ಮಗನ ಹುಟ್ಟುಹಬ್ಬಕ್ಕೆ ಬಂದಿದ್ದ ವ್ಯಕ್ತಿ ಸಿಡಿಲು ಬಡಿದು ಸಾವು

| Published : May 15 2024, 01:38 AM IST

ಮಗನ ಹುಟ್ಟುಹಬ್ಬಕ್ಕೆ ಬಂದಿದ್ದ ವ್ಯಕ್ತಿ ಸಿಡಿಲು ಬಡಿದು ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾದ್ಯಂತ ಮಂಗಳವಾರ ಸಂಜೆ ಸಿಡಿಲು ಸಹಿತ ಗಾಳಿಮಳೆಯಾಗಿದೆ. ಇದರಿಂದ ಜಿಲ್ಲೆಯ ಕೆಲವು ಕಡೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು.

ಕುಂದಾಪುರ: ಸಿಡಿಲು ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಂಗಳವಾರ ಸಂಜೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಸಿದ್ದಾಪುರ ಗ್ರಾಮದ ಸುರೇಶ ಶೆಟ್ಟಿ (38) ಎಂದು ಗುರುತಿಸಲಾಗಿದೆ.ಮಂಗಳವಾರ ಸಂಜೆ ಸುರೇಶ್ ಶೆಟ್ಟಿ ಅವರು ತಮ್ಮ ಕಿರಿಯ ಮಗನೊಂದಿಗೆ ಮನೆ ಸಮೀಪ ಮರದಿಂದ ಮಾವು ಕೀಳಲು ಹೊರಟಿದ್ದರು. ಆಗ ಹಠಾತ್ತನೇ ಸಿಡಿಲು ಅವರ ಎದೆಗೆ ಬಡಿದು, ಅವರು ಕುಸಿದುಬಿದ್ದು ಮೃತಪಟ್ಟಿದ್ದಾರೆ. ಅದೃಷ್ಟವಶಾತ್ ಜೊತೆಗಿದ್ದ ಕಿರಿಯ ಮಗ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇಲ್ಲಿನ ಹೆನ್ನಬೈಲು ಮೂಲದ ಬಸವ ಶೆಟ್ಟಿ ಅವರ ಪುತ್ರ ಸುರೇಶ್ ಶೆಟ್ಟಿ ಬೆಂಗಳೂರಿನ ಹೋಟೆಲೊಂದರಲ್ಲಿ ಉದ್ಯೋಗಿಯಾಗಿದ್ದರು. ಮಗನ ಹುಟ್ಟುಹಬ್ಬ ಆಚರಿಸಲು ಮನೆಗೆ ಬಂದಿದ್ದ ಅವರು, ಪತ್ನಿಯ ನಿವಾಸದಲ್ಲಿ ತಂಗಿದ್ದರು. ಅವರ ಹಠಾತ್ ಸಾವು ಅವರ ಕುಟುಂಬಕ್ಕೆ ಆಘಾತವನ್ನುಂಟು ಮಾಡಿದೆ.ಮೃತರು ಪತ್ನಿ ವಿನೋದ, ಎಂಟು ವರ್ಷದ ಸುಮೋದ್ ಮತ್ತು ನಾಲ್ಕು ವರ್ಷದ ಮಗ ಸರ್ವದಾ ಅವರನ್ನು ಅಗಲಿದ್ದಾರೆ. ಈ ಘಟನೆ ಸಂಬಂಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ: ಗುಡುಗು ಸಹಿತ ಮಳೆಜಿಲ್ಲಾದ್ಯಂತ ಮಂಗಳವಾರ ಸಂಜೆ ಸಿಡಿಲು ಸಹಿತ ಗಾಳಿಮಳೆಯಾಗಿದೆ. ಇದರಿಂದ ಜಿಲ್ಲೆಯ ಕೆಲವು ಕಡೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಕೆಲಸಕ್ಕೆಂದು ಪೇಟೆಗೆ ಬಂದಿದ್ದ ಜನರು ಅನಿರೀಕ್ಷಿತ ಮಳೆಯಿಂದ ಅಕ್ಕಪಕ್ಕದ ಅಂಗಡಿ ಮುಂಗಟ್ಟು, ಬಸ್ ನಿಲ್ದಾಣಗಳಲ್ಲಿ ಅಶ್ರಯ ಪಡೆಯಬೇಕಾಯಿತು.

ಸಂಜೆ 4 ಗಂಟೆ ಸುಮಾರಿಗೆ ಜಿಲ್ಲಾದ್ಯಂತ ದಟ್ಟ ಮೋಡ ಕವಿಯಿತು. ಉಡುಪಿ, ಮಣಿಪಾಲ, ಬ್ರಹ್ಮಾವರ, ಕಾಪು ಭಾಗಗಳಲ್ಲಿ ಬಲವಾದ ಗಾಳಿ ಬೀಸಿತು. ಜೊತೆಗೆ ಸಿಡಿಲು ಮಿಂಚು ಕೂಡ ಕಾಣಿಸಿಕೊಂಡಿತು. ಮಣಿಪಾಲ ಮತ್ತು ಉಡುಪಿ ನಗರದಲ್ಲಿ ಕೆಲವು ನಿಮಿಷಗಳ ಕಾಲ ಉತ್ತಮ ಮಳೆಯೂ ಆಯಿತು.ಸೋಮವಾರ ರಾತ್ರಿ ಜಿಲ್ಲೆಯ ಕೆಲವು ಕಡೆಗಳಲ್ಲಿ ಮಳೆಯಾಗಿದೆ. ಕಾರ್ಕಳ ಮತ್ತು ಕಾಪು ಭಾಗಳಲ್ಲಿ ಉತ್ತಮ ಮಳೆಯಾಗಿತ್ತು. ಆದರೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಮುಂದಿನ ಕೆಲವು ದಿನಗಳ ಕಾಲ ಉತ್ತಮ ಮಳೆಯಾಗುವ ಬಗ್ಗೆ ಮುನ್ನೆಚ್ಚರಿಕೆ ನೀಡಿದೆ.