ಸಾರಾಂಶ
₹ 3 ಕೋಟಿ ವೆಚ್ಚದಲ್ಲಿ ನೂತನ ಶಿಲಾ ದೇಗುಲ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ನಡೆದಿದ್ದು ಶೀಘ್ರ ಮುಗಿಯಲಿದೆ.
ಹುಬ್ಬಳ್ಳಿ:
ಪವಾಡ ಪುರುಷ ಉಣಕಲ್ ಸಿದ್ದಪ್ಪಜ್ಜ ಇಂದಿಗೂ ಅಸಂಖ್ಯಾತ ಭಕ್ತ ಸಮೂಹದ ಮನದಂಗಳದಲ್ಲಿ ನಿತ್ಯ ಸತ್ಯವಾಗಿದ್ದಾರೆ ಎಂದು ಸುಳ್ಳದ ಪಂಚಗ್ರಹ ಹಿರೇಮಠದ ಸಿದ್ದರಾಮೇಶ್ವರ ಶ್ರೀ ಹೇಳಿದರು.ಇಲ್ಲಿನ ಉಣಕಲ್ ಹೊಸಮಠದಲ್ಲಿ ಶುಕ್ರವಾರ ಜರುಗಿದ ಸದ್ಗುರು ಸಿದ್ದಪ್ಪಜ್ಜನವರ 165ನೇ ಜಯಂತ್ಯುತ್ಸವ ಹಾಗೂ ತೊಟ್ಟಿಲೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ದೇವಸ್ಥಾನ ಸಮಿತಿ ಅಧ್ಯಕ್ಷ ರಾಜಣ್ಣ ಕೊರವಿ ಮಾತನಾಡಿ, ₹ 3 ಕೋಟಿ ವೆಚ್ಚದಲ್ಲಿ ನೂತನ ಶಿಲಾ ದೇಗುಲ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ನಡೆದಿದ್ದು ಭಕ್ತ ಸಮೂಹದ ಕೊಡುಗೆ ಅಪಾರ ಎಂದರು.ಹಿರಿಯ ಚಿಂತಕ ಕಾನಧೇನು ಸಿದ್ದನಗೌಡರ ಅವರು ಸದ್ಗುರು ಸಿದ್ದಪ್ಪಜ್ಜ ಪವಾಡ ಮಹಿಮೆ ವಿವರಿಸಿ, ಗೋವನಕೊಪ್ಪ ಮಠದ ಜಾತ್ರಾಮಹೋತ್ಸವ ದಿನ ಬದಲಿಸುವ ಅಗತ್ಯವಿದೆ ಎಂದು ಸಲಹೆ ನೀಡಿದರು. ನಂತರ ಸಿದ್ದರಾಮೇಶ್ವರ ಶ್ರೀಗಳು ಸಿದ್ದಪ್ಪಜ್ಜನವರ ಬೃಹತ್ ಶಿಲಾ ಮಂಟಪ ದೇಗುಲ ನಿರ್ಮಾಣ ಕಾರ್ಯ ವೀಕ್ಷಿಸಿದರು. ಪ್ರಗತಿ ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಆಡಳಿತ ಮಂಡಳಿಯ ಸದಸ್ಯರಾದ ರಾಮಣ್ಣ ಪದ್ಮಣ್ಣವರ, ಶಿವಾಜಿ ಕನ್ನಿಕೊಪ್ಪ, ಗುರುಸಿದ್ದಪ್ಪ ಮೆಣಸಿನಕಾಯಿ, ಗುರುಸಿದ್ದಪ್ಪ ಬೆಂಗೇರಿ ಮುಂತಾದವರಿದ್ದರು. ನಂತರ ನಡೆದ ತೊಟ್ಟಿಲೋತ್ಸವ ಸಂಭ್ರಮದಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು.