ಸಾರಾಂಶ
ಗ್ಯಾರಂಟಿ ಹೆಸರಿನಲ್ಲಿ ಚುನಾವಣೆ ಗೆದ್ದು ಅದನ್ನ ಅನುಷ್ಠಾನಕ್ಕಾಗಿ ಈಗಾಗಲೆ ರಾಜ್ಯ ಆರ್ಥಿಕ ದಿವಾಳಿ ಹಂತದಲ್ಲಿದೆ. ಬರದಿಂದ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಇದೆ. ರೈತಾಪಿ ವರ್ಗ ಕುಸಿದಿದೆ.
ಕನ್ನಡಪ್ರಭ ವಾರ್ತೆ ವಿಜಯಪುರ
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಲೋಕಸಭೆ ಚುನಾವಣೆ ಸೋಲಿನ ಭೀತಿ ಕಾಡುತ್ತಿದೆಯೆ ಎಂದು ಬಿಜೆಪಿ ಜಿಲ್ಲಾ ಮುಖಂಡ ರವಿ ಖಾನಾಪುರ ಪ್ರಶ್ನಿಸಿದ್ದಾರೆ.ಮುಖ್ಯಮಂತ್ರಿಗಳು ಕರ್ನಾಟಕದಲ್ಲಿ ಕೆಟ್ಟ ಸಂಪ್ರದಾಯಕ್ಕೆ ಮುನ್ನಡಿ ಬರೆಯಲು ಹೊರಟಿದ್ದಾರೆ. ಗ್ಯಾರಂಟಿ ಹೆಸರಿನಲ್ಲಿ ಚುನಾವಣೆ ಗೆದ್ದು ಅದನ್ನ ಅನುಷ್ಠಾನಕ್ಕಾಗಿ ಈಗಾಗಲೆ ರಾಜ್ಯ ಆರ್ಥಿಕ ದಿವಾಳಿ ಹಂತದಲ್ಲಿದೆ. ಬರದಿಂದ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಇದೆ. ರೈತಾಪಿ ವರ್ಗ ಕುಸಿದಿದೆ. ಮುಂದಿನ ಮಳೆಗಾಲದ ವರೆಗೆ ಹೇಗೆ ಜಿವನ ಸಾಗಿಸುವುದು ಎಂಬ ಚಿಂತೆಯಲ್ಲಿ ರೈತರಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಯೋಜನೆಗಳು ನಾಪತ್ತೆಯಾಗಿವೆ ಎಂದು ದೂರಿದರು.
ನಮ್ಮ ಸರ್ಕಾರದ ಅವಧಿಯಲ್ಲಿ ಬಿಡುಗಡೆಯಾದ ಅಭಿವೃದ್ಧಿ ಹಣದಲ್ಲಿ ಅಲ್ಲಲ್ಲಿ ಕೆಲವು ಕಾಮಗಾರಿ ನಡೆಯುತ್ತಿವೆ. ನಿಮ್ಮ ಆರ್ಥಿಕ ಸ್ಥಿತಿ ಗತಿ ನಿಮಗೇ ಲೆಕ್ಕಕ್ಕೆ ಸಿಗುತ್ತಿಲ್ಲ. ಸರ್ಕಾರಿ ನೌಕರರಿಗೆ ಸರಿಯಾಗಿ ವೇತನ ನೀಡುತ್ತಿಲ್ಲ, ಗುತ್ತಿಗೆದಾರರಿಗೆ ಹಣ ಬಿಡುಗಡೆ ಯಾಗುತ್ತಿಲ್ಲ. ರಾಜ್ಯದಲ್ಲಿ ಬಹುತೇಕ ಸರ್ಕಾರಿ ಅಧಿಕಾರಿಗಳಿಗೆ ನಿಮ್ಮ ಗ್ಯಾರಂಟಿ ಯೋಜನೆಯ ಕೆಲಸ ಬಿಟ್ಟು ಮತ್ತೊಂದಿಲ್ಲ. ಇಂತಹ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ನಿರ್ವಹಣೆಗಾಗಿ ಸಮಿತಿ ರಚಿಸಿ, ಅವರಿಗೆ ಸಚಿವ ಸ್ಥಾನ-ಮಾನ ನೀಡಿ ರಾಜ್ಯವಾರು, ಜಿಲ್ಲಾವಾರು, ತಾಲೂಕುವಾರು ಸಮಿತಿಗಳಿಗೆ ವಾರ್ಷಿಕ ₹16 ಕೋಟಿ ಸಾರ್ವಜನಿಕರ ತೆರಿಗೆ ಹಣ ಖರ್ಚು ಮಾಡಬೇಕೆಂದಿರುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದ್ದಾರೆ.ಈಗಾಗಲೆ ಇರುವ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರುಗಳ, ರಾಜ್ಯ ಮತ್ತು ಜಿಲ್ಲಾವಾರು ಅಧಿಕಾರಿಗಳ ಕೆಲಸವೇನು. ಗ್ಯಾರಂಟಿ ಹೆಸರಿನಲ್ಲಿ ಗೆದ್ದ ನಿಮ್ಮ ಶಾಸಕರಗಳ ಕೆಲಸವೇನು? ಇವರೆಲ್ಲರೂ ಅಸಮರ್ಥರಾ ಅಥವಾ ಈಗಿನಿಂದಲೆ ಲೋಕಸಭೆ ಚುನಾವಣೆಯ ಸೋಲುವ ಭಯದಿಂದ ನಿಮ್ಮ ಕುರ್ಚಿ ಗಟ್ಟಿಮಾಡಿಕೊಳ್ಳಲು ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳುವ ಉದ್ದೇಶದಿಂದ ರಾಜ್ಯದ ಜನರ ತೆರಿಗೆ ಹಣ ನಿಮ್ಮ ರಾಜಕೀಯ ಶೋಕಿಗೆ ಖರ್ಚುಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಪ್ರಕಟನೆ ಮೂಲಕ ಕಿಡಿ ಕಾರಿದ್ದಾರೆ.