ಸಾರಾಂಶ
ಸಬ್ ಜ್ಯೂನಿಯರ್ ನೇಗಿಲು ವಿಭಾಗದಲ್ಲಿ 79 ಜೊತೆ ಮತ್ತು ಹಗ್ಗ ವಿಭಾಗದಲ್ಲಿ 6 ಜೊತೆ ಸೇರಿದಂತೆ ಒಟ್ಟು 85 ಜೋಡಿ ಮರಿ ಕೋಣಗಳು ಪಾಲ್ಗೊಂಡು ಗಮನ ಸೆಳೆದವು.
ಕನ್ನಡಪ್ರಭ ವಾರ್ತೆ ಬಂಟ್ವಾಳ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ಬಂಟ್ವಾಳ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ವತಿಯಿಂದ ಸಬ್ ಜ್ಯೂನಿಯರ್ ಹಗ್ಗ ಮತ್ತು ನೇಗಿಲು ವಿಭಾಗದ ‘ರೋಟರಿ ಕಂಬಳ ಕೂಟ’ ಆಯೋಜಿಸುವ ಮೂಲಕ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ರೋಟರಿ ಕ್ಲಬ್ ಮತ್ತಿತರ ಸಂಘಟನೆಗಳಿಗೆ ಹೊಸ ದಿಕ್ಕು ತೋರಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ವಿಕ್ರಮ್ ದತ್ತ ಹೇಳಿದರು.ಇಲ್ಲಿನ ಸಿದ್ದಕಟ್ಟೆ ಕೊಡಂಗೆ ವೀರ ವಿಕ್ರಮ ಜೋಡುಕರೆಯಲ್ಲಿ ಬಂಟ್ವಾಳ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ವತಿಯಿಂದ ಶನಿವಾರ ಏರ್ಪಡಿಸಿದ್ದ ಸಬ್ ಜ್ಯೂನಿಯರ್ ಹಗ್ಗ ಮತ್ತು ನೇಗಿಲು ವಿಭಾಗದ ‘ರೋಟರಿ ಕ್ಲಬ್ ಕಂಬಳ ಕೂಟ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರೋಟರಿ ಕ್ಲಬ್ ಅಧ್ಯಕ್ಷ ಸುರೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ಲಬ್‌ನ ಮಾಜಿ ಅಧ್ಯಕ್ಷ, ಕೊಯಿಲ ಮಾವಂತೂರು ಶ್ರೀ ಮಹಾಗಣಪತಿ ದೇವಳದ ಮೊಕ್ತೇಸರ ಎಂ. ಪದ್ಮರಾಜ ಬಲ್ಲಾಳ್ ಕಂಬಳ ಕರೆ ಉದ್ಘಾಟಿಸಿದರು. ಹಿರಿಯ ವೈದ್ಯ ಡಾ. ಪ್ರಭಾಚಂದ್ರ ಜೈನ್, ರೋಟರಿ ಮಾಜಿ ಜಿಲ್ಲಾ ಗವರ್ನರ್ ಎನ್. ಪ್ರಕಾಶ ಕಾರಂತ್, ನಿಯೋಜಿತ ಜಿಲ್ಲಾ ಗವರ್ನರ್ ಸತೀಶ್ ಬೋಳಾರ್, ಜಿಲ್ಲಾ ಕಾರ್ಯದರ್ಶಿ ರಿತೇಶ್ ಬಾಳಿಗಾ, ಸಹಾಯಕ ಗವರ್ನರ್ ಡಾ. ಮುರಳಿಕೃಷ್ಣ, ಸಹಾಯಕ ಗವರ್ನರ್ ಮಹಮ್ಮದ್ ವಳವೂರು, ಮೂಡುಬಿದಿರೆ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಡಾ. ಸುದೀಪ್ ಕುಮಾರ್ ಜೈನ್, ಶಿವಮೊಗ್ಗ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಸ್ಯಾಂಕ್ಟಿಸ್ ಶುಭ ಹಾರೈಸಿದರು.ಕೊಡಂಗೆ ವೀರ-ವಿಕ್ರಮ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ, ಕಾರ್ಯದರ್ಶಿ ಶಶಿಧರ ಶೆಟ್ಟಿ ಕಲ್ಲಾಪು, ವಲಯ ಸೇನಾನಿ ಗಣೇಶ ಶೆಟ್ಟಿ ಮತ್ತಿತರರು ಇದ್ದರು.
ವಿಶೇಷತೆ: ಕಂಬಳದಲ್ಲಿ ಭಾಗವಹಿಸಿದ ಎಲ್ಲರಿಗೂ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಬ್ ಜ್ಯೂನಿಯರ್ ನೇಗಿಲು ವಿಭಾಗದಲ್ಲಿ 79 ಜೊತೆ ಮತ್ತು ಹಗ್ಗ ವಿಭಾಗದಲ್ಲಿ 6 ಜೊತೆ ಸೇರಿದಂತೆ ಒಟ್ಟು 85 ಜೋಡಿ ಮರಿ ಕೋಣಗಳು ಪಾಲ್ಗೊಂಡು ಗಮನ ಸೆಳೆದವು.