ಸಿಬಿಐ ಮುಡಾ ತನಿಖೆಯಿಂದ ಸಿದ್ದರಾಮಯ್ಯಗೆ ನಡುಕ

| Published : Jul 09 2025, 12:18 AM IST

ಸಾರಾಂಶ

ವಾಲ್ಮೀಕಿ ನಿಗಮದ ಹಗರಣ ವಿರುದ್ಧ ಪಾದಯಾತ್ರೆ ಮಾಡುತ್ತೇವೆಂದಾಗ ದಪ್ಪ ಚರ್ಮದ ಕಾಂಗ್ರೆಸ್ ಸರ್ಕಾರ ಅನುಮತಿಯನ್ನೇ ನೀಡಲಿಲ್ಲ. ಆದರೆ, ನಾವು ಕೋರ್ಟ್ ಮೆಟ್ಟಿಲೇರಿದ್ದರಿಂದ ಇಡೀ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಆದೇಶ ಸಿಕ್ಕಿರುವುದು ನಮ್ಮ ಹೋರಾಟಕ್ಕೆ ಸಿಕ್ಕ ಜಯ ಎಂದು ಮೈಸೂರಿನ ಬಿಜೆಪಿ ಮಾಜಿ ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ.

- ಸಿಬಿಐ ತನಿಖೆಗೆ ಕೋರ್ಟ್ ಆದೇಶ ನಮ್ಮ ಹೋರಾಟದ ಫಲ: ದಾವಣಗೆರೆಯಲ್ಲಿ ಪ್ರತಾಪ ಸಿಂಹ ಹೇಳಿಕೆ- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ವಾಲ್ಮೀಕಿ ನಿಗಮದ ಹಗರಣ ವಿರುದ್ಧ ಪಾದಯಾತ್ರೆ ಮಾಡುತ್ತೇವೆಂದಾಗ ದಪ್ಪ ಚರ್ಮದ ಕಾಂಗ್ರೆಸ್ ಸರ್ಕಾರ ಅನುಮತಿಯನ್ನೇ ನೀಡಲಿಲ್ಲ. ಆದರೆ, ನಾವು ಕೋರ್ಟ್ ಮೆಟ್ಟಿಲೇರಿದ್ದರಿಂದ ಇಡೀ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಆದೇಶ ಸಿಕ್ಕಿರುವುದು ನಮ್ಮ ಹೋರಾಟಕ್ಕೆ ಸಿಕ್ಕ ಜಯ ಎಂದು ಮೈಸೂರಿನ ಬಿಜೆಪಿ ಮಾಜಿ ಸಂಸದ ಪ್ರತಾಪ ಸಿಂಹ ಹೇಳಿದರು.

ನಗರದ ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ಮಂಗಳವಾರ ಜಿ.ಎಂ. ಸಿದ್ದೇಶ್ವರ ಅಭಿಮಾನಿ ಬಳಗ ಹಮ್ಮಿಕೊಂಡಿದ್ದ ಕೇಂದ್ರದ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಜಿ.ಎಂ. ಸಿದ್ದೇಶ್ವರ ಅವರ 74ನೇ ಜನ್ಮದಿನ ಸಮಾರಂಭದಲ್ಲಿ ಅವರು ಮಾತನಾಡಿದರು. ಮುಡಾ ಸೈಟ್ ಹಗರಣದಲ್ಲಿ ಹೇಗೋ ಬಚಾವ್ ಆಗಿರುವೆ ಎಂದುಕೊಂಡಿದ್ದ ಸಿಎಂ ಸಿದ್ದರಾಮಯ್ಯ, ವಾಲ್ಮೀಕಿ ನಿಗಮ ಹಗರಣದಲ್ಲಿ ಮನೆಗೆ ಹೋಗುವುದು ನಿಶ್ಚಿತ ಎಂದರು.

ಕಾಂಗ್ರೆಸ್ ಸರ್ಕಾರವು ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಮಾಡಿಕೊಂಡು, ಬೇರೆ ಬ್ಯಾಂಕ್ ಖಾತೆಗಳಿಗೆ ಹಾಕಿ, ಅಲ್ಲಿಂದ ಹಣ ಡ್ರಾ ಮಾಡಿಕೊಂಡು, ಚುನಾವಣೆಗೆ ಬಳಸಿಕೊಂಡಿದ್ದ ಪ್ರಕರಣ ಇದೀಗ ಸಿಬಿಐನಿಂದ ತನಿಖೆಯಾಗಲಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಸಾಹೇಬರಿಗೆ ನಡುಕ ಶುರುವಾಗಿದೆ ಎಂದರು.

ಗ್ಯಾರಂಟಿಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದು 48 ಅಗತ್ಯ ವಸ್ತು, ಸೇವೆಗಳ ಬೆಲೆ ಹೆಚ್ಚಿಸಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಭಂಡ ಸರ್ಕಾರವಾಗಿದೆ. ಮುಂಬರುವ ಚುನಾವಣೆಗಳಲ್ಲೂ ಬಿಜೆಪಿ-ಜೆಡಿಎಸ್ ಒಂದಾಗಿಯೇ ಹೋಗುತ್ತೇವೆ. ಮತ್ತೆ ಅಧಿಕಾರಕ್ಕೆ ಬಿಜೆಪಿ ಬಂದೇ ಬರುತ್ತದೆ. ಮುಂದಿನ ದಿನಗಳಲ್ಲಿ ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ ನೇತೃತ್ವದಲ್ಲೇ ದಾವಣಗೆರೆ, ಚಿತ್ರದುರ್ಗ, ತುಮಕೂರಿನಲ್ಲಿ ಗೆಲುವನ್ನು ಸಂಭ್ರಮಿಸೋಣ ಎಂದರು.

ಹರಿಹರ ಶಾಸಕ ಬಿ.ಪಿ.ಹರೀಶ ಅಧ್ಯಕ್ಷತೆ ವಹಿಸಿದ್ದರು. 74ನೇ ಜನ್ಮದಿನ ಆಚರಿಸಿಕೊಂಡ ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಗಾಯತ್ರಿ ಸಿದ್ದೇಶ್ವರ, ಜೆಡಿಎಸ್ ನಾಯಕ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ, ಮುಖಂಡ ಜೆ.ಅಮಾನುಲ್ಲಾ ಖಾನ್, ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ, ಎಚ್.ಪಿ.ರಾಜೇಶ, ಪ್ರೊ.ಎನ್.ಲಿಂಗಣ್ಣ, ಮಾಜಿ ಸಂಸದರಾದ ಬಿ.ವಿ.ನಾಯಕ್, ದೂಡಾ ಮಾಜಿ ಅಧ್ಯಕ್ಷರಾದ ಯಶವಂತ ರಾವ್ ಜಾಧವ್, ಎ.ವೈ.ಪ್ರಕಾಶ, ದೇವರಮನಿ ಶಿವಕುಮಾರ, ರಾಜನಹಳ್ಳಿ ಶಿವಕುಮಾರ, ಟಿ.ಶ್ರೀನಿವಾಸ ದಾಸಕರಿಯಪ್ಪ, ಮಾಯಕೊಂಡ ಜಿ.ಎಸ್‌.ಶ್ಯಾಮ್, ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ.ವಿನಯಕುಮಾರ, ಎಸ್.ಎಂ.ವೀರೇಶ ಹನಗವಾಡಿ, ಜಿ.ಎಂ.ಅನಿತಕುಮಾರ, ಅಣಬೇರು ಜೀವನಮೂರ್ತಿ, ರವಿ ಬಿರಾದಾರ, ಎಚ್.ಸಿ.ಜಯಮ್ಮ, ಶಿವನಗೌಡ ಪಾಟೀಲ, ಕಿಶೋರಕುಮಾರ, ಟಿಂಕರ್ ಮಂಜಣ್ಣ, ಸೋಗಿ ಗುರುಶಾಂತ, ರಾಜು ನೀಲಗುಂದ, ಟಿಪ್ಪು ಸುಲ್ತಾನ್, ನಸೀರ್ ಅಹಮ್ಮದ್ ಇತರರು ಇದ್ದರು.

ಬೃಹತ್ ಹಾರ-ಕೇಕ್‌- ಪುರಸ್ಕಾರ:

ಇದೇ ವೇಳೆ ಮಾಯಕೊಂಡ ಜಿ.ಎಸ್.ಶ್ಯಾಮ್‌ ತಂಡದಿಂದ ಬೃಹತ್‌ ಹೂವಿನ ಹಾರವನ್ನು ಜಿ.ಎಂ. ಸಿದ್ದೇಶ್ವರ ಅವರಿಗೆ ಹಾಕಿ, ದೊಡ್ಡ ಕೇಕ್ ಕತ್ತರಿಸಲಾಯಿತು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಜಿಲ್ಲೆಯ ಮೊದಲ ಐವರು ಸಾಧಕರು, ಅಂಧ ಮಕ್ಕಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.

- - -

(ಬಾಕ್ಸ್‌) ಮೋಸಗಾರರಿಗೆ ಪಾಠ ಕಲಿಸೋಣ: ಕು.ಬಂ:

ಬಿಜೆಪಿ ಮಾಜಿ ಸಚಿವ ಕುಮಾರ ಬಂಗಾರಪ್ಪ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಲೋಕಸಭೆ ಚುನಾವಣೆ ಪ್ರಚಾರಕ್ಕೆಂದು ಶಿವಮೊಗ್ಗಕ್ಕೆ ಬಂದಿದ್ದರು. ಎರಡೂ ಕ್ಷೇತ್ರ ನಮ್ಮ ಪಕ್ಷದ ಭದ್ರಕೋಟೆ ಆಗಿದ್ದವು. ಆದರೆ, ದಾವಣಗೆರೆಯಲ್ಲಿ ಕೆಲವು ಮೀರ್ ಸಾದಿಕ್‌ಗಳು, ಮಲ್ಲಪ್ಪ ಶೆಟ್ಟಿ, ಕೊಂಡಿ ಮಂಚಯ್ಯನಂತಹವರು ಪಕ್ಷಕ್ಕೆ ಮೋಸ ಮಾಡಿದ್ದರಿಂದ ಗಾಯತ್ರಿ ಸಿದ್ದೇಶ್ವರ್ ಇಲ್ಲಿ ಸೋಲಬೇಕಾಯಿತು. ನಮ್ಮ ಪಕ್ಷಕ್ಕೆ, ನಮ್ಮ ಅಭ್ಯರ್ಥಿಗೆ, ನಮ್ಮ ಲಕ್ಷಾಂತರ ಕಾರ್ಯಕರ್ತರ ನಂಬಿಕೆ ಮೋಸ ಮಾಡಿ, ಬೆನ್ನಿಗೆ ಚೂರಿ ಹಾಕಿದವರಿಗೆ ಎದುರಿಗೆ ನಿಂತು ಪಾಠ ಕಲಿಸೋಣ. ಪಕ್ಷದ ಆದೇಶಕ್ಕಿಂತ ದೊಡ್ಡದು ಯಾವುದೂ ಇಲ್ಲ. ನಾವ್ಯಾರೂ ಪಕ್ಷದ ವಿರೋಧವಾಗಿ ಹೋಗುವವರಲ್ಲ. ದಾವಣಗೆರೆಯಂತಹ ಕ್ಷೇತ್ರ ಸೋತಿದ್ದು ರಾಷ್ಟ್ರೀಯ ನಾಯಕರಿಗೂ ನೋವುಂಟು ಮಾಡಿದೆ. ಮತ್ತೆ ದಾವಣಗೆರೆ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ತೆಕ್ಕೆಗೆ ತರುತ್ತೇವೆ ಎಂದರು. ದಾವಣಗೆರೆಗೂ ತಮ್ಮ ತಂದೆ ಎಸ್.ಬಂಗಾರಪ್ಪನವರಿಗೂ ಅ‍ವಿನಾಭಾವ ಸಂಬಂಧ. ಈ ಊರಿಗೆ ಬಂದಾಗಲೆಲ್ಲಾ ರಸ್ತೆ, ವೃತ್ತ, ಹೋಟೆಲ್, ಪರಿಚಯಸ್ಥರು, ಬಂಧುಗಳ ಮನೆಗೆ ಬಂದಾಗಲೆಲ್ಲಾ ನಮಗೆ ಇಂತಹವರು ಬಾಲ್ಯದಲ್ಲಿ, ವಿದ್ಯಾರ್ಥಿ ದೆಸೆಯಲ್ಲಿ ಸಹಾಯ ಮಾಡಿದ್ದು, ಇಲ್ಲಿ ಸುತ್ತಾಡಿದ್ದು, ಓದುತ್ತಿದ್ದುದು, ಕಾಲ ಕಳೆಯುತ್ತಿದ್ದುದನ್ನು ಮೆಲಕು ಹಾಕುತ್ತಿದ್ದರು. ಇಲ್ಲಿನ ಬೆಣ್ಣೆದೋಸೆ, ಮಂಡಕ್ಕಿ, ಮೆಣಸಿನಕಾಯಿ ಬಗ್ಗೆ ತಿಳಿಸುತ್ತಿದ್ದರು. ಅಲ್ಲದೇ, ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಅಡಿಕೆ ಬೆಳೆಗಾರರೂ ಆದ ತಮ್ಮ ತಂದೆಗೆ ಸಹಾಯ ಮಾಡುತ್ತಿದ್ದುದು, ಏನಾದರೂ ಬೇಕೆಂದರೆ ಸಿದ್ದೇಶಣ್ಣನಿಗೆ ಸಂಪರ್ಕಿಸುತ್ತಿದ್ದುದನ್ನು ಮೆಲಕು ಹಾಕಿದರು.

- - -

-(ಫೋಟೋಗಳಿವೆ)