ರಟಕಲ್‌ ವಿರಕ್ತ ಮಠದ ಸಿದ್ದರಾಮ ಸ್ವಾಮೀಜಿ ನಿಧನ

| Published : Jul 09 2024, 12:54 AM IST

ಸಾರಾಂಶ

ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ವಿರಕ್ತ ಮಠದ ಪೀಠಾಧಿಪತಿ ಸಿದ್ದರಾಮ ಸ್ವಾಮೀಜಿ (35) ಸೋಮವಾರ ವಿಧಿವಶರಾಗಿದ್ದಾರೆ. ಸ್ವಾಮೀಜಿಯವರ ಅಕಾಲಿಕ ನಿಧನ ವಾರ್ತೆ ಕೇಳಿ ಮಠದ ಭಕ್ತರು ಕಂಬನಿ ಹಾಕುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ವಿರಕ್ತ ಮಠದ ಪೀಠಾಧಿಪತಿ ಸಿದ್ದರಾಮ ಸ್ವಾಮೀಜಿ (35) ಸೋಮವಾರ ವಿಧಿವಶರಾಗಿದ್ದಾರೆ. ಸ್ವಾಮೀಜಿಯವರ ಅಕಾಲಿಕ ನಿಧನ ವಾರ್ತೆ ಕೇಳಿ ಮಠದ ಭಕ್ತರು ಕಂಬನಿ ಹಾಕುತ್ತಿದ್ದಾರೆ.

ಮಠದಲ್ಲಿ ಮಲಗಿದ್ದ ವೇಳೆ ಭಾನುವಾರ ರಾತ್ರಿ ಹೃದಯಾಘಾತವಾಗಿದೆ. ಮಠದ ಕೆಲಸಗಾರರು, ಅವರ ಶಿಷ್ಯರು ಸೋಮವಾರ ಬೆಳಗ್ಗೆ ಸ್ವಾಮೀಜಿ ಮಲಗಿದ್ದ ಕೋಣೆಗೆ ಹೋದಾಗ ಅವರು ನಿಧನರಾಗಿರೋದು ಕಂಡು ಬಂದಿದೆ.

ಶ್ರೀಗಳು ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಕಟನೂರ್‌ ಗ್ರಾಮದವರು. ಪೂರ್ವಾಶ್ರಮದಲ್ಲಿ ಕೋಕಟನೂರ್‌ ಗ್ರಾಮದ ಮೂಲದವರಾಗಿದ್ದ ಶ್ರೀಗಳು ಕಳೆದ 8 ವರ್ಷಗಳಿಂದ ಸ್ವಾಮೀಜಿಗಳಾಗಿ ರಟಕಲ್‌ ಹಿರೇಮಠಕ್ಕೆ ಬಂದು ನೆಲೆಸಿದ್ದರು. ಕಳೆದ 8 ವರ್ಷದಿಂದ ರಟಕಲ್‌ನಲ್ಲಿರುವ ವಿರಕ್ತ ಮಠದ ಸಾರಥ್ಯ ವಹಿಸಿ ಅನೇಕ ಸುಧಾರಣೆಗಳನ್ನು ಮಾಡಿ ಹೆಸರು ಪಡೆದಿದ್ದರು.

ಶ್ರೀಗಳ ಅಕಾಲಿಕ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಹುಲಸೂರಿನ ಶಿವಾನಂದ ಸ್ವಾಮೀಜಿ, ನಾಗೂರಿನ ಅಲ್ಲಮಪ್ರಭು ಸ್ವಾಮೀಜಿ, ಸ್ಥಳೀಯ ಹಿರೇಮಠದ ರೇವಣಸಿದ್ದ ಶಿವಾಚಾರ್ಯರು, ಗೌರಿಗಣೇಶ ಗುಡ್ಡದ ರೇವಣಸಿದ್ದ ಶರಣರು, ಭರತನೂರ್‌ ಗುರುನಂಜೇಶ್ವರ ಮಠದ ಸ್ವಾಮೀಜಿಗಳು ಸೇರಿದಂತೆ ಅನೇಕ ಮಠಗಳ ಸ್ವಾಮೀಜಿಗಳು, ಹಿರಿಯರು, ರಟಕಲ್‌ ಹಾಗೂ ಸುತ್ತಲಿನ ಸಾವಿರಾರು ಭಕ್ತರು ಮಠದಲ್ಲಿಯೇ ಸೇರಿದ್ದು ಸ್ವಾಮೀಜಿಗಳ ನಿಧನಕ್ಕೆ ಕಂಬನಿ ಹಾಕುತ್ತಿದ್ದಾರೆ.

ಭಾನುವಾರ ವಚನ ಸಂಗಮ ಆಯೋಜಿಸಿದ್ದರು:

ಕಾಳಗಿ ತಾಲೂಕಿನಲ್ಲಿ ರಟಕಲ್‌ನಲ್ಲಿ ಸಿದ್ದರಾಮ ಸ್ವಾಮೀಜಿ ಭಾನುವಾರವಷ್ಟೆ ಮಠದ ವತಿಯಿಂದಲೇ ಬಸವಾದಿ ಶರಣರ ವಚನ ಸಂಗಮ ಕಾರ್ಯಕ್ರಮ ಯಶಸ್ವಿಯಾಗಿ ಆಯೋಜಿಸಿದ್ದರು.

ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್‌, ಸಿಎಂ ಸಲಹೆಗಾರರಾದ ಬಿಆರ್‌ ಪಾಟೀಲ್‌, ಎಂಎಲ್‌ಸಿ ಜಗದೇವ ಗುತ್ತೇದಾರ್‌, ಕೆಪಿಸಿಸಿ ಮುಖಂಡರಾದ ಸುಭಾಸ ರಾಠೋಡ, ಸುತ್ತಲಿನ ಮಠಗಳ ಗುರುಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇದೇ ಸಮಾರಂಭದಲ್ಲಿ ಪ್ರತಿಭಾವಂತ ಮಕ್ಕಳಿಗೆ ಸ್ವಾಮೀಜಿಗಳು ಸನ್ಮಾನಿಸಿ ಹರಸಿದ್ದರು.

ಈ ಸಮಾರಂಭದ ನಂತರ ವಿಶ್ರಾಂತಿಗೆ ತೆರಳಿದ್ದ ಗುರುಗಳು ಇಹಲೋಕವನ್ನೇ ತ್ಯಜಿಸಿರೋ ಸುದ್ದಿ ರಟಕಲ್‌ನ ಈ ವಿರಕ್ತ ಮಠದ ಭಕ್ತರ ಪಾಲಿಗೆ ಅರಗಿಸಿಕೊಳ್ಳಲಾರದಂತಹ ಸುದ್ದಿಯಾಗಿ ಪರಿಣಮಿಸಿದೆ. ಸೋಮವಾರ ನಸುಕಿನ ಜಾವ ತೀವ್ರ ಹೃದಯಾಘಾತದಿಂದ ಸ್ವಾಮೀಜಿ ಇಹಲೋಕ ತ್ಯಜಿಸಿರೋ ಪ್ರಸಂಗ ಮಠದ ಭಕ್ತರನ್ನು ಶೋಕಸಾಗರಕ್ಕೆ ತಳ್ಳಿದೆ.

------

ರಟಕಲ್‌ ವಿರಕ್ತ ಮಠದ ಸಿದ್ಧರಾಮ ಸ್ವಾಮೀಜಿ ನಿಧನ ಅತ್ಯಂತ ದುರಾದೃಷ್ಟಕರ ಸಂಗತಿ. ಭಾನುವಾರ ಮಠದಲ್ಲಿನ ವಚನ ಸಂಗಮದಲ್ಲಿ ಪಾಲ್ಗೊಂಡು ಗುರುಗಳೊಂದಿಗೆ ನಾನೇ ಸಮಾರಂಭ ದೀಪ ಬೆಳಗಿಸಿದ್ದೆ. ನಮಗೆ ಸನ್ಮಾನ ಮಾಡಿ ಪ್ರಸಾದ ನೀಡಿದ್ದರು. ತುಂಬ ಪ್ರಗತಿಪರ ಚಿಂತನೆಗಳ ಸಿದ್ದರಾಮ ಶ್ರೀಗಳು ಇಂದಿಲ್ಲ ಅನ್ನೋದು ನಂಬಲಾಗುತ್ತಿಲ್ಲ. ಮಠದ ಭಕ್ತರಿಗೆ ಶ್ರೀಗಳ ಅಗಲಿಕೆಯ ದುಃಖ ಸಹಿಸುವ ಶಕ್ತಿ ಭಗವಂತ ನೀಡಲಿ. ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಸಾಗೋಣ.

- ಡಾ. ಶರಣಪ್ರಕಾಶ ಪಾಟೀಲ್‌, ವೈದ್ಯಕೀಯ ಶಿಕ್ಷಣ ಖಾತೆ ಸಚಿವ

------

ರಟಕಲ್‌ ವಿರಕ್ತ ಮಠದ ಸಿದ್ದರಾಮ ಸ್ವಾಮೀಜಿ ನಿಧನ ವಾರ್ತೆ ಕೇಳಿ ದಂಗಾದೆ. ಭಾನುವಾರ ರಾತ್ರಿಯಷ್ಟೇ ಸ್ವಾಮೀಜಿಗಳ ದರುಶನ ಪಡೆದು ಮಠದಲ್ಲಿನ ವಚನ ಸಂಗಮದಲ್ಲಿ ಪಾಲ್ಗೊಂಡಿದ್ದೆ, ಅವರೇ ನಮಗೆ ಆಶಿರ್ವಾದ ಮಾಡಿದ್ದರು. ಅವರು ಮಠಕ್ಕೆ ಗುರುಗಳಾಗಿ ಬಂದಾದ ಮೇಲೆ ಅನೇಕ ಪ್ರಗತಿಪರ ಕೆಲಸಗಳಿಗೆ ಚಾಲನೆ ಕೊಟ್ಟಿದ್ದರು. ಸುತ್ತಲಿನ ಪರಿಸರದಲ್ಲಿ ಹೊಸ ಚಿಂತನೆಗೆ ಮುನ್ನುಡಿ ಬರೆದಿದ್ದರು. ಶ್ರೀಗಳ ಅಕಾಲಿಕ ನಿಧನದಿಂದ ಬಹುದೊಡ್ಡ ನಷ್ಟ ನಮ್ಮ ಭಾಗಕ್ಕಾಗಿದೆ.

- ಸುಭಾಸ ರಾಠೋಡ, ಕೆಪಿಸಿಸಿ ಉಪಾಧ್ಯಕ್ಷರು. ಕಲಬುರಗಿ

------

ಸಿದ್ದರಾಮ ಸ್ವಾಮೀಜಿಗಳ ನಿಧನ ಸುದ್ದಿ ನಮಗೆ ಚಕಿತಗೊಳಿಸಿದೆ, ನಾವೇಲ್ಲರೂ ರಟಕಲ್‌ ಮಠದಲ್ಲಿ ನಿನ್ನೆ ಸಮಾರಂಭದಲ್ಲಿ ಪಾಲ್ಗೊಂಡು ಸ್ವಾಮೀಜಿಗಳು ನೀಡಿದ ಪ್ರಸಾದ ಸೇವಿಸಿದೆವು. ನನಗೆ ಹಾಗೂ ಸಚಿವರಾದ ಶಣಪ್ರಕಾಶ ಪಾಟೀಲರಿಗೆ ಸ್ವಾಮೀಜಿಗಳೇ ಸನ್ಮಾನ ಮಾಡಿ ಹರಸಿದರು. ಇಷ್ಟೆಲ್ಲಾ ಆಗಿ ಗುರುಗಳಿಂದ ಬೀಳ್ಕೊಂಡು ಬಂದೇವು. ಬೆಳಗ್ಗೆ ಅವರಿಲ್ಲ ಎಂಬ ಸುದ್ದಿ ಅರಗಿಸಿಕೊಳ್ಳಲು ಆಗುತ್ತಿಲ್ಲ. ನನಗಂತೂ ನಂಬಲಿಕ್ಕೇ ಆಗುತ್ತಿಲ್ಲ.

- ಜಗದೇವ ಗುತ್ತೇದಾರ್‌ ಕಾಳಗಿ, ವಿಧಾನ ಪರಿಷತ್‌ ಸದಸ್ಯರು, ಕಲಬುರಗಿ