ಶ್ರೀ ಯೋಗಿ ನಾರೇಯಣ ಯತೀಂದ್ರರು ವಿಶ್ವಕ್ಕೆ ಉತ್ತಮ ಸಂದೇಶ ಸಾರಿದವರು: ರಾಮ್ ರಾವ್ ದೇಸಾಯ್‌

| Published : Mar 15 2025, 01:04 AM IST

ಶ್ರೀ ಯೋಗಿ ನಾರೇಯಣ ಯತೀಂದ್ರರು ವಿಶ್ವಕ್ಕೆ ಉತ್ತಮ ಸಂದೇಶ ಸಾರಿದವರು: ರಾಮ್ ರಾವ್ ದೇಸಾಯ್‌
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ವಿಶ್ವಕ್ಕೆ ಉತ್ತಮ ಸಂದೇಶ ಸಾರಿದ ಶ್ರೀ ಯೋಗಿ ನಾರೇಯಣ ಯತೀಂದ್ರ ಅವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಸಾಗಬೇಕು ಎಂದು ಉಪ ತಹಸೀಲ್ದಾರ್ (ಗ್ರೇಡ್‌ - 2) ರಾಮ್ ರಾವ್ ದೇಸಾಯ್ ಹೇಳಿದರು.

ಚಿಕ್ಕಮಗಳೂರಿನ ಕಲಾಮಂದಿರದಲ್ಲಿ ಶ್ರೀ ಯೋಗಿನಾರೇಯಣ ಯತ್ರೀಂದ್ರರ ಜಯಂತಿ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ವಿಶ್ವಕ್ಕೆ ಉತ್ತಮ ಸಂದೇಶ ಸಾರಿದ ಶ್ರೀ ಯೋಗಿ ನಾರೇಯಣ ಯತೀಂದ್ರ ಅವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಸಾಗಬೇಕು ಎಂದು ಉಪ ತಹಸೀಲ್ದಾರ್ (ಗ್ರೇಡ್‌ - 2) ರಾಮ್ ರಾವ್ ದೇಸಾಯ್ ಹೇಳಿದರು.

ಜಿಲ್ಲಾಡಳಿತದಿಂದ ಶುಕ್ರವಾರ ನಗರದ ಕುವೆಂಪು ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಯೋಗಿನಾರೇಯಣ ಯತ್ರೀಂದ್ರರ ಜಯಂತಿ ಉದ್ಘಾಟಿಸಿ ಮಾತನಾಡಿದರು. ಜಾತಿ, ಮತ ಕುಲಗೋತ್ರಗಳ ವರ್ಣಭೇದವನ್ನು ಖಂಡಿಸುತ್ತಾ ದೀನ ದಲಿತರ, ಶೋಷಿತರ ಉದ್ಧಾರಕ್ಕಾಗಿ ವಿಶ್ವಮಾನವ ಸಂದೇಶ ಸಾರಿದ ನಾರೇಯಣ ಯತೀಂದ್ರ ಅವರ ಜಯಂತಿ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ. ಮಹಾನ್ ನಾಯಕರ ಆದರ್ಶ ಗುಣಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದು ಹೇಳಿದರು.ಜಿಗಣೇಹಳ್ಳಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಶ್ರೀನಿವಾಸ. ಪಾ. ನಾಯ್ಡು ಉಪನ್ಯಾಸ ನೀಡಿ, ಕೈವಾರ ತಾತಯ್ಯ ಎಂದೇ ಪ್ರಸಿದ್ಧಿ ಯಾಗಿರುವ ಶ್ರೀ ಯೋಗಿ ನಾರೇಯಣ ಯತೀಂದ್ರರು ಪದ್ಯ, ಕೀರ್ತನೆ ಹಾಗೂ ಸ್ತೋತ್ರಗಳ ಮೂಲಕ ಸಾಹಿತ್ಯ ರೂಪದಲ್ಲಿ ಜನತೆಗೆ ತಿಳಿಸಿಕೊಟ್ಟ ಮಹಾನ್ ಯೋಗಿ. ಪ್ರಪಂಚದಲ್ಲಿಯೇ ಮುಂದೊಂದು ದಿನ ನಡೆಯಬಹುದಾದ ಪಾಪ ಕೃತ್ಯಗಳ ಪ್ರಾಬಲ್ಯ, ಪ್ರಳಯ ಸಂಪತ್ತಿನ ವಿನಾಶ, ಘೋರ ವೈಪರಿತ್ಯಗಳು, ಭ್ರಷ್ಟಚಾರ, ದೌರ್ಜನ್ಯ, ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯ, ಧಾರ್ಮಿಕವಾಗಿ ನಡೆಯುವ ಅನ್ಯಾಯದ ಘಟನೆಗಳನ್ನು ಶ್ರೀ ಯೋಗಿ ನಾರೇಯಣ ಯತೀಂದ್ರರು ಕಾಲಜ್ಞಾನ ದಲ್ಲಿ ತಿಳಿಸಿದ್ದಾರೆ ಎಂದರು.

ಅನೇಕ ಪವಾಡಗಳನ್ನು ಮಾಡಿದ ಕೈವಾರ ತಾತಯ್ಯ ಸಮಾಜ ಸುಧಾರಕರು. ಅವರ ಮಾರ್ಗದಲ್ಲಿ ಪ್ರತಿಯೊಬ್ಬರೂ ಸಾಗಬೇಕಿದೆ. ಅವರು ರಚಿಸಿದ ಕಾಲಜ್ಞಾನದಲ್ಲಿ ಜಗತ್ತು ಅರಿಯಬೇಕಾದ ಅನೇಕ ಅಂಶಗಳಿವೆ. ಅವರ ತತ್ವ, ನೀಡಿದ ಮಾರ್ಗದರ್ಶನ ಪಾಲಿಸಿದರೆ ಎಲ್ಲೆಡೆ ಶಾಂತಿ ನೆಲೆಸುವುದರಲ್ಲಿ ಸಂಶಯವಿಲ್ಲ. ತಮ್ಮ ಜೀವಮಾನದುದ್ದಕ್ಕೂ ಆಧ್ಯಾತ್ಮಿಕ ಬೋಧನೆ ಮತ್ತು ಕೀರ್ತನೆಗಳಿಂದ ಉತ್ತಮ ಬದುಕಿನ ಅರ್ಥಗಳನ್ನು ತಿಳಿಸುತ್ತಿದ್ದ ಯೋಗಿ ನಾರೇಯಣರು ಜಗತ್ತಿನ ಭವಿಷ್ಯ ವಾಣಿ ಎಂದೇ ಕರೆಯಲ್ಪಡುವ ತಾಳೆ ಗರಿಗಳ ಲಿಪಿ ಬದ್ಧ ಸಂಗ್ರಹವನ್ನು ಕಾಲಜ್ಞಾನ ಗ್ರಂಥವಾಗಿ ರಚಿಸಿ, ಜಗತ್ತಿನ ಗಮನ ಸೆಳೆದ ಮೇರು ಸಂತರಾಗಿದ್ದಾರೆ ಎಂದು ಹೇಳಿದರು.ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ತಾತಯ್ಯನವರು ಜನ್ಮತಾಳಿದ್ದು ನಮ್ಮೆಲ್ಲರ ಪುಣ್ಯ. ಅಂತಹ ಮಹಾನುಭಾವರ ಜಯಂತ್ಯುತ್ಸವವನ್ನು ಜಾತಿ, ಮತ, ಭೇದವಿಲ್ಲದೆ ಎಲ್ಲರೂ ಅದ್ಧೂರಿಯಾಗಿ ಆಚರಿಸುವಂತಾಗಬೇಕು ಎಂದು ತಿಳಿಸಿದರು.

ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ಆನಂದ್ ಶೆಟ್ಟಿ ಮಾತನಾಡಿ, ಶ್ರೀ ಯೋಗಿ ನಾರೇಯಣರು ಜನರಿಗೆ ಅವರದೇ ಆದ ಶೈಲಿ ಯಲ್ಲಿ ಜಾಗೃತಿ ಮೂಡಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಿದರು. ಕೇವಲ ಒಂದು ಸಮುದಾಯಕ್ಕೆ ಸೀಮಿತ ವಾಗಿರದೆ ಸಮಾಜದ ಸಮಗ್ರ ಅಭಿವೃದ್ಧಿ ಬಯಸಿದವರು. ಶ್ರೀ ಯೋಗಿ ನಾರಾಯಣ ವಚನಗಳ ಮೂಲಕ ಸರಳ ರೀತಿಯಲ್ಲಿ ಅವರ ವಿಚಾರ ಮತ್ತು ತತ್ವಾದರ್ಶಗಳನ್ನು ಎಲ್ಲರಿಗೂ ಮನ ಮುಟ್ಟುವಂತೆ ತಿಳಿಸಿದ್ದಾರೆ. ಹಾಗೇ ನಾವು ಅವರ ಇತಿಹಾಸ ವಚನ ಸಂದೇಶ, ಬೋಧನೆ ಹಾಗೂ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಜೀವನದಲ್ಲಿ ಅಳಡಿಸಿಕೊಳ್ಳೋಣ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಪರಿಶಿಷ್ಟ ಜಾತಿ, ಪಂಗಡದ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಲಕ್ಷ್ಮಣ್, ಬಲಿಜ ಸಮಾಜದ ಹಿರಿಯ ಮುಖಂಡ ಮರಿ ಶೆಟ್ಟರು, ಬಲಿಜಾ ಸಮಾಜದ ಪ್ರಧಾನ ಕಾರ್ಯದರ್ಶಿ ಕುಮಾರ್, ಜಿಲ್ಲಾ ಬಲಿಜ ಸಮಾಜದ ಖಜಾಂಚಿ ಮಂಜುನಾಥ್, ಚಿಕ್ಕಮಗಳೂರು ತಾಲೂಕು ಬಲಿಜ ಸಮಾಜದ ಖಜಾಂಚಿ ವಾಸುದೇವ್ ಹಾಗೂ ಬಲಿಜ ಸಮಾಜದ ಮುಖಂಡರು ಉಪಸ್ಥಿತರಿದ್ದರು. 14 ಕೆಸಿಕೆಎಂ 2ಚಿಕ್ಕಮಗಳೂರಿನ ಕುವೆಂಪು ಕಲಾ ಮಂದಿರದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಶ್ರೀ ಯೋಗಿನಾರೇಯಣ ಯತ್ರೀಂದ್ರರ ಜಯಂತಿ ಕಾರ್ಯಕ್ರಮವನ್ನು ರಾಮ್‌ರಾವ್ ದೇಸಾಯಿ ಉದ್ಘಾಟಿಸಿದರು.