ರಾಜ್ಯದಲ್ಲಿ ಸಿಎಂ ಇಲ್ಲವೇ ಇಲ್ಲ. ಸಿದ್ದರಾಮಯ್ಯ ಹೆಸರಿಗಷ್ಟೇ ಸಿಎಂ. ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ.
ಹೊಸಪೇಟೆ: ರಾಜ್ಯದಲ್ಲಿ ಸಿಎಂ ಇಲ್ಲವೇ ಇಲ್ಲ. ಸಿದ್ದರಾಮಯ್ಯ ಹೆಸರಿಗಷ್ಟೇ ಸಿಎಂ. ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಕಾರಿನಲ್ಲಿ ಓಡಾಡುತ್ತಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಡಲ್ ಆಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವಾಗ್ದಾಳಿ ವ್ಯಂಗ್ಯವಾಡಿದರು..
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರದ ಹಗ್ಗ- ಜಗ್ಗಾಟದಿಂದ ಸಿಎಂ ಕುರ್ಚಿ ಮ್ಯೂಜಿಕಲ್ ಚೇರ್ ಆಗಿದೆ. ಸಿಎಂ ಯಾರು ಎಂದು ಘೋಷಣೆ ಮಾಡಲಿ, ಇಲ್ಲವಾದರೆ ಬೆಳಗಾವಿ ಅಧಿವೇಶನ ಕರಾಳ ಅಧಿವೇಶನವಾಗಲಿದೆ ಎಂದರು.ರಾಜ್ಯದಲ್ಲಿ ಬೆಳೆ ನಷ್ಟ ಪರಿಹಾರ ದೊರೆಯದೇ ರೈತರು ಮತ್ತು ಸಂಬಳ ಇಲ್ಲದೇ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯಾದ್ಯಂತ ರೈತರು ಬೆಳೆ ಪರಿಹಾರಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ನೌಕರರಿಗೂ ಸರಿಯಾಗಿ ಸಂಬಳ ನೀಡುತ್ತಿಲ್ಲ. ಸರ್ಕಾರದ ಬಳಿ ಹಣ ಇಲ್ಲ ಎಂದು ದೂರಿದರು.
ಬೆಳೆ ಪರಿಹಾರ ಮತ್ತು ಮೆಕ್ಕೆಜೋಳ ಖರೀದಿಗಾಗಿ ಬಿಜೆಪಿಯಿಂದ ಹೋರಾಟ ನಡೆಸಲಾಗುವುದು. ನಾವು ಅಧಿಕಾರದಲ್ಲಿದ್ದಾಗ ಬೆಳೆ ಪರಿಹಾರ ನೀಡಿದ್ದೆವು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ರೈತರಿಗೆ ಯಾವುದೇ ಪರಿಹಾರ ನೀಡಿಲ್ಲ ಎಂದರು.ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದರ ಫಲವಾಗಿ ವಾಲ್ಮೀಕಿ ಹಗರಣದಲ್ಲಿ ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಾಲ್ಮೀಕಿ ಹಗರಣವನ್ನು ಸ್ವತಃ ಸಿಎಂ ಸಿದ್ದರಾಮಯ್ಯ ಸದನದಲ್ಲಿ ಒಪ್ಪಿಕೊಂಡಿದ್ದಾರೆ ಎಂದರು.
ಸಂವಿಧಾನ ಪುಸ್ತಕವನ್ನು ಜೇಬಲ್ಲಿ ಇಟ್ಟುಕೊಂಡು ಅಡ್ಡಾಡುವುದು ಕಾಂಗ್ರೆಸ್ ನಾಯಕರಿಗೆ ಹವ್ಯಾಸವಾಗಿದೆ. ನೆಹರು ಅವರು ಸಂವಿಧಾನ ರಚನೆ ಮಾಡಲು ಬ್ರಿಟಿಷ್ ಅಧಿಕಾರಿಗೆ ನೀಡಿದ್ದರು. ಅಂದು ಗೊಂದಲ ಆಯಿತು, ಗಾಂಧೀಜಿ ಅವರು ಮಧ್ಯಪ್ರವೇಶ ಮಾಡಿ ಅಂಬೇಡ್ಕರ್ ಅವರಿಗೆ ಬೆಂಬಲಿಸಿದರು. ನೆಹರು ಅವರು ಅಂಬೇಡ್ಕರ್ ವಿರುದ್ಧ ಪ್ರಚಾರ ಮಾಡಿ ಲೋಕಸಭೆ ಚುನಾವಣೆಯಲ್ಲಿ ಸೋಲಿಸಿದರು. ಇಂದಿರಾಗಾಂಧಿ, ರಾಜೀವಗಾಂಧಿ ಅವರ ಸಮಾಧಿಗೆ ಐದು ಎಕರೆ ಜಮೀನು ನೀಡಿದರು. ಆದರೆ, ಅಂಬೇಡ್ಕರ್ ಅವರ ಸಮಾಧಿಗೆ ಜಾಗ ನೀಡಲಿಲ್ಲ. ಕಾಂಗ್ರೆಸ್ಸಿನವರಿಗೆ ಅಂಬೇಡ್ಕರ್ ಹೆಸರು ಹೇಳುವ ನೈತಿಕತೆಯೇ ಇಲ್ಲ ಎಂದರು.ಡ್ಯಾಂ ಗೇಟ್ ನಿರ್ಮಾಣ ಮಾಡಿಲ್ಲ: ತುಂಗಭದ್ರಾ ಜಲಾಶಯದ ಗೇಟ್‌ಗಳನ್ನು ನಿರ್ಮಾಣ ಮಾಡುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆ ಮಾಡಿದೆ. ಈಗ 32 ಕ್ರಸ್ಟ್ ಗೇಟ್‌ಗಳನ್ನು ನಿರ್ಮಾಣ ಮಾಡಬೇಕು. ಸರ್ಕಾರ ಇನ್ನು ಗೇಟ್‌ಗಳನ್ನು ನಿರ್ಮಾಣ ಮಾಡಿಲ್ಲ. ಟೆಂಡರ್ ಪಡೆದವರಿಗೆ ₹12 ಕೋಟಿ ಬಿಲ್ ಕೂಡ ಪಾವತಿ ಮಾಡಿಲ್ಲ. ಈ ವರ್ಷ ಎರಡನೆ ಬೆಳೆಗೆ ನೀರಿಲ್ಲ. ಇನ್ನು ಮುಂದಿನ ವರ್ಷ ಕೂಡ ಬೆಳೆಗೆ ನೀರು ದೊರೆಯುವುದು ಅನುಮಾನವಿದೆ ಎಂದು ದೂರಿದರು.
ಶಾಸಕ ಕೃಷ್ಣ ನಾಯ್ಕ, ಮಾಜಿ ಶಾಸಕರಾದ ಸೋಮಶೇಖರ ರೆಡ್ಡಿ, ಬಸವರಾಜ ದಡೇಸೂಗೂರ, ಮುಖಂಡರಾದ ರವಿಕುಮಾರ, ಚನ್ನಬಸವನಗೌಡ ಪಾಟೀಲ್, ಬಲ್ಲಾಹುಣಸೆ ರಾಮಣ್ಣ ಮತ್ತಿತರರಿದ್ದರು.