ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ನನ್ನ ಸಂಬಳ ವಿನಿಯೋಗ: ಶ್ರೀನಿವಾಸ ಮಾನೆ

| Published : Mar 23 2025, 01:35 AM IST

ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ನನ್ನ ಸಂಬಳ ವಿನಿಯೋಗ: ಶ್ರೀನಿವಾಸ ಮಾನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರ ಶಾಸಕರ ಸಂಬಳ ಹೆಚ್ಚಿಸಿದ್ದು, ನನ್ನ ಸಂಬಳವನ್ನು ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ವಿನಿಯೋಗಿಸುತ್ತೇನೆ. ತಾಲೂಕಿನಲ್ಲಿ ಶೈಕ್ಷಣಿಕ ಉನ್ನತಿ ನನ್ನ ಸಂಕಲ್ಪವಾಗಿದ್ದು, ಅದನ್ನು ಸಾಧಿಸುವ ಪೂರ್ಣ ವಿಶ್ವಾಸ ನನಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಹಾನಗಲ್ಲ: ರಾಜ್ಯ ಸರ್ಕಾರ ಶಾಸಕರ ಸಂಬಳ ಹೆಚ್ಚಿಸಿದ್ದು, ನನ್ನ ಸಂಬಳವನ್ನು ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ವಿನಿಯೋಗಿಸುತ್ತೇನೆ. ತಾಲೂಕಿನಲ್ಲಿ ಶೈಕ್ಷಣಿಕ ಉನ್ನತಿ ನನ್ನ ಸಂಕಲ್ಪವಾಗಿದ್ದು, ಅದನ್ನು ಸಾಧಿಸುವ ಪೂರ್ಣ ವಿಶ್ವಾಸ ನನಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಶನಿವಾರ ಹಾನಗಲ್ಲಿನ ಹ್ಯುಮ್ಯಾನಿಟಿ ಫೌಂಡೇಶನ್‌ನ ಪರಿವರ್ತನ ಕಲಿಕಾ ಕೇಂದ್ರದಲ್ಲಿ ಬೆಂಗಳೂರಿನ ಆರ್‌ವಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಉಚಿತ ಸಿಇಟಿ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಈಜಿ ಗೆಲ್ಲುವ ಅಗತ್ಯ ಇಂದಿನದಾಗಿದೆ. ಈಗ ತಂತ್ರಜ್ಞಾನದ ಓಟದ ಯುಗದಲ್ಲಿದ್ದೇವೆ. ಗ್ರಾಮೀಣ ಮಕ್ಕಳಿಗೆ ಈ ಸೌಲಭ್ಯಗಳು ತಲುಪಬೇಕು ಎಂಬುದು ನನ್ನ ಆಶಯ ಎಂದು ಹೇಳಿದರು. ಈಗ ಸ್ವಾರ್ಥರಹಿತ ಸೇವೆ ಬೇಕಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಮೂಲಭೂತ ಸೌಕರ್ಯವನ್ನು ಒದಗಿಸುವಲ್ಲಿ ವಿಶೇಷ ಕಾಳಜಿ ಬೇಕಾಗಿದೆ. ಹಾನಗಲ್ಲ ತಾಲೂಕಿನ ಶಿಕ್ಷಣ ಸಂಸ್ಥೆಗಳಿಗೆ ₹1.5 ಕೋಟಿ ದಾನದ ಮೂಲಕ ನೀಡಿ ಮೂಲಭೂತ ಸೌಕರ್ಯಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಶಿಕ್ಷಣದ ಮೂಲಕ ಸಾಧನೆ ಮಾಡಿ ಬದುಕು ಕಟ್ಟಿಕೊಂಡವರು ತಾವು ಓದಿದ ಶಾಲೆಗೆ ದಾನ ಮಾಡಬೇಕು. ಸಹಾಯ ಮನೋಭಾವ ಬೆಳೆಯಲಿ. ಅಸಹಾಯಕರಿಗೆ ಸಹಾಯ ಮಾಡೋಣ ಎಂದರು.

ಬೆಂಗಳೂರು ಆರ್‌ವಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಟಿ.ಸಿ. ಮಹೇಶ ಮಾತನಾಡಿ, ಗ್ರಾಮೀಣ ಮಕ್ಕಳಲ್ಲಿ ಪ್ರತಿಭೆಗೆ ಕೊರತೆ ಇಲ್ಲ. ಆದರೆ ಸರಿಯಾದ ಮಾರ್ಗದರ್ಶನದ ಅಗತ್ಯವಿದೆ. ಕೀಳರಿಮೆಯಿಂದ ಹೊರಬಂದರೆ ಎಲ್ಲವೂ ಸಾಧ್ಯ. ಜ್ಞಾನ ಪ್ರತಿಭೆಗೆ ಕಾಲ ದೇಶ ಪ್ರದೇಶದ ತಾರತಮ್ಯವಿಲ್ಲ. ಕಠಿಣ ಪರಿಶ್ರಮದಿಂದ ಮಾತ್ರ ಎಲ್ಲವೂ ಸಾಧ್ಯ. ಸಮಯದ ಸದುಪಯೋಗ, ಶೈಕ್ಷಣಿಕ ಶಿಸ್ತು ರೂಢಿಸಿಕೊಳ್ಳಿ, ಪರೀಕ್ಷಾ ಭಯದಿಂದ ಮುಕ್ತರಾಗಿ. ಶೈಕ್ಷಣಿಕ ಅವಕಾಶಗಳನ್ನು ವಿಳಂಬವಿಲ್ಲದೆ ಬಳಸಿಕೊಂಡಲ್ಲಿ ಎಂತಹ ಸ್ಪರ್ಧೆಗಳನ್ನಾದರೂ ಗೆಲ್ಲಲು ಸಾಧ್ಯ ಎಂದರು.

ಆಡಳಿತಾಧಿಕಾರಿ ಮಾರುತಿ ಶಿಡ್ಲಾಪುರ, ಪರಿವರ್ತನ ಕಲಿಕಾ ಕೇಂದ್ರದ ನಿದೇಶಕ ಸಂತೋಷ ಅಪ್ಪಾಜಿ, ಆರ್‌ವಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮಹೇಶ ರೆಡ್ಡಿ ಪಾಲ್ಗೊಂಡಿದ್ದರು.