ಸಾರಾಂಶ
-ಒಳ ಮೀಸಲಾತಿ ಸಾಧಕ ಬಾಧಕಗಳ ಸಭೆಯಲ್ಲಿ ಹನುಮಂತರಾಯಪ್ಪ ಆರೋಪ
-----ಕನ್ನಡಪ್ರಭ ವಾರ್ತೆ ಹಿರಿಯೂರು
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿ ಮಾಡದೇ ಮೂಗಿಗೆ ತುಪ್ಪ ಸವರುವ ನಾಟಕ ಮಾಡುತ್ತಿದೆ ಎಂದು ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಹನುಮಂತರಾಯಪ್ಪ ಆರೋಪಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ನಡೆಸಿದ ಒಳ ಮೀಸಲಾತಿ ಸಾಧಕ ಬಾಧಕಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಮಾದಿಗರು ಬಹುಸಂಖ್ಯಾತರಾಗಿದ್ದು, ಸಂಖ್ಯಾ ಬಲದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಈ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ನಿಕೃಷ್ಟ ಸ್ಥಿತಿಯಲ್ಲಿದೆ. ಸುಪ್ರೀಂ ಕೋರ್ಟ್ ನ 7 ಸದಸ್ಯರ ಪೀಠದ ತೀರ್ಪನ್ನು ಅಗೌರವಿಸಿ ಕಾನೂನಿನ ವಿರುದ್ಧವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆದುಕೊಳ್ಳುತ್ತಿದ್ದಾರೆ.ಹರಿಯಾಣದಲ್ಲಿ ಒಳ ಮೀಸಲಾತಿ ಜಾರಿ ಮಾಡಲಾಗಿದೆ. ತೆಲಂಗಾಣದಲ್ಲೂ ಚಾಲನೆಯಲ್ಲಿದೆ. ಆದರೆ, ರಾಜ್ಯದಲ್ಲಿ ಬಹು ಸಂಖ್ಯಾತರಾದ ಮಾದಿಗರನ್ನು ಮತಬ್ಯಾಂಕ್ ಮಾಡಿಕೊಂಡಿದ್ದಾರೆ.
ನಾಗಮೋಹನ್ ದಾಸ್ ವರದಿಯಲ್ಲೂ ಮಾದಿಗರು ಬಹು ಸಂಖ್ಯಾತರಿದ್ದಾರೆ ಎಂದು ಉಲ್ಲೇಖಿಸಲಾಗಿದ್ದು, ಒಳ ಮೀಸಲಾತಿ ನೀಡಬಹುದು ಎಂದಿದ್ದಾರೆ.ಚಿತ್ರದುರ್ಗದಲ್ಲಿ ನಡೆದ ಚುನಾವಣೆ ಸಭೆಯೊಂದರಲ್ಲಿ 6 ನೇ ಗ್ಯಾರಂಟಿಯಾಗಿ ಒಳ ಮೀಸಲಾತಿ ಜಾರಿ ಮಾಡುತ್ತೇನೆ ಎಂದಿದ್ದ ಸಿದ್ದರಾಮಯ್ಯ ನವರು ಮಾತಿಗೆ ತಕ್ಕಂತೆ ನಡೆದುಕೊಳ್ಳಬೇಕು. ಒಳ ಮೀಸಲಾತಿ ಜಾರಿ ಮಾಡಬೇಕು. ಇಲ್ಲವೇ ಕುರ್ಚಿ ಬಿಟ್ಟು ತೊಲಗಬೇಕು ಎಂದು ಒತ್ತಾಯಿಸಿದರು.
ಮುಖಂಡ ಕೆಪಿ ಶ್ರೀನಿವಾಸ್ ಮಾತನಾಡಿ, ಮಾಜಿ ಸಚಿವ ಹೆಚ್. ಆಂಜನೇಯರವರು ಸಿಎಂ ಸಿದ್ದರಾಮಯ್ಯನವರಿಗೆ ಸನ್ಮಾನ ಮಾಡುವುದು ಯಾವ ಪುರುಷಾರ್ಥಕ್ಕೆ ಎಂದು ಸ್ಪಷ್ಟಪಡಿಸಬೇಕು. ದತ್ತಾoಶದ ನೆಪ ಹೇಳಿ ರಾಜಕೀಯ ಲಾಭಕ್ಕಾಗಿ ಮೂರು ತಿಂಗಳು ಒಳ ಮೀಸಲಾತಿ ಜಾರಿಯನ್ನು ಮುಂದೂಡಿದ್ದಾರೆ. ಒಳ ಮೀಸಲಾತಿ ಜಾರಿಯವರೆಗೆ ಮಾದಿಗ ಸಮುದಾಯ ಸಿದ್ದರಾಮಯ್ಯ ಹಾಗೂ ಡಿಕೆಶಿಯವರಿಗೆ ಹಾರ ತುರಾಯಿ ಹಾಕೋದು ನಿಲ್ಲಿಸಬೇಕು. ಸರ್ಕಾರಿ ನೇಮಕಾತಿಯನ್ನು ಸ್ಪಷ್ಟವಾಗಿ ತಡೆ ಹಿಡಿಯಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಹನುಮಂತಪ್ಪ ಬೀರೇನಹಳ್ಳಿ, ಹನುಮಂತರಾಯ ಅಂಬಲಗೆರೆ, ಮಾರುತೇಶ್ ಕೂನಿಕೆರೆ, ಕರಿಯಣ್ಣ ಬೋರನಕುಂಟೆ, ಮಂಜುನಾಥ್ ಅಂಬಲಗೆರೆ, ರಾಘವೇಂದ್ರ ಈಶ್ವರಗೆರೆ, ಶಿವು ಖಂಡೇನಹಳ್ಳಿ, ಕದುರಪ್ಪ ಶಿಡ್ಲಯ್ಯನಕೋಟೆ, ಆರ್. ಮಹೇಶ್ ,ರುದ್ರಪ್ಪ ಗುಯಿಲಾಳು, ರಾಘು ಓಬಳಾಪುರ, ಜಯಣ್ಣ ಮೇಟಿಕುರ್ಕೆ, ಇರ್ಫಾನ್ ಮುಂತಾದವರಿದ್ದರು.