ಸಿದ್ದಾಪುರ: ಜಿಲ್ಲೆಯ ದೊಡ್ಡ ಗ್ರಾಮ ಪಂಚಾಯಿತಿಗೆ ಖಾಯಂ ಪಿಡಿಒ ಕೊರತೆ!

| Published : Sep 26 2024, 10:20 AM IST

ಸಾರಾಂಶ

ಜಿಲ್ಲೆಯಲ್ಲಿ ಅತಿ ಹೆಚ್ಚಿನ ಸದಸ್ಯರನ್ನು ಹೊಂದಿರುವ ಸಿದ್ದಾಪುರ ಗ್ರಾಮ ಪಂಚಾಯತಿಯಲ್ಲಿ ಖಾಯಂ ಪಿಡಿಒ ಇಲ್ಲದೆ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಮ್ಮ ಪಂಚಾಯತಿ ಕಚೇರಿ ಕೆಲಸಗಳು ಸಕಾಲದಲ್ಲಿ ನಡೆಯದೆ ಪರಿತಪಿಸುವಂತಾಗಿದೆ. ಗ್ರಾಮದ ಆಭಿವೃದ್ಧಿಗೂ ಹಿನ್ನಡೆಯಾಗಿದೆ‌.

ಆರ್. ಸುಬ್ರಮಣಿ

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಜಿಲ್ಲೆಯಲ್ಲಿ ಅತಿ ಹೆಚ್ಚಿನ ಸದಸ್ಯರನ್ನು ಹೊಂದಿರುವ ಸಿದ್ದಾಪುರ ಗ್ರಾಮ ಪಂಚಾಯತಿಯಲ್ಲಿ ಖಾಯಂ ಪಿಡಿಒ ಇಲ್ಲದೆ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಮ್ಮ ಪಂಚಾಯತಿ ಕಚೇರಿ ಕೆಲಸಗಳು ಸಕಾಲದಲ್ಲಿ ನಡೆಯದೆ ಪರಿತಪಿಸುವಂತಾಗಿದೆ. ಗ್ರಾಮದ ಆಭಿವೃದ್ಧಿಗೂ ಹಿನ್ನಡೆಯಾಗಿದೆ‌.

ಜಿಲ್ಲೆಯಲ್ಲಿ ಹೆಚ್ಚು ವರಮಾನವುಳ್ಳ ಗ್ರಾಮ ಪಂಚಾತಿಗಳಲ್ಲಿ ಸಿದ್ದಾಪುರ ಗ್ರಾಮ ಪಂಚಾಯತಿಯೂ ಒಂದು. ಅನೇಕ ಗ್ರಾಮಗಳನ್ನೊಳಗೊಂಡಿರುವ ಪಂಚಾಯಿತಿಯಲ್ಲಿ ಒಟ್ಟು 25 ಮಂದಿ ಸದಸ್ಯರಿದ್ದಾರೆ. ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಗ್ರಾಮ ಪಂಚಾಯತಿ ಕಚೇರಿಗೆ ಆಗಮಿಸುತ್ತಾರೆ. ಆದರೆ ಕಳೆದ ಕೆಲವು ವರ್ಷಗಳಿಂದ ಗ್ರೇಡ್ 1 ಪಂಚಾಯತಿ ಎನಿಸಿಕೊಂಡಿರುವ ಪಂಚಾಯತಿಗೆ ಖಾಯಂ ಪಿಡಿಓ ಇಲ್ಲ.

ಜಿಲ್ಲೆಯ ಇತರೆ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತಿರುವ ಪಿಡಿಒಗಳನ್ನು ತಿಂಗಳಿಗೆ ಇಷ್ಟು ದಿನ ಎಂದು ನಿಯೋಜಿಸಿ ಇಲ್ಲಿ ಕಾರ್ಯನಿರ್ವಹಿಸುತಾರೆ. ಹಾಗಾಗಿ ವಾರಕ್ಕೆ ಎರಡು ಅಥವಾ ಮೂರು ದಿನ ಆಗಮಿಸುವ ಪಿಡಿಒ ಅವರಿಂದಾಗಿ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳನ್ನು ಮಾಡಲು ಕಾದು ಕುಳಿತಿರಬೇಕಾದಂತಹ ಪರಿಸ್ಥಿತಿ ಇದೆ.

ಖಾಯಂ ಪಿಡಿಓ ನೇಮಕಾತಿಗೆ ಸಾರ್ವಜನಿಕರು ಸಂಘ ಸಂಸ್ಥೆಗಳು ಎಷ್ಟೋ ಬಾರಿ ಮನವಿ ಮಾಡಿದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಗ್ರಾಮದ ಅಭಿವೃದ್ಧಿ ಕೂಡ ಕುಂಠಿತವಾಗಿದೆ.

ಈಗ ನಿಯೋಜನೆಗೊಂಡಿರುವ ಪಿಡಿಒ ಅನಾರೋಗ್ಯ ನಿಮಿತ್ತ ಕಳೆದ ಕೆಲವು ದಿನಗಳಿಂದ ಕರ್ತವ್ಯಕ್ಕೆ ಹಾಜರಾಗದ ಹಿನ್ನಲೆಯಲ್ಲಿ ತಮ್ಮ ಕೆಲಸ ಕಾರ್ಯಗಳು ನಡೆಯುತಿಲ್ಲ ಎಂದು ಸಾರ್ವಜನಿಕರು ಆರೋಪಿಸುತಿದ್ದಾರೆ.

ಕಸ ವಿಲೇವಾರಿ, ವನ್ಯಜೀವಿಗಳ ಉಪಟಳ ಸೇರಿದಂತೆ ಹಲವು ಗಂಭೀರ ಮೂಲ ಸಮಸ್ಯೆಗಳನ್ನು ಎದುರಿಸುತ್ತಿರುವ ಸಿದ್ದಾಪುರ ಗ್ರಾಮ ಪಂಚಾಯತಿಯಲ್ಲಿ ಪಿಡಿಒ ಇಲ್ಲದಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತಿದ್ದು ಕೂಡಲೇ ಖಾಯಂ ಪಿಡಿಒ ನೇಮಕ ಮಾಡಬೇಕೆಂದು ಒತ್ತಾಯಿಸಿದ್ದಾರೆ.

.............

ಗ್ರಾಮ ಪಂಚಾಯತಿಯಲ್ಲಿ ಖಾಯಂ ಪಿಡಿಒ ಇಲ್ಲದೆ ಸಾರ್ವಜನಿಕರಿಗೆ ತಮ್ಮ ಕೆಲಸ ಕಾರ್ಯಗಳು ನಡೆಯಿತಿಲ್ಲ. ಅದಷ್ಟು ಶೀರ್ಘವಾಗಿ ಖಾಯಂ ಪಿಡಿಒ ನೇಮಕ ಮಾಡಬೇಕು. ಇಲ್ಲದಿದ್ದಲ್ಲಿ ಸಾರ್ವಜನಿಕರನ್ನು ಒಗ್ಗೂಡಿಸಿ ಪಂಚಾಯತಿ ಮುಂಭಾಗ ಹೋರಾಟ ಹಮ್ಮಿಕೊಳ್ಳಲಾಗುವುದು.

-ದಿಜೀತ್‌ ಟಿ.ಆರ್‌., ಸಹ ಪ್ರಮುಖ್ , ಬಿಜೆಪಿ ಶಕ್ತಿ ಕೇಂದ್ರ, ಸಿದ್ದಾಪುರ.

...................

ಹುಷಾರಿಲ್ಲದಿದ್ದರೂ ಈಗಿನ ನಿಯೋಜಿತ ಪಿಡಿಒ ವಾರಕ್ಕೆ ಒಂದೆರಡು ದಿನ ಬಂದು ಕೆಲಸ ಮಾಡಿ ಹೋಗುತ್ತಿದ್ದಾರೆ. ಅವರಿಗೆ ಹುಷಾರಿಲ್ಲದ ಕಾರಣ ಹೆಚ್ಚು ಸಮಯ ಕಚೇರಿಯಲ್ಲಿ ಕೂರಲು ಸಾಧ್ಯವಾಗುತಿಲ್ಲ.

-ಪ್ರೇಮಾ ಗೋಪಾಲ್, ಅಧ್ಯಕ್ಷೆ, ಗ್ರಾಮ ಪಂಚಾಯತಿ, ಸಿದ್ದಾಪುರ.