ಒಳಮೀಸಲು ಚೆಂಡು ಈಗ ಕೇಂದ್ರ ಸರ್ಕಾರದ ಅಂಗಳಕ್ಕೆ: ರಾಜ್ಯ ಸರ್ಕಾರದ ಮಹತ್ವದ ತೀರ್ಮಾನ

| Published : Jan 19 2024, 01:47 AM IST / Updated: Jan 19 2024, 12:04 PM IST

central govt

ಸಾರಾಂಶ

ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ವಿವಿಧ ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸಲು ಸಂವಿಧಾನದ 341ನೇ ಅನುಚ್ಛೇದಕ್ಕೆ ಹೊಸದಾಗಿ 3ನೇ ಖಂಡ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ವಿವಿಧ ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸಲು ಸಂವಿಧಾನದ 341ನೇ ಅನುಚ್ಛೇದಕ್ಕೆ ಹೊಸದಾಗಿ 3ನೇ ಖಂಡ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.

ತನ್ಮೂಲಕ ಕಳೆದ ಎರಡೂವರೆ ದಶಕದಿಂದ ಕೇಳಿಬರುತ್ತಿರುವ ಒಳ ಮೀಸಲಾತಿ ಜಾರಿಯ ವಿಷಯವನ್ನು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಅಂಗಳಕ್ಕೆ ದೂಡಿದೆ.

ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ಪರಿಶಿಷ್ಟ ಜಾತಿಯ ಎಡಗೈ (ಮಾದಿಗ) ಸಮುದಾಯಗಳ ಬೇಡಿಕೆಗೆ ಕಡೆಗೂ ಸ್ಪಂದಿಸಿರುವ ರಾಜ್ಯ ಸರ್ಕಾರವು, ‘ಕೇಂದ್ರ ಸರ್ಕಾರವು ಸಂವಿಧಾನ ತಿದ್ದುಪಡಿ ಮಾಡದ ಹೊರತು ಒಳ ಮೀಸಲಾತಿ ಜಾರಿಗೆ ತರಲು ಸಾಧ್ಯವಿಲ್ಲ.

 ಹೀಗಾಗಿ ಸಂವಿಧಾನ ತಿದ್ದುಪಡಿ ಮಾಡುವ ಮೂಲಕ ರಾಜ್ಯಗಳಿಗೆ ಒಳ ಮೀಸಲಾತಿ ಜಾರಿ ಮಾಡಲು ಅವಕಾಶ ಕಲ್ಪಿಸಿಕೊಡಬೇಕು’ ಎಂದು ಶಿಫಾರಸು ಮಾಡಲು ನಿರ್ಧಾರ ಕೈಗೊಂಡಿದೆ.

ಏನಿದು ತಿದ್ದುಪಡಿ ಪ್ರಸ್ತಾವನೆ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ, ಒಳ ಮೀಸಲಾತಿ ಜಾರಿ ಸಲುವಾಗಿ ಸಂವಿಧಾನದ ಅನುಚ್ಛೇದ 341ರಲ್ಲಿ ಹೊಸದಾಗಿ ಖಂಡ 3ನ್ನು ಸೇರಿಸುವ ಕುರಿತು ಶಿಫಾರಸು ಮಾಡಲು ತೀರ್ಮಾನಿಸಿದೆ.

341 (1) ನೇ ಖಂಡದ ಅಧಿಸೂಚನೆ ಅಥವಾ 341 (2)ನೇ ಖಂಡದ ಪ್ರಕಾರ ಸಂಸತ್ತು ಜಾತಿ, ಜನಾಂಗ ಅಥವಾ ಬುಡಕಟ್ಟು ಅಥವಾ ಜನರ ಗುಂಪುಗಳ ಪಟ್ಟಿಯನ್ನು ರೂಪಿಸುತ್ತದೆ. 

ಇದಕ್ಕೆ ಸಂಬಂಧಿಸಿದಂತೆ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ನೀಡಿದ ಶಿಫಾರಸಿನ ಆಧಾರದಲ್ಲಿ ಕೇಂದ್ರ ಸರ್ಕಾರವು ಉಪ ವರ್ಗೀಕರಣವನ್ನು ಮಾಡಬಹುದು ಅಥವಾ ಉಪ ವರ್ಗೀಕರಣವನ್ನು ತೆಗೆದು ಹಾಕಲು 341 (3) ಖಂಡವು ಅವಕಾಶ ಕಲ್ಪಿಸುತ್ತದೆ.

ಈ ಸಂಬಂಧ ಪರಿಶಿಷ್ಟ ಜಾತಿಗಳ ವರ್ಗೀಕರಣ ಬಗ್ಗೆ ದೆಹಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಉಷಾ ಮೆಹ್ರಾ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರ ರಚಿಸಿದ ರಾಷ್ಟ್ರೀಯ ಆಯೋಗವು 341(3) ಖಂಡ ಸೇರ್ಪಡೆ ಮೂಲಕ ಜಾತಿಗಳ ಉಪ ವರ್ಗೀಕರಣಕ್ಕೆ ಅವಕಾಶ ನೀಡಬಹುದು ಎಂದು ಹೇಳಿದೆ. ಇದನ್ನು ಯಥಾವತ್ತಾಗಿ ಜಾರಿಗೆ ತರಬೇಕು ಎಂದು ರಾಜ್ಯ ಸರ್ಕಾರವು ಕೇಂದ್ರವನ್ನು ಕೋರಲು ನಿರ್ಧಾರ ಮಾಡಿದೆ.

ರಾಜ್ಯಕ್ಕೆ ಅಧಿಕಾರ ಇಲ್ಲ: ಈ ಕುರಿತು ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ವಿಧಾನಸಭೆ ಚುನಾವಣೆ ವೇಳೆ ನಾವು ಎಸ್ಸಿ-ಎಸ್ಟಿ ಸಮಾವೇಶ ನಡೆಸಿ ಸದಾಶಿವ ಆಯೋಗದ ವರದಿ ವಿಧಾನಸೌಧದಲ್ಲಿ ಮಂಡಿಸುತ್ತೇವೆ ಎಂದು ಭರವಸೆ ನೀಡಿದ್ದೆವು. 

ಇದರ ಬೆನ್ನಲ್ಲೇ ಅಂದಿನ ಬಿಜೆಪಿ ಸರ್ಕಾರವು ಕಾನೂನು ಸಚಿವರ ನೇತೃತ್ವದಲ್ಲಿ ರಚಿಸಿದ್ದ ಸಚಿವ ಸಂಪುಟ ಉಪ ಸಮಿತಿಯಿಂದ ವರದಿ ಪಡೆದು ಒಳ ಮೀಸಲಾತಿ ವರ್ಗೀಕರಣ ಕುರಿತು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. 

ಇದೇ ವೇಳೆ ಇನ್ನು ಮುಂದೆ ಸದಾಶಿವ ವರದಿ ಅಪ್ರಸ್ತುತ ಹಾಗೂ ಅದನ್ನು ಮುಕ್ತಾಯಗೊಳಿಸಲಾಗಿದೆ ಎಂದು ಹೇಳಲಾಗಿತ್ತು.ಆದರೆ ಬಳಿಕ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಪ್ರಕರಣ ನ್ಯಾಯಾಲಯದಲ್ಲಿದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ತಿರಸ್ಕರಿಸಿತ್ತು. 

ಇದೀಗ ನಾವು ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಮೂಲಕ ಒಳ ಮೀಸಲಾತಿ ಜಾರಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಹೇಳಿದರು.

ಪರಿಶಿಷ್ಟ ಜಾತಿಯ 101 ಜಾತಿಗಳಿಗೆ ಇದರಿಂದ ಅನುಕೂಲ ಆಗಲಿದೆ. 2004-05ರಲ್ಲಿ ಆಂಧ್ರ ಪ್ರಕರಣದಲ್ಲಿ ಹಾಗೂ ಇತ್ತೀಚೆಗೆ ಪಂಜಾಬ್‌, ಹರಿಯಾಣ ಸರ್ಕಾರಗಳ ಪ್ರಕರಣದಲ್ಲಿ ನ್ಯಾಯಾಲಯವು ಒಳ ಮೀಸಲಾತಿ ಪ್ರಸ್ತಾವನೆ ತಿರಸ್ಕರಿಸಿದೆ. 

ಇದಕ್ಕೆ ಸಂವಿಧಾನ ತಿದ್ದುಪಡಿ ಮಾಡದಿರುವುದು ಕಾರಣ. ಹೀಗಾಗಿ ನಾವು ಸಂವಿಧಾನ ತಿದ್ದುಪಡಿಗೆ ಮನವಿ ಮಾಡುತ್ತಿದ್ದೇವೆ. ಪ್ರಕರಣ ನ್ಯಾಯಾಲಯದಲ್ಲಿದ್ದರೂ ಸಂಸತ್ತಿಗೆ ಸಂವಿಧಾನ ತಿದ್ದುಪಡಿ ಮಾಡುವ ಪರಮೋಚ್ಚ ಅಧಿಕಾರವಿದೆ. ಹೀಗಾಗಿ ಕೇಂದ್ರವನ್ನು ಮನವಿ ಮಾಡುವ ಹೊರತಾಗಿ ನಮಗೆ ಬೇರೆ ಅಧಿಕಾರವಿಲ್ಲ ಎಂದು ಹೇಳಿದರು.

ನಾಳೆಯಿಂದ ಕೇಂದ್ರದ ಜತೆ ಹೋರಾಟ:  ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್‌.ಮುನಿಯಪ್ಪ ಮಾತನಾಡಿ, ರಾಜ್ಯದ ಮೇಲೆ ಹೋರಾಟ ಮಾಡಿ ಈಗ ಸಚಿವ ಸಂಪುಟ ನಿರ್ಣಯ ಮಾಡಿದ್ದೇವೆ. ರಾಜ್ಯದ ಪಾತ್ರ ಮುಕ್ತಾಯವಾಗಿದೆ. 

ಇನ್ನು ಸಂವಿಧಾನ ತಿದ್ದುಪಡಿ ಮಾಡುವವರೆಗೆ ಸತತವಾಗಿ ಕೇಂದ್ರದ ವಿರುದ್ಧ ಹೋರಾಟ ಮಾಡುತ್ತೇವೆ. ನಾಳೆಯಿಂದ ದೆಹಲಿ ಮೇಲೆ ಹೋರಾಟ ಮಾಡಲಾಗುವುದು. ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಲ್ಲ ಎಂದು ಹೇಳಿದರು.

ಯಾವ ಜಾತಿಯನ್ನೂ ಎಸ್ಸಿ ಪಟ್ಟಿಯಿಂದ ಬಿಡಲ್ಲಒಳ ಮೀಸಲಾತಿ ಜಾರಿ ಮಾಡಿದರೆ ಕೆಲ ಜಾತಿಗಳಿಗೆ ಎಸ್ಸಿ ಮೀಸಲಾತಿ ಕಳೆದುಕೊಳ್ಳುವ ಆತಂಕ ಇತ್ತು. 

ಇದೀಗ ಸಚಿವ ಸಂಪುಟ ಸಭೆಯಲ್ಲಿ ಭೋವಿ, ಬಂಜಾರ, ಕೊರಮ ಮತ್ತು ಕೊರಚ ಜಾತಿಗಳು ಹಾಗೂ ಅದರ ಪರ್ಯಾಯ ಜಾತಿಗಳು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿದ್ದು ಅದನ್ನು ಹಾಗೆಯೇ ಮುಂದುವರೆಸಲು ಹಾಗೂ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲೂ ಮುಂದುವರೆಸಲು ತೀರ್ಮಾನ ಮಾಡಲಾಗಿದೆ.

341(3) ಖಂಡ ಹೇಳುವುದೇನು?
ಪರಿಶಿಷ್ಟ ಜಾತಿಗಳಲ್ಲಿ ವರ್ಗೀಕರಣದ ಬಗ್ಗೆ ದೆಹಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಉಷಾ ಮೆಹ್ರಾ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರ ರಚಿಸಿದ ರಾಷ್ಟ್ರೀಯ ಆಯೋಗವು ಸಂವಿಧಾನದ ಅನುಚ್ಛೇದ 341ರಲ್ಲಿ ಹೊಸತಾಗಿ ಖಂಡ (3)ವನ್ನು ಸೇರಿಸುವ ಕುರಿತಂತೆ ಶಿಫಾರಸು ಮಾಡಿತ್ತು.ಅದನ್ನು ಯಥಾವತ್‌ ಸೇರಿಸುವಂತೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ಶಿಫಾರಸು ಮಾಡಿದೆ. 

ಇದರಿಂದ ಯಾವುದೇ ಜಾತಿ, ಜನಾಂಗ ಅಥವಾ ಬುಡಕಟ್ಟು ಅಥವಾ ಜನರ ಗುಂಪುಗಳಿಗೆ ಸಂಬಂಧಿಸಿದಂತೆ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಂದ ನೀಡಿದ ಶಿಫಾರಸಿನ ಆಧಾರದಲ್ಲಿ ಕೇಂದ್ರ ಸರ್ಕಾರವು ಉಪ ವರ್ಗೀಕರಣವನ್ನು ಮಾಡಬಹುದು ಅಥವಾ ಉಪ ವರ್ಗೀಕರಣವನ್ನು ತೆಗೆದು ಹಾಕಬಹುದು ಎಂದು ಹೇಳಲಾಗಿದೆ.