ಮತ ಚೋರಿ ಅಭಿಯಾನಕ್ಕೆ ಶುಭದಾಯಿನಿ ಚಾಲನೆ

| Published : Oct 17 2025, 01:00 AM IST

ಸಾರಾಂಶ

ಚುನಾವಣೆಯಲ್ಲಿ ಮತಗಳ್ಳತನದಿಂದಾಗಿಯೇ ಜನವಿರೋಧಿ ಅಭ್ಯರ್ಥಿಗಳು ಆಯ್ಕೆಯಾಗುವ ಮೂಲಕ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಹಾಳಾಗುತ್ತಿದೆ. ಇದಕ್ಕೆ ಕೇಂದ್ರದ ಬಿಜೆಪಿ ಆಡಳಿತವೇ ಮುಖ್ಯ ಕಾರಣ.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಒಂದನೇ ವಾರ್ಡ್‌ನ ಡವರಿ ಕಾಲೋನಿಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್‌ ವತಿಯಿಂದ ಏರ್ಪಡಿಸಿದ್ದ ವೋಟ್ ಚೋರಿ ವಿರುದ್ಧದ ಸಹಿ ಸಂಗ್ರಹ ಕಾರ್ಯಕ್ರಮಕ್ಕೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಎಚ್.ಬಿ.ಶುಭದಾಯಿನಿ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಬಿಜೆಪಿ ಮತ್ತು ಅದರ ಸಂಬಂಧಿತ ಪಕ್ಷಗಳು ಮತಗಳ್ಳತನದ ಮೂಲಕ ಅಧಿಕಾರದ ಗದ್ದುಗೆಗೇರಲು ಅಡ್ಡದಾರಿ ಹಿಡಿದಿರುವುದು ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಚುನಾವಣೆಯಲ್ಲಿ ಮತಗಳ್ಳತನದಿಂದಾಗಿಯೇ ಜನವಿರೋಧಿ ಅಭ್ಯರ್ಥಿಗಳು ಆಯ್ಕೆಯಾಗುವ ಮೂಲಕ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಹಾಳಾಗುತ್ತಿದೆ. ಇದಕ್ಕೆ ಕೇಂದ್ರದ ಬಿಜೆಪಿ ಆಡಳಿತವೇ ಮುಖ್ಯ ಕಾರಣ ಎಂದು ದೂರಿದರು.

ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರ ಸೇರಿದಂತೆ ರಾಜ್ಯದ ನಾನಾ ಕಡೆ ಅಪಾರ ಪ್ರಮಾಣದಲ್ಲಿ ಅರ್ಹ ಮತದಾರರನ್ನು ಕೈಬಿಟ್ಟು, ಅನರ್ಹ ಮತದಾರರನ್ನು ಸೇರಿಸಲಾಗಿದೆ. ಇಂತಹ ಕುತಂತ್ರ ಮಾರ್ಗವನ್ನು ಪತ್ತೆ ಹಚ್ಚಿದ ರಾಹುಲ್‌ಗಾಂಧಿ ಅವರು ದೇಶದಾದ್ಯಂತ ಬಿಜೆಪಿ ಮುಖವಾಡ ಕಳಚಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಬೆಂಬಲಿಸಿ ನಾವು ಸಹಿ ಸಂಗ್ರಹ ಅಭಿಯಾನ ನಡೆಸುತ್ತಿದ್ದೇವೆ ಎಂದರು.

ಡವರಿ ಕಾಲೋನಿಯಲ್ಲಿ ಜನರಿಗೆ ಮತದಾನದ ಬಗ್ಗೆ ಅರಿವು ಮೂಡಿಸಿ ೧೮ ವರ್ಷ ತುಂಬಿದ ಹೊಸ ಮತದಾರರ ಸೇರ್ಪಡೆ ಬಗ್ಗೆ ತಿಳಿಸಿದರು. ಕಾಂಗ್ರೆಸ್ ಮುಖಂಡರಾದ ಮಹೇಶ್, ಅಭಿಲಾಶ್, ಆದರ್ಶ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಎಚ್.ಎಂ.ಉದಯಕುಮಾರ್, ಮಹಿಳಾ ಕಾಂಗ್ರೆಸ್ ಮುಖಂಡರಾದ ಶಕುಂತಲಾ, ವೀಣಾ, ಜಯಲಕ್ಷ್ಮೀ, ಗೀತಾ, ರೇವತಿ, ರಾಧಾ ಇತರರು ಹಾಜರಿದ್ದರು.