ಸಾರಾಂಶ
ಶಿರಸಿ ತಾಲೂಕಿನ ಮುಂಡಿಗೆಸರ ಮೂಲದ ಹುಬ್ಬಳ್ಳಿಯ ಯುವತಿ ಶೃತಿ ಹೆಗಡೆ ಅವರು ಇತ್ತೀಚೆಗೆ ಅಮೆರಿಕದಲ್ಲಿ ಜರುಗಿದ ಮಿನಿ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಶಿರಸಿ
ಶಿರಸಿ ತಾಲೂಕಿನ ಮುಂಡಿಗೆಸರ ಮೂಲದ ಹುಬ್ಬಳ್ಳಿಯ ಯುವತಿ ಶೃತಿ ಹೆಗಡೆ ಅವರು ಇತ್ತೀಚೆಗೆ ಅಮೆರಿಕದಲ್ಲಿ ಜರುಗಿದ ಮಿನಿ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ.೨೦೧೮ರಲ್ಲಿ ಮಿಸ್ ಕರ್ನಾಟಕ ರನ್ನರ್ ಅಪ್, ಮಿಸ್ ಸೌತ್ ಇಂಡಿಯಾ ವಿಜೇತೆಯಾಗಿದ್ದರು. ೨೦೨೩ರಲ್ಲಿ ಮಿಸ್ ಏಷ್ಯಾ ಇಂಟರ್ ನ್ಯಾಷನಲ್ ಇಂಡಿಯಾ ಪ್ರಶಸ್ತಿ ಗೆದ್ದಿದ್ದ ಇವರು ಅಮೆರಿಕದಲ್ಲಿ ಇತ್ತೀಚೆಗೆ ನಡೆದ ಮಿನಿ ವಿಶ್ವ ಸುಂದರಿಯ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಅಮೆರಿಕದ ಪ್ಲೋರಿಡಾದಲ್ಲಿ ಕಳೆದ ಜೂ. ೬ರಿಂದ ೧೦ರ ವರೆಗೆ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಭಾರತ ಸೇರಿದಂತೆ ಒಟ್ಟು 40 ದೇಶಗಳ ಸುಂದರಿಯರು ಪೈಪೋಟಿಯಲ್ಲಿದ್ದರು. ರಾಷ್ಟ್ರೀಯ ಉಡುಗೆ, ಈಜು ಉಡುಗೆ, ಪ್ರಶ್ನೋತ್ತರ, ವೈಯಕ್ತಿಕ ಸಂದರ್ಶನ ಮುಂತಾದ ವಿವಿಧ ಸುತ್ತುಗಳಲ್ಲಿ ಸ್ಪರ್ಧೆ ಸಾಗಿತ್ತು. ಎಲ್ಲದರಲ್ಲೂ ಉತ್ತಮ ಪ್ರದರ್ಶನ ನೀಡಿ, ಶೃತಿ ಹೆಗಡೆ ಗೆಲುವು ಸಾಧಿಸಿದ್ದಾರೆ.
ಮುಂಡಿಗೆಸರ ಅಜ್ಜೊರಮನೆ ಕುಟುಂಬದವರಾದ ಕೃಷ್ಣ ಹೆಗಡೆ, ಕಮಲಾ ದಂಪತಿಯ ಪುತ್ರಿ ಆಗಿರುವ ಶೃತಿ ಹೆಗಡೆ ಹುಬ್ಬಳ್ಳಿಯಲ್ಲಿಯೇ ಎಂಬಿಬಿಎಸ್ ಪೂರೈಸಿದ್ದು, ಚರ್ಮರೋಗ ತಜ್ಞೆಯಾಗುವ ಹಂಬಲದಿಂದ ತುಮಕೂರಿನಲ್ಲಿ ಎಂಡಿ ಅಧ್ಯಯನ ನಡೆಸುತ್ತಿದ್ದಾರೆ. ಇವರು ಭರತನಾಟ್ಯ ಕಲಾವಿದೆಯೂ ಆಗಿದ್ದು, ದುಬೈ, ಮಾಲ್ಡೀವ್ಸ್, ಭೂತಾನ್ ಮುಂತಾದ ದೇಶಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಅಲ್ಲದೇ ಕೆಲವು ಧಾರಾವಾಹಿ, ಕನ್ನಡ ಚಲನಚಿತ್ರ, ವೆಬ್ ಸಿರೀಸ್‌ನಲ್ಲಿ ನಟಿಸಿದ್ದಾರೆ.