ಸಮಸಮಾಜಕ್ಕೆ ಶ್ರಮಿಸಿದ ಸಿದ್ದಪ್ಪ ಕಂಬಳಿ

| Published : Sep 15 2024, 02:04 AM IST

ಸಮಸಮಾಜಕ್ಕೆ ಶ್ರಮಿಸಿದ ಸಿದ್ದಪ್ಪ ಕಂಬಳಿ
Share this Article
  • FB
  • TW
  • Linkdin
  • Email

ಸಾರಾಂಶ

ಸರ್. ಸಿದ್ಧಪ್ಪ ಕಂಬಳಿ ಅವರ ಶ್ರಮ ಹಾಗೂ ಪ್ರಾಮಾಣಿಕ ಪ್ರಯತ್ನವಿರದಿದ್ದರೆ ಧಾರವಾಡ ವಿದ್ಯಾಕಾಶಿ ಆಗಲು ಸಾಧ್ಯವಾಗುತ್ತಿರಲಿಲ್ಲ. ಎಲ್ಲಿಯವರೆಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಕರ್ನಾಟಕ ಕಾಲೇಜ ಇರುತ್ತದೆಯೋ ಅಲ್ಲಿಯವರೆಗೆ ಅವರ ಹೆಸರು ಅಜರಾಮರ.

ಧಾರವಾಡ:

ಸರ್. ಸಿದ್ಧಪ್ಪ ಕಂಬಳಿ ಅವರು ಆಗಿನ ಕಾಲದ ಜಾತಿಯಾಧಾರಿತ ಸಾಮಾಜಿಕ ತಾರತಮ್ಯ ತೊರೆದು ಹಾಕಿ ಸಮಸಮಾಜ ನಿರ್ಮಿಸುವಲ್ಲಿ ಶ್ರಮಿಸಿದ ಧೀಮಂತ ವ್ಯಕ್ತಿ ಎಂದು ಪ್ರಾಧ್ಯಾಪಕ ಡಾ. ಈರಣ್ಣ ಇಂಜಗನೇರಿ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಸರ್. ಸಿದ್ಧಪ್ಪ ಕಂಬಳಿ ಕಾನೂನು ಕಾಲೇಜಿನ ಆಶ್ರಯದಲ್ಲಿ ಆಯೋಜಿಸಿದ್ದ ದತ್ತಿಯಲ್ಲಿ ‘ಸರ್. ಸಿದ್ಧಪ್ಪ ಕಂಬಳಿ ಅವರ ಸಾಮಾಜಿಕ ನ್ಯಾಯ’ ವಿಷಯ ಕುರಿತು ಉಪನ್ಯಾಸ ನೀಡಿದರು.

ಶಿಕ್ಷಣ ಸಕಲ ಸಮಸ್ಯೆಗಳಿಗೆ ಸಂಜೀವಿನಿ ಎಂದು ತಿಳಿದ ಸರ್. ಸಿದ್ಧಪ್ಪ ಕಂಬಳಿ ಶಿಕ್ಷಣದಿಂದ ವಂಚಿತರಾದ ಅವಕಾಶ ಹೀನರಿಗೆ ಯಾವುದೇ ಜಾತಿಯ ತಾರತಮ್ಯವಿಲ್ಲದೇ ಅವಕಾಶ ಕಲ್ಪಿಸಿದ್ದರು. ಡಾ. ಬಿ.ಆರ್. ಅಂಬೇಡ್ಕರ್‌ ಅವರ ಕಾನೂನು ಪಾಂಡಿತ್ಯ ಪರಿಗಣಿಸಿ, ಮುಂಬೈ ಕಾನೂನು ಕಾಲೇಜನಲ್ಲಿ ಉಪನ್ಯಾಸಕ ಹುದ್ದೆ ಬದಲು ಪ್ರಾಧ್ಯಾಪಕರನ್ನಾಗಿ ನೇಮಕ ಮಾಡಿ ಕಾಲೇಜಿನ ಘನತೆ ಹೆಚ್ಚಿಸಿದರು ಎಂದರು.

ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಪತಿ ಡಾ. ಕೆ.ಬಿ. ಗುಡಸಿ, ಸರ್. ಸಿದ್ಧಪ್ಪ ಕಂಬಳಿ ಅವರ ಶ್ರಮ ಹಾಗೂ ಪ್ರಾಮಾಣಿಕ ಪ್ರಯತ್ನವಿರದಿದ್ದರೆ ಧಾರವಾಡ ವಿದ್ಯಾಕಾಶಿ ಆಗಲು ಸಾಧ್ಯವಾಗುತ್ತಿರಲಿಲ್ಲ. ಎಲ್ಲಿಯವರೆಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಕರ್ನಾಟಕ ಕಾಲೇಜ ಇರುತ್ತದೆಯೋ ಅಲ್ಲಿಯವರೆಗೆ ಸರ್. ಕಂಬಳಿ ಅವರ ಹೆಸರು ಅಜರಾಮರ. ಅವರೊಬ್ಬ ಮುತ್ಸದ್ಧಿ ರಾಜಕಾರಣಿ, ರಾಜಕಾರಣಿಗಳಿಗೆ ಮಾದರಿ ಎಂದರು.

ಪ್ರಾಚಾರ್ಯ ಡಾ. ಎಸ್. ಆರ್. ಮಂಜುಳಾ ಮಾತನಾಡಿದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಶಿವಶರಣ ಕಲಬಶೆಟ್ಟರ ಇದ್ದರು. ಡಾ. ಶೈಲಜಾ ಅಮರಶೆಟ್ಟಿ ಸ್ವಾಗತಿಸಿದರು. ಶಂಕರ ಕುಂಬಿ ಪ್ರಾಸ್ತಾವಿಕ ಮಾತನಾಡಿದರು. ವಿಶ್ವೇಶ್ವರಿ ಹಿರೇಮಠ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.