ಸ್ವತಃ ದೇಶದ ಪ್ರಧಾನಿ ನರೇಂದ್ರ ಮೋದಿ ಅವರೇ ಉಡುಪಿಗೆ ಬರುತಿದ್ದಾರೆ. ಈ ಸಂದರ್ಭದಲ್ಲಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಲಿ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಆಹ್ಪಾನಿಸಿದ್ದಾರೆ.
ಚಿನ್ನದ ಕನಕನ ಕಿಂಡಿ ನೋಡಿ ಕುರುಬ ಸಮುದಾಯ ಖುಷಿಪಟ್ಟಿದೆ
ಉಡುಪಿ: ಪರ್ಯಾಯ ಪುತ್ತಿಗೆ ಮಠದ ವತಿಯಿಂದ ನಡೆಯುತ್ತಿರುವ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಭಾಗವಹಿಸಲು ಸ್ವತಃ ದೇಶದ ಪ್ರಧಾನಿ ನರೇಂದ್ರ ಮೋದಿ ಅವರೇ ಉಡುಪಿಗೆ ಬರುತಿದ್ದಾರೆ. ಈ ಸಂದರ್ಭದಲ್ಲಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಲಿ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಆಹ್ಪಾನಿಸಿದ್ದಾರೆ.ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕುಟುಂಬ ಉಡುಪಿ ಶ್ರೀಕೃಷ್ಣ ಮುಖ್ಯ ಪ್ರಾಣ ಮತ್ತು ಕನಕದಾಸರ ಭಕ್ತರಾಗಿದ್ದೇವೆ. ಕನಕದಾಸರಿಗೆ ಕೃಷ್ಣ ದರ್ಶನ ನೀಡಿದ ಕನಕದಾಸರ ಕಿಂಡಿಗೆ ಸುವರ್ಣ ಕವಚ ಮಾಡಿಸಿರುವುದು ನನ್ನ ಪಾಲಿನ ಪುಣ್ಯ, ಮುಂದೆ ಕನಕನ ಗುಡಿಯನ್ನು ಶಿಲಾಮಯ ಮಾಡುವ ಸಂಕಲ್ಪ ಇದೆ ಎಂದರು.ನಮ್ಮ ಈ ಸೇವೆಯಿಂದ ಕುರುಬ ಸಮುದಾಯ ಬಹಳ ಖುಷಿಪಟ್ಟಿದೆ. ಇದನ್ನು ನೋಡಿದರೇ ಸಿದ್ದರಾಮಯ್ಯ ಸಂತೋಷಪಡುತ್ತಾರೆ ಎಂಬ ವಿಶ್ವಾಸವಿದೆ. ಆದ್ದರಿಂದ ಈಗ ಚಿನ್ನದ ಕನಕನ ಕಿಂಡಿ, ನವೀಕೃತ ಕನಕನ ಗುಡಿಯನ್ನಾದರೂ ನೋಡಲು ಉಡುಪಿಗೆ ಬನ್ನಿ, ಕನಕನ ಕಿಂಡಿಯ ಮೂಲಕ ಆದರೂ ಕೃಷ್ಣ ದರ್ಶನ ಮಾಡಿ ಎಂದು ಪ್ರಮೋದ್ ಆಹ್ಪಾನಿಸಿದ್ದಾರೆ.ಸಿದ್ದರಾಮಯ್ಯ ಅನೇಕ ಬಾರಿ ಉಡುಪಿಗೆ ಬಂದಿದ್ದಾರೆ, ನಾವು ಜನಪ್ರತಿನಿಧಿಗಳು, ಉಡುಪಿಯ ಮಠಾಧೀಶರು ಅವರಿಗೆ ಆಹ್ವಾನ ನೀಡಿದ್ದರೂ ಆವರು ಒಮ್ಮೆಯೂ ಕೃಷ್ಣಮಠಕ್ಕೆ ಭೇಟಿ ನೀಡಿಲ್ಲ, ಅವರ ಮನಸ್ಸಿನಲ್ಲಿ ಏನಿದೆ ? ಯಾಕೆ ಕೃಷ್ಣ ಮಠಕ್ಕೆ ಬರುವುದಿಲ್ಲ ಗೊತ್ತಿಲ್ಲ. ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಶ್ರೀ ಕೃಷ್ಣನ ದೇವಸ್ಥಾನವನ್ನು ಸರ್ಕಾರೀಕರಣ ಮಾಡಲು ಮುಂದಾಗಿದ್ದರು. ಈ ವಿಚಾರ ನನ್ನ ಗಮನಕ್ಕೆ ಬಂದಾಗ, ಅದನ್ನು ವಿರೋಧಿಸಿ ನಾನು ಸಚಿವ ಹುದ್ದೆಗೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದೆ ಎಂದು ಪ್ರಮೋದ್ ನೆನಪಿಸಿಕೊಂಡಿದ್ದಾರೆ.