ಸಿದ್ದರಾಮಯ್ಯ ಸಂವಿಧಾನ, ಮೀಸಲಾತಿ, ದಲಿತ ವಿರೋಧಿ

| Published : Jan 01 2024, 01:15 AM IST

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಸಂವಿಧಾನ, ಮೀಸಲಾತಿ, ದಲಿತ ವಿರೋಧಿಯಾಗಿದ್ದಾರೆ ಎಂದು ಬಿಜೆಪಿ ಎಸ್‌ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಮೂಡ್ನಾಕೂಡು ಪ್ರಕಾಶ್ ಆರೋಪಿಸಿದರು.

ಸಿದ್ದರಾಮಯ್ಯ ಇರುವ ತನಕ ದಲಿತರಿಗೆ ಉಳಿಗಾಲ ಇಲ್ಲ । ಮೂಡ್ನಾಕೂಡುಪ್ರಕಾಶ್ ಆರೋಪ

ಕನ್ಡಡಪ್ರಭ ವಾರ್ತೆ ಚಾಮರಾಜನಗರ

ಮುಖ್ಯಮಂತ್ರಿ ಸಿದ್ದರಾಮಯ್ಯ ಸಂವಿಧಾನ, ಮೀಸಲಾತಿ, ದಲಿತ ವಿರೋಧಿಯಾಗಿದ್ದಾರೆ ಎಂದು ಬಿಜೆಪಿ ಎಸ್‌ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಮೂಡ್ನಾಕೂಡು ಪ್ರಕಾಶ್ ಆರೋಪಿಸಿದರು.

ವೇದಿಕೆಗಳಲ್ಲಿ ಮಾತ್ರ ಸಂವಿಧಾನ, ಪ್ರಜಾಪ್ರಭುತ್ವ, ಮೀಸಲಾತಿ ಪರ ದೊಡ್ಡ-ದೊಡ್ಡ ಭಾಷಣ ಮಾಡುತ್ತಾರೆ. ಇದೇನಾ ಇವರು ದಲಿತರಿಗೆ ಕೊಡುವ ನ್ಯಾಯ? ಎಂದು ಪ್ರಶ್ನಿಸಿದರು. ದಲಿತರು ಎಚ್ಚೆತ್ತುಕೊಂಡು ಸಿದ್ದರಾಮಯ್ಯರನ್ನು ಇಳಿಸಿ ದಲಿತರನ್ನು ಬೆಳೆಸಿ ಅಭಿಯಾನ ಪ್ರಾರಂಭಿಸದಿದ್ದರೆ ಸಿದ್ದರಾಮಯ್ಯ ಇರುವ ತನಕ ದಲಿತರಿಗೆ, ದಲಿತ ನಾಯಕರಿಗೆ ಉಳಿಗಾಲ ಇಲ್ಲ ಎಂದು ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಆರೋಪಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿರುವುದು ಬಹುಪಾಲು ದಲಿತ ಮತಗಳಿಂದಲೇ. ಇದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಂಬಿದ ದಲಿತರಿಗೆ, ದಲಿತ ನಾಯಕರಿಗೆ ಮೊಕ್ಮಲ್ ಟೋಫಿ ಹಾಕಿರುವುದಲ್ಲಿ ನಂಬರ್ ಒನ್ ಆಗಿದ್ದಾರೆ, ಏಕೆಂದರೆ ಇವತ್ತು ರಾಜ್ಯದ ನಾಲ್ಕೈದು ಮೊರಾರ್ಜಿ ದೇಸಾಯಿ ಶಾಲೆಗಳಲ್ಲಿ ದಲಿತ ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಚಗೊಳಿಸಿರುವುದು ಮಾಧ್ಯಮಗಳಲ್ಲಿ, ಪತ್ರಿಕೆಗಳ ವರದಿಯಾಗಿದೆ. ಈ ವಿಚಾರ ದೇಶದಲ್ಲಿ ದೊಡ್ಡ ಸುದ್ದಿಯಾಗಿದೆ. ನಾನು ದಲಿತ ಎಂದು ಹೇಳುವ ಸಿದ್ದರಾಮಯ್ಯನವರೇ ದಲಿತ ಮಕ್ಕಳ ಕೈಯಲ್ಲಿ ಶೌಚಾಲಯವನ್ನು ಏಕೆ ಸ್ವಚ್ಚಗೊಳಿಸುತ್ತಿದ್ದೀರಿ?, ನಿಮ್ಮ ಮಕ್ಕಳ ಕೈಯಲ್ಲಿ ಮಾಡಿಸಿ. ರಾಜ್ಯದ ಮೊರಾರ್ಜಿ ಶಾಲೆಗಳಲ್ಲಿ ಶೇ. ೮೦ ರಷ್ಠು ಭಾಗ ದಲಿತ ಮಕ್ಕಳೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವತ್ತು ದಲಿತ ಮಕ್ಕಳು ಶೌಚಾಲಯವನ್ನು ಸ್ವಚ್ಚ ಮಾಡಲು ಮೂಲ ಕಾರಣವೆಂದರೆ ಎಸ್‌ಸಿಪಿ, ಟಿಎಸ್‌ಪಿ ಅನುದಾನಗಳಲ್ಲಿ ೧೧, ೫೦೦ ಕೋಟಿ ಸಾಮಾನ್ಯ ಯೋಜನೆಗಳಿಗೆ ಬಳಕೆ ಮಾಡಿಕೊಂಡಿರುವುದರಿಂದ ಸರ್ಕಾರದಲ್ಲಿ ಶೌಚಾಲಯ ಸ್ವಚ್ಚಗೊಳಿಸಲು ಹಣವಿಲ್ಲದ ಕಾರಣ ಶಿಕ್ಷಕರು ಮಕ್ಕಳ ಕೈಯಲ್ಲಿ ಶೌಚಾಲಯ ಸ್ವಚ್ಚಗೊಳಿಸುತ್ತಿದ್ದಾರೆ ಇದು ಅಮಾನವೀಯ ಎಂದರು.

ಸಿದ್ದರಾಮಯ್ಯನವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯವರ ಋಣತೀರಿಸಲು ಸಾಧ್ಯವೇ ಇಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು ಡಿ.ಕೆ.ಶಿವಕುಮಾರ್ ಅವರನ್ನು ಮನವೊಲಿಸಿ ಸಿದ್ದರಾಮಯ್ಯ ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ. ಐಎನ್‌ಡಿಐಎ ಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೆಸರು ಚಲಾವಣೆಗೆ ಬಂದು ದೇಶಾದ್ಯಂತ ವ್ಯಾಪಕ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಹುಲ್‌ಗಾಂಧಿ ಪ್ರಧಾನಿಯಾಗಬೇಕು ಎಂದು ಅಭಿಪ್ರಾಯ ಹೊರ ಹಾಕಿರುವುದು ಇವರ ದಲಿತ ವಿರೋಧಿ ನೀತಿಯನ್ನು ಎತ್ತಿ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯನವರೇ ಹಿಂದೆ ಮುಖ್ಯಮಂತ್ರಿ ರೇಸ್‌ನಲ್ಲಿದ್ದ ಜಿ.ಪರಮೇಶ್ವರರನ್ನು ಸೋಲಿಸಿದ್ದೀರಿ. ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಹೆಸರು ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ ರಾಹುಲ್ ಗಾಂಧಿ ಪ್ರಧಾನಿಯಾಗಲಿ ಎಂದು ಅಭಿಪ್ರಾಯವನ್ನು ಹೊರಹಾಕಿ ಅದನ್ನು ಮುರಿಯುವ ಕೆಲಸ ಮಾಡುತ್ತೀದ್ದೀರಿ. ಇದೇನಾ ದಲಿತರಿಗೆ ಕೊಡುವ ನ್ಯಾಯ, ಗೌರವ ಎಂದರು.

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನಿರ್ವಹಿಸುವಲ್ಲಿ ವಿಫಲವಾಗಿದ್ದು, ಗೃಹಲಕ್ಷ್ಮೀ ಯೋಜನೆಯಲ್ಲಿ ಬಿಲ್ ಕೊಡುವುದನ್ನು ವಿಳಂಬ ಮಾಡುತ್ತಿದ್ದು, ಯುನಿಟ್ ಹೆಚ್ಚಳ ಮಾಡಿ ಸಂಪರ್ಕವನ್ನು ಕಡಿತ ಮಾಡುತ್ತಿರುವುದು ಹಳ್ಳಿಗಳಲ್ಲಿ ನೋಡಲಾಗುತ್ತಿದೆ. ಇದರಿಂದ ಎಸ್ ಸಿ, ಎಸ್ ಟಿ ಮನೆಗಳು ಕತ್ತಲಾಗುತ್ತಿವೆ. ಇದನ್ನು ಉದ್ದೇಶಪೂರ್ವಕವಾಗಿ ಸರ್ಕಾರ ಮಾಡುತ್ತಿದೆ, ಇದು ನಿಲ್ಲಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಪದ್ಮ, ಎಸ್ ಸಿ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ವೇಣುಗೋಪಾಲ್, ಹನೂರು ಮಂಡಲ ಅಧ್ಯಕ್ಷ ಕೊತ್ತನೂರು ರಾಜಶೇಖರ್, , ಬಿಜೆಪಿ ರಾಜ್ಯ ಕಾರ‍್ಯಕಾರಿಣಿ ಮಾಜಿ ಸದಸ್ಯ ಸಿಂಗನಲ್ಲೂರು ನಾಗಲಕ್ಷ್ಮೀ , ಮುಖಂಡ ಬಾನುಪ್ರಕಾಶ್

ಹಾಜರಿದ್ದರು.

-----------31ಸಿಎಚ್‌ಎನ್‌20 ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಮೂಡ್ನಾಕೂಡು ಪ್ರಕಾಶ್ ಮಾತನಾಡಿದರು.