯಿತು. ಮಹಾಶಿವರಾತ್ರಿ: ಶಿವ ದೇಗುಲಗಳಲ್ಲಿ ವಿಶೇಷ ಪೂಜೆ, ಅಲಂಕಾರ


ಕನ್ನಡಪ್ರಭ ವಾರ್ತೆ ಮಳವಳ್ಳಿ

ಮಹಾಶಿವರಾತ್ರಿ ಪ್ರಯುಕ್ತ ಭಾನುವಾರ ಪಟ್ಟಣದ ಕೋಟೆ ಶ್ರೀಗಂಗಾಧರೇಶ್ವರಸ್ವಾಮಿ, ಮದ್ದೂರು ರಸ್ತೆಯ ಶ್ರೀ ಮಹದೇಶ್ವರಸ್ವಾಮಿ ದೇವಸ್ಥಾನ ಸೇರಿದಂತೆ ವಿವಿಧೆಡೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.

ಪಟ್ಟಣದ ಪುರಾತನ ಕೋಟೆ ಶ್ರೀಗಂಗಾಧರೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ಬೆಳಗಿನ ಜಾವ ವಿಶೇಷ ಹೂಮ ಹವನ ನಡೆಸಿ ದೇವರಿಗೆ ಅಭಿಷೇಕ ನೇರವೇರಿಸಲಾಯಿತು. ಶಿವಲಿಂಗಕ್ಕೆ ಹಲವು ಬಗೆಯ ಹೂಗಳಿಂದ ಮಾಡಿದ್ದ ಅಲಂಕಾರ ಭಕ್ತರ ಗಮನ ಸೆಳೆಯಿತು.

ಬೆಳಗ್ಗೆಯಿಂದಲೇ ದೇವಸ್ಥಾನಕ್ಕೆ ಆಗಮಿಸಿದ ಸಾವಿರಾರು ಮಂದಿ ಸದರಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದುಕೊಂಡರು. ಪೂಜಾ ಕೈಂಕರ್ಯಗಳನ್ನು ಅರ್ಚಕ ಸತೀಶ್ ನೆರವೇರಿಸಿದರು.

ಶ್ರೀಗಂಗಾಧರೇಶ್ವರ ದೇವಸ್ಥಾನಕ್ಕೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಭೇಟಿ ನೀಡಿ ದೇವರ ದರ್ಶನ ಪಡೆದರು.

ತಾಲೂಕಿನ ದುಗ್ಗನಹಳ್ಳಿಯ ಶ್ರೀಮಹದೇಶ್ವರಸ್ವಾಮಿ ದೇವಸ್ಥಾನದಲ್ಲೂ ಸಹ ಶಿವರಾತ್ರಿ ಸಂಭ್ರಮ ಜೋರಾಗಿತ್ತು. ಅಕ್ಕಪಕ್ಕದ ಹತ್ತಾರು ಗ್ರಾಮಗಳ ನೂರಾರು ಮಂದಿ ದೇವಸ್ಥಾನಕ್ಕೆ ಆಗಮಿಸಿ ದೇವೆ ದರ್ಶನ ಪಡೆದುಕೊಂಡರು. ಪಟ್ಟಣದ ಹೊರವಲಯದ ಶ್ರೀ ದಂಡಿನ ಮಾರಮ್ಮ, ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನ, ತಾಲೂಕಿನ ಕಲ್ಲುವೀರನಹಳ್ಳಿ-ಕಂದೇಗಾಲದ ಶ್ರೀ ಮತ್ತಿತಾಳೇಶ್ವರಸ್ವಾಮಿ, ಮಾದಹಳ್ಳಿಯ ಶ್ರೀ ಬಸವೇಶ್ವರ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು.