ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಶರಣರ ಬಗ್ಗೆ ಮಾತನಾಡುವುದೆಂದರೆ ಶರಣ ಪೂಜೆ ಮಾಡಿದಂತೆ. ಅವರು ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ಸರಿಪಡಿಸಿದ ಶಿವಯೋಗಿ ಸಿದ್ದರಾಮೇಶ್ವರ ಅವರು ಅನುಭವ ಮಂಟಪದ ಧ್ರುವತಾರೆ. ವಚನಗಳ ಮೂಲಕ ಜಗತ್ತಿಗೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಯು.ಬಿ. ಬಣಕಾರ ಅಭಿಪ್ರಾಯಪಟ್ಟರು.

ಹಿರೇಕೆರೂರು: ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಶರಣರ ಬಗ್ಗೆ ಮಾತನಾಡುವುದೆಂದರೆ ಶರಣ ಪೂಜೆ ಮಾಡಿದಂತೆ. ಅವರು ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ಸರಿಪಡಿಸಿದ ಶಿವಯೋಗಿ ಸಿದ್ದರಾಮೇಶ್ವರ ಅವರು ಅನುಭವ ಮಂಟಪದ ಧ್ರುವತಾರೆ. ವಚನಗಳ ಮೂಲಕ ಜಗತ್ತಿಗೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಯು.ಬಿ. ಬಣಕಾರ ಅಭಿಪ್ರಾಯಪಟ್ಟರು.

ಪಟ್ಟಣದ ತಹಸೀಲ್ದಾರ್‌ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ಆಚರಿಸಲಾದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶ್ರೀ ಸಿದ್ದರಾಮೇಶ್ವರರನ್ನು ಪವಾಡ ಪುರುಷನೆಂದರೆ ತಪ್ಪಾಗಲಾರದು. ಆದರೆ, ಅವರು ಢಂಬಾಚಾರದ ಪವಾಡಗಳನ್ನು ಸೃಷ್ಟಿಸಲಿಲ್ಲ. ಬದಲಾಗಿ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿಸುವ ಪವಾಡ ಮಾಡಿದರು. ಹೀಗಾಗಿ ಪವಾಡಗಳನ್ನು ಸೃಷ್ಟಿಸುವುದು ಮನುಷ್ಯನೇ ಹೊರತು ದೇವರಲ್ಲ. ಮನುಷ್ಯ ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಲ್ಲ ಎಂಬುದನ್ನು ಅವರು 12ನೇ ಶತಮಾನದಲ್ಲಿಯೇ ತೋರಿಸಿಕೊಟ್ಟಿದ್ದಾರೆ. ಅವರನ್ನು ಸ್ಫೂರ್ತಿಯನ್ನಾಗಿಸಿಕೊಂಡು ಇಂದಿನ ಯುವ ಪೀಳಿಗೆ ಸಾಧನೆಯ ಶಿಖರವನ್ನೆರಬೇಕು. ತನ್ನನ್ನು ತಾನು ಅರಿತು ಬಾಳಿದ ಶ್ರೀ ಸಿದ್ದರಾಮೇಶ್ವರರು ಕೆರೆ, ಕಾಲುವೆ, ದೇವಸ್ಥಾನ, ಕಟ್ಟಿಸುವ ಮೂಲಕ ಕರ್ಮ ಮಾರ್ಗದಲ್ಲಿ ಸಾಗಿ ಮಾನವ ಜನ್ಮ ಸಾರ್ಥಕ ಎಂದು ನಿರೂಪಿಸಿದ್ದಾರೆ. ಆನಂತರದ ದಿನಗಳಲ್ಲಿ ಬಸವಣ್ಣ ಮತ್ತು ಸಾವಿರಾರು ಶರಣರ ಭೇಟಿಯಿಂದ ಜ್ಞಾನಮಾರ್ಗದಲ್ಲಿ ಸಾಗಿದರು. ಆ ಮೂಲಕ ಸಕಲ ಜೀವಾತ್ಮಗಳಿಗೂ ಒಳಿತನ್ನು ಬಯಸುವ ಹೃದಯವಂತರಾಗಿ ಹೊರಹೊಮ್ಮಿದ್ದಾರೆ. ಶ್ರೀ ಸಿದ್ದರಾಮೇಶ್ವರರ ವಚನಗಳು ಸಮಾಜದಲ್ಲಿರುವ ಸಕಲ ಜೀವಿಗಳಿಗೂ ಒಳಿತನ್ನು ಬಯಸುವುದಾಗಿದೆ. ಬದುಕು ಶ್ರೇಷ್ಠವಾಗಬೇಕಾದರೆ ದುಡಿಮೆಯನ್ನು ಪೂಜಿಸಬೇಕು. ದುಡಿಮೆಯಲ್ಲಿ ಭಗವಂತನನ್ನು ಕಾಣಬೇಕು ಎಂದು ತಿಳಿಸುತ್ತವೆ. ಹೀಗಾಗಿ ಪ್ರತಿಯೊಬ್ಬರೂ ಸೋಮಾರಿಗಳಾಗದೆ ದುಡಿಮೆಗೆ ಪ್ರಾಮುಖ್ಯತೆ ನೀಡಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಮಂಡ್ಯ ಉಪವಿಭಾಗಾಧಿಕಾರಿ ರಾಜೇಶ್ ಮಾತನಾಡಿ, ಜಾತೀಯತೆ, ಆಚಾರ-ವಿಚಾರ ಎಂಬ ಮನೋಭಾವ ಬಿಟ್ಟು ನಾವೆಲ್ಲರೂ ಮನುಷ್ಯರು ಹಾಗೂ ಎಲ್ಲರೂ ಸಮಾನರು ಎಂಬ ಸಂದೇಶವನ್ನು ನೀಡಿದ ಮಹಾನುಭಾವರು ಎಂದು ಹೇಳಿದರು.

ಮುಖಂಡರಾದ ಭೀಮಪ್ಪ ಬತ್ತಿಕೊಪ್ಪ, ದುರ್ಗಪ್ಪ ನೇರ್ಲಗಿ, ಪರಮೇಶ್ವರಪ್ಪ ಕಾಗಿನೆಲೆ, ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಬುರುಡಿಕಟ್ಟಿ, ರಮೇಶ್ ಬಂಡಿವಡ್ಡರ್, ಎಂ.ಬಿ. ವೀರಪುರ ಹಾಜರಿದ್ದರು.