ಸಿದ್ದರಾಮಯ್ಯನವರೆ ಪ್ರಜ್ವಲ್‌ ನನ್ನು ವಿದೇಶಕ್ಕೆ ಕಳುಹಿಸಿರಬಹುದು: ಆರ್.ಅಶೋಕ

| Published : May 04 2024, 12:33 AM IST / Updated: May 04 2024, 10:13 AM IST

R Ashok

ಸಾರಾಂಶ

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದ ಎಪಿಸೋಡ್ ನೋಡಿದಾಗ ಸಿದ್ದರಾಮಯ್ಯನವರೆ ಪ್ರಜ್ವಲ ರೇವಣ್ಣನನ್ನು ವಿದೇಶಕ್ಕೆ ಕಳುಹಿಸಿರಬಹುದು ಎನಿಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಆರೋಪಿಸಿದ್ದಾರೆ.

 ಬೀದರ್‌ :  ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದ ಎಪಿಸೋಡ್ ನೋಡಿದಾಗ ಸಿದ್ದರಾಮಯ್ಯನವರೆ ಪ್ರಜ್ವಲ ರೇವಣ್ಣನನ್ನು ವಿದೇಶಕ್ಕೆ ಕಳುಹಿಸಿರಬಹುದು ಎನಿಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಆರೋಪಿಸಿದ್ದಾರೆ.

ಬೀದರ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಈಗಾಗಲೇ ಎಸ್ಐಟಿ ರಚನೆ ಮಾಡಿದ್ದಾರೆ, ಏನು ಮಾಡುತ್ತಿದ್ದಾರೆ ಎಸ್ಐಟಿಯವರು?. ಹಾಸನದಿಂದ ಪ್ರಜ್ವಲ್‌ನನ್ನು ಏರಪೋರ್ಟ್‌ಗೆ ತಂದು ಬಿಟ್ಟವರು ಯಾರು?. ಸಿದ್ದರಾಮಯ್ಯ ಮೊಬೈಲ್ ಟ್ರ್ಯಾಪ್‌ ಮಾಡಿದರೆ ಎಲ್ಲಾ ಗೊತ್ತಾಗುತ್ತದೆ. ಪ್ರಜ್ವಲ್‌ನನ್ನು ಏರ್‌ಪೋರ್ಟ್‌ಗೆ ತಂದು ಬಿಟ್ಟವರು ಸಿದ್ದರಾಮಯ್ಯನವರು ಎಂದು ಆರೋಪಿಸಿದರು.

ಕಾನೂನು ಸುವ್ಯವಸ್ಥೆ, ಪೊಲೀಸ್ ವ್ಯವಸ್ಥೆ ಎಲ್ಲವೂ ಸರ್ಕಾರದ ಕೈಯಲ್ಲಿದೆ. ಪ್ರಜ್ವಲ್‌ ರೇವಣ್ಣ ಮತ ಹಾಕಿದ ಮೇಲೆ ಎಲ್ಲಿ ಹೋಗಬೇಕಿತ್ತು, ಎಲ್ಲಿ ಹೋದ..? ಹಾಸನದಿಂದ ಸುಮಾರು 300 ಕಿ.ಮೀ. ದೂರದಲ್ಲಿ ಏರ್‌ಪೋರ್ಟ್‌ ಇದೆ. 300 ಕಿ.ಮೀ ಹೋಗಲು ಬಿಟ್ಟವರು ಯಾರು? ಇದು ಚುನಾವಣೆಗೋಸ್ಕರ, ದೇವೇಗೌಡರಿಗೆ ಅವಮಾನ ಮಾಡುವುದಕ್ಕೋಸ್ಕರ ಮಾಡುತ್ತಿದ್ದಾರೆ ಎಂದರು.

ಪ್ರಜ್ವಲ ರೇವಣ್ಣ ಮಾಡಿದ್ದು ತಪ್ಪು ಅಂತ ಆದರೆ ಯಾಕೆ ಬಂಧಿಸಿಲ್ಲ, ಪೆನ್ ಡ್ರೈವ್ ಹೊರಗಡೆ ಬಂದ ಮೇಲೆ 14 ದಿನ ಸುಮ್ಮನೆ ಬಿಟ್ಟವರು ಯಾರು?, ಪೊಲೀಸ್ ಇಲಾಖೆ, ಇಂಟಲಿಜೆನ್ಸ್ ನವರು ಏನು ಮಾಡುತ್ತಿದ್ದರು?. ಧ್ಯಾನ ಇರಲಿಲ್ಲವ?, ಇವರಿಗೆ ಮಾನ ಮರ್ಯಾದೆ ಇರಲಿಲ್ವ?, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸತ್ತು ಹೋಗಿದೆಯಾ? ಕಾನೂನು ಸುವ್ಯವಸ್ಥೆ ಕಾಪಾಡಲು ಆಗಲ್ಲ ಎಂದರೆ ಬಿಟ್ಟು ಬಿಡಿ. ಪೊಲೀಸ್ ಇಲಾಖೆ, ಇಂಟಲಿಜೆನ್ಸ್‌ ನ್ನು ಕೇಂದ್ರಕ್ಕೆ ಬರೆದು ಕೊಟ್ಟು ಬಿಡಿ ಎಂದರು.ಸಿದ್ದು, ರೇವಣ್ಣ ನಡುವೆ ಹೊಂದಾಣಿಕೆ-ಜೋಶಿ:

ಪ್ರಜ್ವಲ್‌ ರೇವಣ್ಣ ಅವರಿಗೆ ಈಗ ಲುಕ್‌ಔಟ್‌ ನೋಟಿಸ್‌ ಕೊಟ್ಟಿದ್ದಾರೆ. ಮೊದಲೇ ಎಫ್‌ಐಆರ್‌ ಮಾಡಿದ್ದರೆ ಅವರ ಬಂಧನವಾಗುತ್ತಿತ್ತು. ಅವರಿಗೆ ಜಪಾನ್‌, ಜರ್ಮನಿಗೆ ಹೋಗುವುದಕ್ಕೆ ಆಗುತ್ತಿರಲಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಪ್ರಜ್ವಲ್​ ರೇವಣ್ಣರನ್ನು ಬಿಟ್ಟಿದ್ದು ನೀವೇ. ಇದರಲ್ಲಿ ಸಿಎಂ ಸಿದ್ದರಾಮಯ್ಯ ಕೈವಾಡವಿದೆ. ಏ.21ರಂದು ಪ್ರಕರಣ ಬೆಳಕಿಗೆ ಬಂದಿದ್ದರೂ ಸಿದ್ದರಾಮಯ್ಯ ಬೇಕಂತಲೇ ಎಫ್‌ಐಆರ್​ ಮಾಡಿಸಲಿಲ್ಲ. ಸಿದ್ದರಾಮಯ್ಯ ಮತ್ತು ರೇವಣ್ಣ ನಡುವೆ ಹೊಂದಾಣಿಕೆ ಇದೆ ಎಂದು ಆರೋಪಿಸಿದರು.

ಪೆನ್‌ಡ್ರೈವ್​ ಪ್ರಕರಣ ಸಂಬಂಧ ಪ್ರಜ್ವಲ್ ಸಹೋದರ ತಮ್ಮನ್ನು ಭೇಟಿ ಮಾಡಿದ್ದಾರೆ ಎಂದು ಅವರೇ ಹೇಳಿಕೊಂಡಿದ್ದಾರೆ. ಆಗಲೇ ಯಾಕೆ ಕ್ರಮ ಕೈಗೊಳ್ಳಲಿಲ್ಲ? ಈ ಪ್ರಕರಣ ಗಂಭೀರ ಸ್ವರೂಪದ್ದು ಎಂದು ಗೊತ್ತಿದ್ದರೂ ಆರಾಮ ಮಲಗಿ ಈಗ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದೀರಾ? ವೀಸಾ, ಡಿಪ್ಲೋಮ್ಯಾಟಿಕ್‌ ಪಾಸ್‌ಪೋರ್ಟ್‌ (ರಾಜತಾಂತ್ರಿಕ ಪಾಸ್‌ಪೋರ್ಟ್‌) ಕೊಟ್ಟಿದ್ದೀರಾ ಎಂದು ಹೇಳುತ್ತಿದ್ದೀರಾ. ನಾಚಿಕೆ, ಮಾನ-ಮರ್ಯಾದೆ ಇದ್ದವರು ಈ ರೀತಿ ಮಾತನಾಡುವುದಿಲ್ಲ ಎಂದು ಹೇಳಿದರು.ಡಿಪ್ಲೋಮ್ಯಾಟಿಕ್‌ ಪಾಸ್‌ಪೋರ್ಟ್‌ ತೆಗೆದುಕೊಂಡರೆ ಹಲವಾರು ದೇಶಗಳಿಗೆ ವೀಸಾ ಇಲ್ಲದೆ ಹೋಗಬಹುದು. ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಮತ್ತು ಇತರ ಕಾಂಗ್ರೆಸ್​ ನಾಯಕರಿಗೆ ಇಷ್ಟೂ ಗೊತ್ತಿಲ್ಲವೇ? ಎಲ್ಲವನ್ನೂ ಕೇಂದ್ರದ ಮೇಲೆ ಹಾಕಬೇಕೆಂಬುದು ಇವರ ಪ್ರವೃತ್ತಿ ಎಂದು ವಾಗ್ದಾಳಿ ನಡೆಸಿದರು.

ಈ ಪ್ರಕರಣದ ಬಗ್ಗೆ ಜೋಶಿಯವರಿಗೆ ಎಲ್ಲವೂ ಗೊತ್ತಿತ್ತು, ಅದರೂ ಅವರು ಯಾಕೆ ಮುಚ್ಚಿಟ್ಟರು ಎಂಬ ಸಚಿವ ದಿನೇಶ್​ ಗುಂಡೂರಾವ್​ ಆರೋಪಕ್ಕೆ ಪ್ರತಿಕ್ರಿಯಿಸಿ, ಗುಂಡೂರಾವ್ ಗೆ ನನಗೆ ಎಲ್ಲವೂ ಗೊತ್ತಿತ್ತೆಂದು ಕನಸು ಬಿದ್ದಿತ್ತಾ?. ಅವರು ​ಬೆಂಗಳೂರಿನಲ್ಲಿರುವವರು, ನಾನು ಹುಬ್ಬಳ್ಳಿಯಲ್ಲಿರುವವನು. ಗುಂಡೂರಾವ್​ ಮಂತ್ರಿಯಾಗಿದ್ದಾರೆ, ಅವರಿಗೇ ಗೊತ್ತಿಲ್ಲ ಎಂದರೆ ನನಗೆ ಗೊತ್ತಿರುತ್ತಾ? ಗುಂಡೂರಾವ್ ಸೆನ್ಸಿಟಿವ್ ರಾಜಕಾರಣಿ ಎಂದು ನಾನಂದುಕೊಂಡಿದ್ದೇನೆ. ರಾಹುಲ್​ ಗಾಂಧಿ ಅವರಂತೆ ಮಾತನಾಡಬೇಡಿ ಎಂದು ತಿರುಗೇಟು ನೀಡಿದರು.