Shri Vidyasreesha Theertha Swamiji, 10th Chaturmasyaವ್ಯಾಸರಾಜರು ಕೇವಲ ಆಚಾರ್ಯ ಮಧ್ವರ ಪೀಠದ ಯತಿಗಳು ಮಾತ್ರವಾಗಿರದೇ ವಿಜಯನಗರ ಸಾಮ್ರಾಜ್ಯವನ್ನೂ ಸಮರ್ಥವಾಗಿ ಆಳಿ, ಪ್ರಜಾಪ್ರೀತಿಯನ್ನು ಸಂಪಾದಿಸಿದ್ದರು.
ಕನ್ನಡಪ್ರಭ ವಾರ್ತೆ ಮೈಸೂರುಕರ್ನಾಟಕದ ಇತಿಹಾಸ ಮತ್ತು ಪರಂಪರೆಗೆ ಶ್ರೀ ವ್ಯಾಸರಾಜರ ಕೊಡುಗೆ ಅನನ್ಯವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ಹೇಳಿದರು. ಸೋಸಲೆ ಶ್ರೀ ವ್ಯಾಸರಾಜರ ಮಠಾಧೀಶರಾದ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ 10ನೇ ಚಾತುರ್ಮಾಸ್ಯ ವ್ರತ ಸಮಾರೋಪ ಅಂಗವಾಗಿ ತಿರುಮಕೂಡಲು ಶ್ರೀ ಮಠದಲ್ಲಿ ಹಮ್ಮಿಕೊಂಡಿದ್ದ ಹಸಿ ದರ್ಬಾರ್ ಮತ್ತು ಸೀಮೋಲ್ಲಂಘನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ವ್ಯಾಸರಾಜರು ಕೇವಲ ಆಚಾರ್ಯ ಮಧ್ವರ ಪೀಠದ ಯತಿಗಳು ಮಾತ್ರವಾಗಿರದೇ ವಿಜಯನಗರ ಸಾಮ್ರಾಜ್ಯವನ್ನೂ ಸಮರ್ಥವಾಗಿ ಆಳಿ, ಪ್ರಜಾಪ್ರೀತಿಯನ್ನು ಸಂಪಾದಿಸಿದ್ದರು. ನೂರಾರು ಕೆರೆ, ಕಟ್ಟೆಗಳನ್ನು ನಿರ್ಮಿಸಿದರು. ಅವು ಇಂದಿಗೂ ಕೃಷಿಕರಿಗೆ ಜೀವನಾಡಿಯಾಗಿವೆ. ಒಬ್ಬ ಸನ್ಯಾಸಿ ನಾಡಿಗೆ ಏನೆಲ್ಲಾ ಮಾಡಬಹುದು ಎಂಬುದನ್ನು ವ್ಯಾಸರಾಜರು ತೋರಿಸಿಕೊಟ್ಟಿದ್ದಾರೆ. ಇದೇ ಪರಂಪರೆಯ ಸೋಸಲೆ ವ್ಯಾಸರಾಜರ ಮಠವು ಇಂದಿಗೂ ಸಮಾಜಮುಖಿ ಕಳಕಳಿ ಇರಿಸಿಕೊಂಡಿರುವುದು ಮಾದರಿಯಾಗಿದೆ ಎಂದರು.ಶ್ರೀ ಮಠದಿಂದ ಕಳೆದ ವರ್ಷ ಟಿ. ನರಸೀಪುರ ತಾಲೂಕಿನ ಕುಗ್ರಾಮಗಳ ಜನರ ಆರೋಗ್ಯ ಸೇವೆಗೆ ಆರಂಭಿಸಿದ ವ್ಯಾಸ ಶ್ರೀಶ ಉಚಿತ ಆರೋಗ್ಯ ಸೇವಾ ಅಂಬುಲೆನ್ಸ್ ಸಾವಿರಾರು ಜನರ ಆರೋಗ್ಯ ರಕ್ಷಣೆ ಮಾಡಿದೆ. ಕರ್ನಾಟಕ- ಆಂಧ್ರ ಗಡಿಯ ವ್ಯಾಸ ಸಮುದ್ರ ಕೆರೆ ಅಭಿವೃದ್ಧಿ ಮಾಡಲಾಗುತ್ತಿದೆ. ವಿದ್ಯಾಪೀಠ ನಿರ್ವಹಣೆ, ಶಾಲಾ ಮಕ್ಕಳಿಗೆ ಸವಲತ್ತು ವಿತರಣೆ- ಹೀಗೆ ಶ್ರೀ ವಿದ್ಯಾಶ್ರೀಶ ತೀರ್ಥರು ನೂರೆಂಟು ಚಟುವಟಿಕೆ ಮೂಲಕ ಜನಹಿತ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.ಸ್ವಾಮೀಜಿ ಸಂದೇಶ : ಅನುಗ್ರಹ ಸಂದೇಶ ನೀಡಿದ ಸೋಸಲೆ ಶ್ರೀ ಶ್ರೀ ವಿದ್ಯಾಶ್ರೀಶ ತೀರ್ಥರು, ಚಾತುರ್ಮಾಸ ವ್ರತದ ಸಂದರ್ಭ ಅನೇಕ ಧಾರ್ಮಿಕ ಕಾರ್ಯಗಳು ನೆರವೇರಿದ್ದು, ಅವೆಲ್ಲವೂ ಶ್ರೀ ಗೋಪಾಲಕೃಷ್ಣ ದೇವರಿಗೆ ಸಮರ್ಪಣೆಗೊಂಡಿವೆ ಎಂದರು. ಮಹಾಗುರು ಶ್ರೀ ವ್ಯಾಸರಾಜರು ತೋರಿಸಿಕೊಟ್ಟ ಮಾರ್ಗದಲ್ಲಿ ಸಾಗೋಣ. ಜ್ಞಾನ, ಭಕ್ತಿ ಮತ್ತು ವೈರಾಗ್ಯ ಸಾಧನೆ ಮಾಡೋಣ ಎಂದರು. ಟಿ. ನರಸೀಪುರದ ಜೆಎಂಎಫ್ಸಿ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶ ಎಚ್.ಆರ್. ಸಚಿನ್, ಹಿರಿಯ ನ್ಯಾಯಾಧೀಶರಾದ ಪರ್ವೀನ್ ಬಂಕಾಪುರ, ಸಹಾಯಕ ಸಿವಿಲ್ ನ್ಯಾಯಾಧೀಶರಾದ ಎನ್.ನಿವೇದಿತಾ, ಹಿರಿಯ ವಿದ್ವಾಂಸ ಆನಂದತೀರ್ಥಾಚಾರ್ಯ ನಾಗಸಂಪಿಗೆ, ಮಠಾಧಿಕಾರಿ ಪ್ರಸನ್ನಾಚಾರ್, ಮಠದ ವ್ಯವಸ್ಥಾಪಕ ಶ್ರೀಧರ, ಬಲಸೇವೆ ಕೃಷ್ಣಾಚಾರ್ಯ, ಗುರುಗಳ ಆಪ್ತ ಕಾರ್ಯದರ್ಶಿ ಅಭಿಜಿತ್ ಇದ್ದರು.ಸಂಸ್ಥಾನ ಪೂಜೆ- ಹಸಿ ದರ್ಬಾರ್: ಚಾತುರ್ಮಾಸ ಸಮಾರೋಪದಲ್ಲಿ ಸ್ವಾಮೀಜಿ ಸಂಸ್ಥಾನ ಪ್ರತಿಮಾ ಶ್ರೀ ಮೂಲ ಗೋಪಾಲಕೃಷ್ಣದೇವರ ಪೂಜೆ ನೆರವೇರಿಸಿ, ಪರಂಪರೆಯ ಹಿರಿಯ ಗುರುಗಳ ವೃಂದಾವನಗಳಿಗೆ ಹಸ್ತೋದಕ ಸಮರ್ಪಣೆ ಮಾಡಿದರು. ವಿದ್ವಾಂಸರಿಂದ ವೇದಘೋಷವಾದನಂತರ ವ್ರತ ಸಮಾಪನೆ ಮಾಡಿದರು. ನಂತರ ದವಸ, ಧಾನ್ಯ ಮತ್ತು ನಾಣ್ಯಗಳಿಂದ ಶ್ರೀಗಳಿಗೆ ತುಲಾಭಾರ ನಡೆಯಿತು.ವಿಶೇಷ ವೇದಿಕೆಯಲ್ಲಿ ಶ್ರೀಗಳು ಸಾಂಪ್ರದಾಯಿಕ ವಸ್ತ್ರ, ಪೇಟಾ ಧರಿಸಿ ಹಸಿ ದರ್ಬಾರ್ ನಡೆಸಿ, ನೂರಾರು ಭಕ್ತರಿಗೆ ಮಂತ್ರಾಕ್ಷತೆ ನೀಡಿದರು. ಟಿ. ನರಸೀಪುರದ ಶ್ರೀ ಗುಂಜಾ ನರಸಿಂಹ ದೇವರ ದರ್ಶನ ಪಡೆಯುವ ಮೂಲಕ ಸೀಮೋಲ್ಲಂಘನ ಮಾಡಿದರು. ನಂತರ ಶ್ರೀ ಅಗಸ್ತ್ಯೇಶ್ವರ, ಚೌಡೇಶ್ವರಿ ದೇಗುಲಗಳಲ್ಲಿ ಮಂಗಳಾರತಿ ಸಮರ್ಪಿಸಿದರು. ನೂರಾರು ಭಕ್ತರು ಇದ್ದರು.