ತಾಲೂಕಿನ ಕೊಡಗೀಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಶ್ರೀಕೃಷ್ಣ ಉಪಾಧ್ಯಕ್ಷರಾಗಿ ಮಂಜಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ಕೊಡಗೀಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಶ್ರೀಕೃಷ್ಣ ಉಪಾಧ್ಯಕ್ಷರಾಗಿ ಮಂಜಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಈ ಹಿಂದಿನ ಸಮಿತಿಯಲ್ಲಿ ಅಧ್ಯಕ್ಷರಾಗಿದ್ದ ನಂಜುಂಡಸ್ವಾಮಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ, ಉಪಾಧ್ಯಕ್ಷರಾಗಿದ್ದ ಜಯಲಕ್ಷ್ಮಮ್ಮ ತಮ್ಮ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ತೆರವಾಗಿತ್ತು. ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶ್ರೀಕೃಷ್ಣ , ಉಪಾಧ್ಯಕ್ಷ ಸ್ಥಾನಕ್ಕೆ ಮಂಜಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಗಳಾದ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಎನ್.ಮಹೇಶ್ವರ್ ಘೋಷಿಸಿದರು.
ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಸಂಘದ ನಿರ್ದೇಶಕರೂ, ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಕೊಡಗೀಹಳ್ಳಿ ಸಿದ್ದಲಿಂಗಪ್ಪ, ನಿರ್ದೇಶಕರಾದ ನಂಜುಂಡಪ್ಪ, ದೇವರಾಜು, ಪುಟ್ಟಸ್ವಾಮಿಗೌಡ, ಚಿಕ್ಕಹನುಮಯ್ಯ, ಜಯಲಕ್ಷ್ಮಮ್ಮ, ವೆಂಕಟೇಶ್, ಯದುಕುಮಾರ್, ಮುನಿರಾಜು. ಸೂಪರ್ ವೈಸರ್ ಭರತ್, ಪಾಂಡು, ಗುಡ್ಡೇನಹಳ್ಳಿ ಗವಿ, ರುದ್ರೇಶ್ ಸೇರಿದಂತೆ ಹಲವರು ಅಭಿನಂದಿಸಿದರು. ಈ ವೇಳೆ ನೂತನ ಅಧ್ಯಕ್ಷ ಶ್ರೀಕೃಷ್ಣ ಮಾತನಾಡಿ, ತಮ್ಮ ಸಂಘದಲ್ಲಿ ಸುಮಾರು 2800 ಷೇರುದಾರರಿದ್ದಾರೆ. 65 ಲಕ್ಷ ಷೇರು ಬಂಡವಾಳವಿದೆ. ಪ್ರಸಕ್ತ ವರ್ಷ ಸುಮಾರು ಒಂದು ಲಕ್ಷ ರೂ ಲಾಭದಲ್ಲಿದೆ. ಸುಮಾರು 1450 ಮಂದಿಗೆ 6 ಕೋಟಿಯಷ್ಟು ಕೆಸಿಸಿ ಸಾಲ ನೀಡಲಾಗಿದೆ. ಶೇಕಡಾ ನೂರರಷ್ಟು ಸಾಲ ವಸೂಲಾತಿಯೂ ಆಗಿದೆ ಎಂದು ಅವರು ತಿಳಿಸಿದರು. ಮುಂಬರುವ ದಿನಗಳಲ್ಲಿ ತಮ್ಮ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿನ ರೈತಾಪಿಗಳಿಗೆ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಪ್ರಾಮಾಣಿಕವಾಗಿ ತಲುಪಿಸುವುದಾಗಿ ಹೇಳಿದರು. ತಮ್ಮ ಗೆಲುವಿಗೆ ಕಾರಣೀಭೂತರಾಗಿರುವ ತಮ್ಮ ವ್ಯಾಪ್ತಿಯ ಮತದಾರರು, ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸಿದರು.