ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಷ್ಟು ರೈತ ವಿರೋಧಿ ಮುಖ್ಯಮಂತ್ರಿ ಮತ್ತೊಬ್ಬರಿಲ್ಲ ಎಂದು ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತೀಯ ಅಧ್ಯಕ್ಷ ರಮೇಶ್ ರಾಜು ಕಿಡಿಕಾರಿದರು.ನಗರದ ಸೋಮೇಶ್ವರ ಪುರಂನ ವಾಸವಿ ದೇವಾಲಯದ ಆವರಣದಲ್ಲಿ ಭಾರತೀಯ ಕಿಸಾನ್ ಸಂಘ, ಕರ್ನಾಟಕ ತುಮಕೂರು ತಾಲೂಕು ಘಟಕದ ಅಧ್ಯಕ್ಷ ನಾರಾಯಣಗೌಡ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ತಾಲೂಕು ಪ್ರಶಿಕ್ಷಣ ವರ್ಗ-2025 ಉದ್ಘಾಟಿಸಿ ಮಾತನಾಡಿದರು.
ಅಭಿವೃದ್ಧಿ ಎಂದು ಹೇಳುತ್ತಲೇ ಉತ್ತರ ಕರ್ನಾಟಕದ ರೇವಣ್ಣ ಸಿದ್ದೇಶ್ವರ ಏತ ನೀರಾವರಿ ಯೋಜನೆ ಮುಂದುವರೆದಿಲ್ಲ. ರೈತರ ಪಂಪ್ ಸೆಟ್‌ಗಳ ಬದಲಿ ಟಿಸಿಗೆ ಸಮಯ ನಿಗದಿಯಾಗಿದೆ. ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ಈ ಹಿಂದಿನ ಸರಕಾರ ನೀಡುತ್ತಿದ್ದ ಕಿಸಾನ್ ಸನ್ಮಾನ ವಂತಿಗೆ ಕಡಿತ ಮಾಡಿದೆ. ರೈತರ ಮಕ್ಕಳಿಗೆ ನೀಡುತ್ತಿದ್ದ ರೈತ ವಿದ್ಯಾನಿಧಿ ಯೋಜನೆ ರದ್ದು ಮಾಡಿದೆ. ಅಕ್ರಮ ಸಕ್ರಮ ಟಿ.ಸಿ. ನಿಯಮ ರದ್ದು ಮಾಡಿ ರೈತರನ್ನು ಹೆಚ್ಚು ಕಷ್ಟಕ್ಕೆ ದೂಡಿದೆ. ರೈತರಿಗೆ ನೀಡುತ್ತಿದ್ದ ಡಿಸೇಲ್ ಸಹಾಯ ಧನ ಕಡಿತ ಮಾಡಿದೆ ಹೀಗೆ ಎಂದು ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.ಭಾರತೀಯ ಕಿಸಾನ್ ಸಂಘ, ವ್ಯಕ್ತಿ ಆಧಾರಿತ ಸಂಘಟನೆಯಲ್ಲ. ರೈತನೇ ನಮ್ಮ ನಾಯಕ. ಕೃಷಿಕನಿಗೆ ಲಾಭದಾಯಕ ಬೆಲೆ ದೊರಕಿಸಿ, ಎಲ್ಲಾ ಆಯಾಮಗಳಲ್ಲಿಯೂ ರೈತರನ್ನು ಸಶಕ್ತರನ್ನಾಗಿಸುವುದು ಬಿ.ಕೆ.ಎಸ್‌ನ ಮೂಲ ಉದ್ದೇಶವಾಗಿದೆ. ದೇಶದ 600ಕ್ಕೂ ಹೆಚ್ಚು, 4 ಸಾವಿರಕ್ಕೂ ಅಧಿಕ ತಾಲೂಕುಗಳು ಮತ್ತು 60 ಸಾವಿರಗ್ರಾಮ ಸಮಿತಿಗಳನ್ನು ಹೊಂದಿರುವ ಭಾರತೀಯ ಕಿಸಾನ್ ಸಂಘಕ್ಕೆ ಕೃಷಿಕನೇ ನಾಯಕ. ಆತನ ಅಭ್ಯುದಯವೇ ಸಂಘದ ಮೂಲ ಮಂತ್ರ ಎಂದರು.
ಭಾರತೀಯ ಕಿಸಾನ್ ಸಂಘ ಸಾಮೂಹಿಕ ನಾಯಕತ್ವದ ಅಡಿಯಲ್ಲಿ ನಡೆಯುತ್ತಿರುವ ಸಂಘಟನೆಯಾಗಿದೆ. ನಿರಂತರ ಮತ್ತು ವಂಶಪಾರಂಪರ್ಯ ನಾಯಕತ್ವಕ್ಕೆ ಅವಕಾಶವಿಲ್ಲ. ಪ್ರತಿ ಮೂರು ವರ್ಷಗಳಿಗೊಮ್ಮೆ ನಾಯಕತ್ವದ ಬದಲಾವಣೆಯಾಗಲೇಬೇಕು. ರೈತರಿಗೆ ಸಂಬಂಧಿಸಿದ ನೆಲ.ಜಲ ,ಬೆಳೆ, ಪಶುಸಂಗೋಪನೆ, ತೋಟಗಾರಿಕೆ,ವಾಣಿಜ್ಯ ಬೆಳೆಗಳು ಸೇರಿದಂತೆ ರೈತರಿಗೆ ಪೂರಕವಾದ ಎಲ್ಲಾ ವಿಚಾರಗಳ ಬಗ್ಗೆ ಕೆಲಸ ಮಾಡುತ್ತಿದೆ ಎಂದರು.ನಮ್ಮ ಸಂಘಟನೆ ನಿರಂತರ ಹೋರಾಟದ ಫಲವಾಗಿ 1800 ರು ಇದ್ದ ಕ್ವಿಂಟಾಲ್ ರಾಗಿಯ ಬೆಂಬಲ ಬೆಲೆ 5200 ರುಗಳಿಗೆ ಹೆಚ್ಚಳವಾಗಿದೆ.ತೆಂಗು, ಅಡಿಕೆ ಬೆಲೆಗಳು ಸ್ಥಿರವಾಗಿವೆ.ಕೃಷಿ ಅಮದು ನೀತಿಯ ವಿರುದ್ದ ನಿರಂತರ ಹೋರಾಟ ನಡೆಸಲಾಗುತ್ತಿದೆ ಎಂದರು.ಭಾರತೀಯ ಕಿಸಾನ್ ಸಂಘದ ಕಾರ್ಯದರ್ಶಿ ಗಂಗಾಧರ ಸ್ವಾಮಿ ಮಾತನಾಡಿ, ಬಿಕೆಎಸ್‌ನ ಸದಸ್ಯರು ಜನರು, ರೈತರ ಸಂಕಷ್ಟಗಳಿಗೆ ಸ್ಪಂದಿಸಿ ಕೆಲಸ ಮಾಡುವ ಮೂಲಕ ಹೆಚ್ಚು ಸದಸ್ಯರು ಸಂಘಕ್ಕೆ ಸೇರುವಂತೆ ಮಾಡುವ ಜೊತೆಗೆ,ಕಾನೂನಿನ ಅಡಿಯಲ್ಲಿ ಹೋರಾಟ ರೂಪಿಸಬೇಕು. ಕಾನೂನು ಉಲ್ಲಂಘಿಸುವಂತ ಯಾವ ಹೋರಾಟಗಳಿಗೂ ಭಾರತೀಯ ಕಿಸಾನ ಸಂಘ ಬೆಂಬಲಿಸುವುದಿಲ್ಲ. ಸ್ವಾವಲಂಬಿ ರೈತ, ಸಂಪನ್ನ ಗ್ರಾಮ, ಸಮರ್ಥ ಭಾರತ ನಮ್ಮ ಉದ್ದೇಶವಾಗಿದೆ. ಇದರತ್ತ ಎಲ್ಲರೂ ಗಮನಹರಿಸಬೇಕು ಎಂದರು.
ಭಾರತೀಯ ಕಿಸಾನ್ ಸಂಘದ ತುಮಕೂರು ತಾಲೂಕು ಕಾರ್ಯದರ್ಶಿ ರವೀಶ್ ಮಾತನಾಡಿ, ಹಸಿರು ಕ್ರಾಂತಿಯ ಹೆಸರಿನಲ್ಲಿ ಅತಿಯಾದ ರಸಗೊಬ್ಬರ ಬಳಸಿದ ಪರಿಣಾಮ ಇಂದು ವಿಷಯುಕ್ತ ಆಹಾರವನ್ನು ಸೇವಿಸುವಂತಾಗಿದೆ. ಹಾಗಾಗಿ ಸಾವಯುವ ಕೃಷಿ ಬಿಕೆಎಸ್‌ನ ಮೊದಲ ಆದ್ಯತೆಯಾಗಿದೆ. ಕೃಷಿ ಬಂಡವಾಳ ಕಡಿಮೆ ಮಾಡಿ, ವಿಷಮುಕ್ತ ಆಹಾರ ನೀಡುವ ಮೂಲಕ ಸದೃಢ ಭಾರತ ನಿರ್ಮಾಣ ನಮ್ಮಗುರಿಯಾಗಿದೆ ಎಂದರು.ಅಧ್ಯಕ್ಷತೆಯನ್ನು ಭಾರತೀಯ ಕೃಷಿಕ ಸಂಘದ ತುಮಕೂರು ತಾಲೂಕು ಘಟಕದ ಅಧ್ಯಕ್ಷ ನಾರಾಯಣಗೌಡ ವಹಿಸಿದ್ದರು. ವೇದಿಕೆಯಲ್ಲಿ ದಕ್ಷಿಣ ಪ್ರಾಂತೀಯ ಸಂಘಟನಾ ಕಾರ್ಯದರ್ಶಿ ನಾರಾಯಣಸ್ವಾಮಿ, ಜಿಲ್ಲಾ ಅಧ್ಯಕ್ಷ ಹೊನ್ನೇನಹಳ್ಳಿ ವಿಜಯಕುಮಾರ್, ಜಿಲ್ಲಾ ಕಾರ್ಯದರ್ಶಿ ಗಂಗಾಧರಸ್ವಾಮಿ, ದಕ್ಷಿಣ ಪ್ರಾಂತ ಕಾರ್ಯದರ್ಶಿ ಸಂತೋಷ ಹಾರೋಹಳ್ಳಿ, ಜಿಲ್ಲಾ ಮಹಿಳಾ ಪ್ರಮುಖ ನವೀನಾ ಸದಾಶಿವಯ್ಯ,ತಾಲೂಕು ಕಾರ್ಯದರ್ಶಿ ರವೀಶ್ ಚಿಕ್ಕಬೆಳ್ಳಾವಿ, ತಾಲೂಕು ಸಮಿತಿ ಸದಸ್ಯರಾದ ಲೋಕೇಶ್.ಎಸ್ ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ತುಮಕೂರು ಜಿಲ್ಲಾ ಸಮಿತಿ ಸದಸ್ಯರು, ತುಮಕೂರು,ಗುಬ್ಬಿ, ಮಧುಗಿರಿ, ತುರುವೇಕೆರೆ, ಕೊರಟಗೆರೆ ತಾಲೂಕು ಮತ್ತುಗ್ರಾಮ ಸಮಿತಿಯ ಸದಸ್ಯರು ಭಾಗವಹಿಸಿದ್ದರು. .