ಬಿಜೆಪಿಯವರಿಗೆ ಯಾಕೆ ಇಡಿ ನೋಟಿಸ್ ನೀಡಲ್ಲ?: ತಂಗಡಗಿ

| Published : Feb 01 2025, 12:02 AM IST

ಸಾರಾಂಶ

ಇಡಿ ಬರಿ ಕಾಂಗ್ರೆಸ್ಸಿನವರಿಗೆ ಮಾತ್ರ ನೋಟಿಸ್ ಜಾರಿ ಮಾಡುತ್ತದೆ, ಬಿಜೆಪಿಯ ನಾಯಕರಿಗೆ ನೋಟಿಸ್ ಜಾರಿ ಮಾಡುವುದಿಲ್ಲ. ಇದ್ಯಾವುದಕ್ಕೂ ನಾವು ಹೆದರುವುದಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.

ಕೊಪ್ಪಳ: ಬಡವರ ಪರವಾಗಿ ಕೆಲಸ ಮಾಡುವವರಿಗೆ ನೋಟಿಸ್ ಜಾರಿ ಮಾಡುವ ಇಡಿ, ಬಿಜೆಪಿಯವರಿಗೆ ಯಾಕೆ ನೋಟಿಸ್ ನೀಡುವುದಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಪ್ರಶ್ನೆ ಮಾಡಿದ್ದಾರೆ.

ತಾಲೂಕಿನ ಮುಂಡರಗಿ ಗ್ರಾಮದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ನೋಟಿಸ್ ಜಾರಿ ಮಾಡಿರುವ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಇಡಿ ಬರಿ ಕಾಂಗ್ರೆಸ್ಸಿನವರಿಗೆ ಮಾತ್ರ ನೋಟಿಸ್ ಜಾರಿ ಮಾಡುತ್ತದೆ, ಬಿಜೆಪಿಯ ನಾಯಕರಿಗೆ ನೋಟಿಸ್ ಜಾರಿ ಮಾಡುವುದಿಲ್ಲ. ಇದ್ಯಾವುದಕ್ಕೂ ನಾವು ಹೆದರುವುದಿಲ್ಲ. ಜನಪರವಾಗಿ ಕೆಲಸ ಮಾಡುವವರು, ಬಡವರ ಪರವಾಗಿ ಕೆಲಸ ಮಾಡುವರು, ರೈತ ಪರ ಇರುವವರೇ ಇಡಿ ಅಧಿಕಾರಿಗಳಿಗೆ ಹಾಗೂ ಬಿಜೆಪಿಯವರಿಗೆ ಕಾಣುತ್ತಾರೆ. ಬಿಜೆಪಿ ನಾಯಕರು ಯಾರೂ ಕಾಣಿಸುತ್ತಿಲ್ಲವೇ ಎಂದು ಪದೇ ಪದೇ ಪ್ರಶ್ನೆ ಮಾಡಿದರು.

ಯಾರು ನೋಟಿಸ್ ನೀಡಿದರೂ ನಾವು ಸಿಎಂ ಸಿದ್ದರಾಮಯ್ಯ ಅವರ ಜತೆಯಲ್ಲಿಯೇ ಇರುತ್ತೇವೆ. ಐದು ವರ್ಷ ನಮ್ಮದೇ ಸರ್ಕಾರ ಇರುತ್ತದೆ ಎಂದು ಹೇಳಿದರು.

ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ₹5300 ಕೋಟಿ ನೀಡುವುದಾಗಿ ಹೇಳಿದ್ದರೂ ಒಂದು ನಯಾಪೈಸೆ ನೀಡಲಿಲ್ಲ. ರಾಜ್ಯದ ಬಗ್ಗೆ ಬಿಜೆಪಿ ನಾಯಕರಿಗೆ ಕಾಳಜಿಯೇ ಇಲ್ಲ. ಇದ್ಯಾವುದನ್ನು ಕೇಳುವುದಿಲ್ಲ. ಜಿಎಸ್‌ಟಿಯಲ್ಲಿ ನಮಗೆ ಅನ್ಯಾಯವಾದರೂ ಈ ರಾಜ್ಯ ಬಿಜೆಪಿ ನಾಯಕರು ಪ್ರಶ್ನೆ ಮಾಡುವುದಿಲ್ಲ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಪ್ರಶ್ನೆ ಮಾಡುವುದಿಲ್ಲ ಮತ್ತು ಕೇಂದ್ರದ ಮೇಲೆ ಒತ್ತಡ ಹೇರಿ ರಾಜ್ಯಕ್ಕೆ ಅನುದಾನ ತರುವುದಿಲ್ಲ. ಬಿಜೆಪಿ ನಾಯಕರು ಬರಿ ಜಗಳದಲ್ಲಿ ತಲ್ಲೀನರಾಗಿದ್ದಾರೆ. ಇದುವರೆಗೂ ಬಿಜೆಪಿಯಲ್ಲಿ ಐದಾರು ಬಣ ಇದ್ದವು, ಈಗ ಜಿಲ್ಲಾಧ್ಯಕ್ಷರ ಆಯ್ಕೆ ಗೊಂದಲದಿಂದ ಹದಿನಾರು ಬಣಗಳಾಗಿವೆ ಎಂದರು.

ಎಸ್‌ಸಿ, ಎಸ್‌ಟಿ ಸಚಿವರ ಸಭೆ ಆಗಿರುವ ಬಗ್ಗೆ ನನಗೆ ಗೊತ್ತಿಲ್ಲ, ಆ ಸಭೆಗೂ ನಾನು ಹೋಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.