ತಾಲೂಕಿನ ಕಾಡವಾದ ಗ್ರಾಮದಲ್ಲಿ ಶ್ರಾವಣ ಮಾಸದ ಸಮಾರೋಪ ಹಾಗೂ ಐತಿಹಾಸಿಕ ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಬೀದರ್

ತಾಲೂಕಿನ ಕಾಡವಾದ ಗ್ರಾಮದಲ್ಲಿ ಶ್ರಾವಣ ಮಾಸದ ಸಮಾರೋಪ ಹಾಗೂ ಐತಿಹಾಸಿಕ ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಸುದೀರ್ಘ ಏಳು ದಶಕಗಳ ಇತಿಹಾಸವಿರುವ ಈ ಜಾತ್ರಾ ಮಹೋತ್ಸವದಲ್ಲಿ ಇಡೀ ಗ್ರಾಮವೇ ಭಕ್ತಿ ಸಾಗರದಲ್ಲಿ ತೇಲಿದ್ದು, ಯುವಕರು ಹಾಗೂ ಮಹಿಳೆಯರ ಉತ್ಸಾಹ ಮುಗಿಲು ಮುಟ್ಟಿತ್ತು.

ಕಾಡವಾದ ಗ್ರಾಮದಲ್ಲಿ ಸಿದ್ಧಲಿಂಗೇಶ್ವರ ಜಾತ್ರೆಯ ನಿಮಿತ್ತ ಭವ್ಯ ಪಲ್ಲಕ್ಕಿ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಸಿದ್ಧಲಿಂಗೇಶ್ವರ ದೇವಾಲಯದಿಂದ ಆರಂಭಗೊಂಡ ಮೆರವಣಿಗೆಯು ಹನುಮಾನ ದೇವಸ್ಥಾನ, ಭಕ್ತ ಕನಕದಾಸ ವೃತ್ತ ಹಾಗೂ ಧರ್ಮೇಶ್ವರ ಮಹಾದೇವ ಮಂದಿರದ ಮಾರ್ಗವಾಗಿ ಸಾಗಿ ದೇವಾಲಯಕ್ಕೆ ತಲುಪಿತು. ಮೆರವಣಿಗೆಯುದ್ದಕ್ಕೂ ಸುಮಂಗಲೀಯರು ಕಳಸ-ಕುಂಭಗಳನ್ನು ಹೊತ್ತು ಸಾಗಿದರೆ, ರಸ್ತೆಯ ಇಕ್ಕೆಲಗಳಲ್ಲಿ ರಂಗೋಲಿ ಬಿಡಿಸಿ ಸ್ವಾಮೀಜಿಯ ಪಲ್ಲಕ್ಕಿಯನ್ನು ಸ್ವಾಗತಿಸಲಾಯಿತು.

ಮಕ್ಕಳು ಮಹಾತ್ಮರ ವೇಷಭೂಷಣ ತೊಟ್ಟು ಗಮನ ಸೆಳೆದರೆ, ಅಕ್ಕಮಹಾದೇವಿ ಮಹಿಳಾ ಭಜನಾ ತಂಡದ ತಾಳ-ಮೇಳ ಹಾಗೂ ಚಂಡೆ ವಾದನದ ಸದ್ದು ಭಕ್ತಿಭಾವ ಇಮ್ಮಡಿಗೊಳಿಸಿತು. ಜಾತಿ-ಮತದ ಭೇದ ಮರೆತು ಹಿಂದೂ ಸಮುದಾಯದ ನೂರಾರು ಯುವಕರು ಭಕ್ತಿಗೀತೆ ಹಾಗೂ ರಾಷ್ಟ್ರಪ್ರೇಮದ ಹಾಡುಗಳಿಗೆ ಕುಣಿದು ಸಂಭ್ರಮಿಸಿದರು.

ಗ್ರಾಮದ ಹಿರಿಯರಾದ ಕಾಶಿನಾಥ ಮೀನಕೇರಿ ಹಾಗೂ ಸಿದ್ದು ಪಾಟೀಲ್ ಸುಗುರ ಜಾತ್ರೆಯ ಇತಿಹಾಸ ಕುರಿತು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಾಡವಾದ ಸರ್ಕಾರಿ ಪ್ರೌಢಶಾಲೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಈ ಭವ್ಯ ಪಲ್ಲಕ್ಕಿ ಮೆರವಣಿಗೆಯಲ್ಲಿ ಗ್ರಾಮದ ಹಿರಿಯರಾದ ಈಶ್ವರಯ್ಯ ಸಾಳಿ, ಪ್ರಕಾಶ ಕುಲಕರ್ಣಿ, ಸಿದ್ದಯ್ಯ ಸ್ವಾಮಿ ಚಿಟ್ಟಾ, ಶ್ರಿನಿವಾಸ ಕುಲಕರ್ಣಿ, ಪಿಕೆಪಿಎಸ್ ಅಧ್ಯಕ್ಷ ರಾಜುಕುಮಾರ ಮಂಗಲಗಿ, ದಯಾನಂದ ಪಾಟೀಲ್, ಶಿವುಕುಮಾರ ಪೊಲೀಸ್ ಪಾಟೀಲ್, ಅಮೃತರಾವ ಪಾಟೀಲ್, ಶಂಕರ ಚಿದ್ರಿ, ಸತೀಶ ಪಾಟೀಲ್, ಸಂಗಮೇಶ ಕುಲಕರ್ಣಿ, ದತ್ತಾತ್ರಿ ಬುಕೆಗಾರ, ಮಲ್ಲಿಕಾರ್ಜುನ ಬರೂರ ಸೇರಿದಂತೆ ಗ್ರಾಮದ ನೂರಾರು ಮುಖಂಡರು, ಯುವಕರು ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು.