ಜನಪ್ರಿಯ ಮುಖ್ಯಮಂತ್ರಿಗಳಲ್ಲಿ ಸಿದ್ದರಾಮಯ್ಯ ಒಬ್ಬರು

| Published : May 04 2024, 12:35 AM IST / Updated: May 04 2024, 12:36 AM IST

ಸಾರಾಂಶ

ಸಿದ್ದರಾಮಯ್ಯ ಅವರು ನನ್ನನ್ನು ಸಚಿವರನ್ನಾಗಿ ಮಾಡಲಿಲ್ಲ, ಆದರೂ ನನಗೆ ಬೇಜರಾಗಿಲ್ಲ. ಯಾಕೆಂದರೆ ಅವರು ಈ ರಾಜ್ಯವನ್ನು ಮಾದರಿ ಮಾಡಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ಯಲಬುರ್ಗಾ: ಈ ರಾಜ್ಯ ಕಂಡ ಜನಪ್ರಿಯ ಮುಖ್ಯಮಂತ್ರಿಗಳಲ್ಲಿ ಸಿದ್ದರಾಮಯ್ಯ ಒಬ್ಬರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.

ಪಟ್ಟಣದ ಬಯಲು ರಂಗ ಮಂದಿರದಲ್ಲಿ ಗುರುವಾರ ರಾತ್ರಿ ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಚುನಾವಣಾ ಪ್ರಚಾರಾರ್ಥ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನನ್ನನ್ನು ಸಚಿವರನ್ನಾಗಿ ಮಾಡಲಿಲ್ಲ, ಆದರೂ ನನಗೆ ಬೇಜರಾಗಿಲ್ಲ. ಅವರೊಬ್ಬ ಜನಪ್ರಿಯ ಮುಖ್ಯಮಂತ್ರಿ, ಅವರು ಈ ರಾಜ್ಯವನ್ನು ಮಾದರಿ ಮಾಡಲಿದ್ದಾರೆ ಎನ್ನುವ ವಿಶ್ವಾಸವಿದೆ.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ದೇಶದಲ್ಲೆಡೆ ಡ್ಯಾಂ, ಸೇತುವೆ, ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಸೇರಿದಂತೆ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಕಾಂಗ್ರೆಸ್ ದೇಶದ ಎಲ್ಲ ವರ್ಗದ ಜನರ ಹಿತ ಕಾಪಾಡುವ ಏಕೈಕ ಪಕ್ಷವಾಗಿದೆ ಎಂದರು.

ನನಗೆ ಯಾವುದೇ ಆಸೆ ಇಲ್ಲ: ಸಂಸದ ಸಂಗಣ್ಣ ಕರಡಿ ಮಾತನಾಡಿ, ನಾನು ಈಗಾಗಲೇ ಒಮ್ಮೆ ಜಿಪಂ, ಟಿಡಿಪಿ ಸದಸ್ಯ, ೪ ಬಾರಿ ಶಾಸಕ, ೨ ಸಲ ಸಂಸದನಾಗಿ ಅಧಿಕಾರವನ್ನು ಅನುಭವಿಸಿದ್ದೇನೆ. ಯಾವುದೇ ಆಸೆ, ಆಮಿಷವಿಲ್ಲದೆ ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ ಎಂದರು.

ಸಚಿವ ಶಿವರಾಜ ತಂಗಡಗಿ ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದ ಬಡವರ ಜೀವನ ಹಸನಾಗಿದೆ ಎಂದು ಹೇಳಿದರು. ಕಾಂಗ್ರೇಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಹಾಗೂ ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಮಾತನಾಡಿದರು.

ಯಂಕಣ್ಣ ಯರಾಸಿ, ಹನುಮಂತಗೌಡ ಪಾಟೀಲ, ವೀರನಗೌಡ ಬಳೋಟಗಿ, ಬಿ.ಎಂ. ಶಿರೂರ, ಎ.ಜಿ. ಭಾವಿಮನಿ, ಮಾಲತಿ ನಾಯಕ, ಕೆರಿಬಸಪ್ಪ ನಿಡಗುಂದಿ, ಈರಪ್ಪ ಕುಡಗುಂಟಿ, ಡಾ. ಶಿವನಗೌಡ ದಾನರೆಡ್ಡಿ ಮತ್ತಿತರರು ಇದ್ದರು.