ಸಿದ್ದರಾಮಯ್ಯ ಎಐಸಿಸಿ ಹಿಂದುಳಿದ ವರ್ಗಗಳ ಘಟಕ ಸದಸ್ಯ, ಅಧ್ಯಕ್ಷರಲ್ಲ : ಯತೀಂದ್ರ ಸಿದ್ದರಾಮಯ್ಯ

| N/A | Published : Jul 06 2025, 11:48 PM IST / Updated: Jul 07 2025, 11:19 AM IST

ಸಿದ್ದರಾಮಯ್ಯ ಎಐಸಿಸಿ ಹಿಂದುಳಿದ ವರ್ಗಗಳ ಘಟಕ ಸದಸ್ಯ, ಅಧ್ಯಕ್ಷರಲ್ಲ : ಯತೀಂದ್ರ ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಸಿದ್ದರಾಮಯ್ಯ ಅವರನ್ನು ಎಐಸಿಸಿ ಹಿಂದುಳಿದ ವರ್ಗಗಳ ಘಟಕಕ್ಕೆ ಸದಸ್ಯರನ್ನಾಗಿ ಮಾಡಲಾಗಿದೆಯೇ ಹೊರತು ಅಧ್ಯಕ್ಷರನ್ನಾಗಿ ಅಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಗದಗ: ಸಿದ್ದರಾಮಯ್ಯ ಅವರನ್ನು ಎಐಸಿಸಿ ಹಿಂದುಳಿದ ವರ್ಗಗಳ ಘಟಕಕ್ಕೆ ಸದಸ್ಯರನ್ನಾಗಿ ಮಾಡಲಾಗಿದೆಯೇ ಹೊರತು ಅಧ್ಯಕ್ಷರನ್ನಾಗಿ ಅಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಭಾನುವಾರ ಗದಗನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಸಿದ್ದರಾಮಯ್ಯ ಅವರೇ ಟ್ವಿಟರ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ ಎಂದರು. ಬಡ್ತಿ ನೀಡಿ ಸಿಎಂ ಖುರ್ಚಿ ಕಸಿಯುವ ಪ್ಲಾನ್ ಎಂಬ ಬಜೆಪಿ ಹೇಳಿಕೆಯನ್ನು ತಳ್ಳಿಹಾಕಿದ ಅವರು, ಹಿಂದುಳಿದ ವರ್ಗಗಳ ಧ್ವನಿಯಾಗಿ ಕೆಲಸ ಮಾಡುವವರನ್ನು ಸದಸ್ಯರನ್ನಾಗಿ ಮಾಡಲಾಗಿದೆ. ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಪರವಾಗಿ ಸಾಮಾಜಿಕ ನ್ಯಾಯಕ್ಕಾಗಿ ಕೆಲಸ ಮಾಡಿದ್ದಾರೆ, ಹೀಗಾಗಿ ಅವರನ್ನು ಸದಸ್ಯರನ್ನಾಗಿ ಮಾಡಿದ್ದಾರೆ ಎಂದರು.

ಮುಖ್ಯಮಂತ್ರಿ ಬದಲಾವಣೆ ವರಿಷ್ಠರಿಗೆ ಬಿಟ್ಟಿದ್ದು, ಹೈಕಮಾಂಡ್ ಸಿಎಂ ಬದಲಾವಣೆಗೆ ಯಾವುದೇ ಸೂಚನೆ ನೀಡಿಲ್ಲ ಎಂದು ಯತೀಂದ್ರ ಸ್ಪಷ್ಟಪಡಿಸಿದರು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಂದ ಕೆಲವು ಶಾಸಕರು ಮಾತನಾಡಿದ್ದಾರೆ. ಆದರೆ ಇದರ ಅರ್ಥ ಸಿಎಂ ಬದಲಾವಣೆ ಅಥವಾ ಸರ್ಕಾರ ಅಸ್ಥಿರವಾಗಿದೆ ಎಂದಲ್ಲ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ಅವರು ಕೂಡ ಸಿಎಂ ಬದಲಾವಣೆ ಇಲ್ಲ ಎಂದು ಹೇಳಿದ್ದು, ಐದು ವರ್ಷಗಳ ಕಾಲ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿದ್ದರೂ, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

ರಸ್ತೆ ಬೇಕೆಂದರೆ ಗ್ಯಾರಂಟಿ ಬಂದ್ ಎಂಬ ಶಾಸಕ ರಾಯರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿ, ಸರ್ಕಾರ ಗ್ಯಾರಂಟಿಗಳ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನೂ ಮುನ್ನಡೆಸುತ್ತಿದೆ ಎಂದರು.

ಬಿಜೆಪಿ ಮುಖಂಡರ ಹೇಳಿಕೆ ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ: ಸಿಎಂ ಕಾಂಗ್ರೆಸ್ ಶಾಸಕರ ವಿಶ್ವಾಸ ಕಳೆದುಕೊಂಡಿದ್ದಾರೆ ಎಂಬ ಆರ್. ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಯತೀಂದ್ರ, ನಮ್ಮ ಶಾಸಕರು ಆರ್. ಅಶೋಕ್ ಅವರ ಬಳಿ ಹೋಗಿ ಹೇಳಿದ್ದಾರಾ ? ಎಂದು ಪ್ರಶ್ನಿಸಿದರು. ಬಿಜೆಪಿ ನಾಯಕರು ಈಗ ಇಳಿಯುತ್ತಾರೆ, ಮುಂದಿನ ತಿಂಗಳು ಇಳಿಯುತ್ತಾರೆ ಎಂದು ಹೇಳುತ್ತಲೇ ಬಂದಿದ್ದಾರೆ, ಅವರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ ಎಂದು ಹೇಳಿದರು.

ರಂಭಾಪುರಿ ಸ್ವಾಮೀಜಿ ಅವರು ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಹೇಳಿದ್ದಾರೆ ಎಂದ ಯತೀಂದ್ರ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಡಿ.ಕೆ. ಶಿವಕುಮಾರ್ ಅವರ ಕೊಡುಗೆ ಇದೆ. ಅವರು ಪಕ್ಷದ ಅಧ್ಯಕ್ಷರಾಗಿ ಸಾಕಷ್ಟು ಶ್ರಮಿಸಿದ್ದಾರೆ ಮತ್ತು ಪಕ್ಷವನ್ನು ಬಲಪಡಿಸಿದ್ದಾರೆ ಎಂದು ಶ್ಲಾಘಿಸಿದರು. ವಿರೋಧ ಪಕ್ಷದಲ್ಲಿದ್ದಾಗ ಮೇಕೆದಾಟು ಕಾರ್ಯಕ್ರಮ, ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮಗಳನ್ನು ನಡೆಸಿ, ಕಾರ್ಯಕರ್ತರಿಗೆ ವಿರಾಮವಿಲ್ಲದೆ ಕೆಲಸ ಮಾಡಿಸಿದ್ದಾರೆ ಎಂದು ನೆನಪಿಸಿಕೊಂಡರು. ಹೆಚ್ಚಿನ ಶಾಸಕರ ಅಭಿಪ್ರಾಯದ ಮೇರೆಗೆ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಿದೆ ಮತ್ತು ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಹೈಕಮಾಂಡ್ ಹೇಳಿದೆ, ಈ ಬಗ್ಗೆ ಬೇರೆ ಯಾರೂ ಟಿಪ್ಪಣಿ ನೀಡುವ ಅಗತ್ಯವಿಲ್ಲ ಎಂದು ಯತೀಂದ್ರ ಹೇಳಿಕೆ ನೀಡಿದರು.

Read more Articles on