ಹೈಕೋರ್ಟ್‌ನತ್ತ ಎಲ್ಲರ ಚಿತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಡಾ ಕೇಸ್‌ ಇಂದು ಏನಾಗುತ್ತೆ?

| Published : Aug 29 2024, 02:01 AM IST / Updated: Aug 29 2024, 05:18 AM IST

ಸಾರಾಂಶ

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ರದ್ದುಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ರಿಟ್‌ ಅರ್ಜಿಯು ಗುರುವಾರ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದ್ದು, ಇಡೀ ರಾಜ್ಯದ ಗಮನ ಕಲಾಪದ ಮೇಲಿದೆ.

 ಬೆಂಗಳೂರು : ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ರದ್ದುಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ರಿಟ್‌ ಅರ್ಜಿಯು ಗುರುವಾರ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದ್ದು, ಇಡೀ ರಾಜ್ಯದ ಗಮನ ಕಲಾಪದ ಮೇಲಿದೆ.

ಈ ವಿಚಾರಣೆಯ ಫಲಿತಾಂಶ ಏನಾಗಬಹುದು ಎಂಬ ತೀವ್ರ ಕುತೂಹಲ ರಾಜ್ಯ ಹಾಗೂ ರಾಷ್ಟ್ರ ರಾಜಕೀಯ ವಲಯದಲ್ಲಿದೆ. ಹೈಕೋರ್ಟ್‌ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠವು ಗುರುವಾರವೇ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸುತ್ತದೆಯೇ ಅಥವಾ ವಾದ-ಪ್ರತಿ ವಾದ ಪೂರ್ಣಗೊಳ್ಳದೆ ಅರ್ಜಿ ವಿಚಾರಣೆ ಮುಂದೂಡಿಕೆ ಕಾಣುತ್ತದೆಯೇ ಎಂಬ ಕುತೂಹಲ ಮೂಡಿದೆ.

ಒಂದೊಮ್ಮೆ ತೀರ್ಪು ಬಂದರೆ ಅದು ಸಿದ್ದರಾಮಯ್ಯ ಅವರ ಪರ ಇರಲಿದೆಯೇ? ಅಥವಾ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮವನ್ನು ಎತ್ತಿ ಹಿಡಿಯಲಿದೆಯೇ ಎಂಬ ಕುತೂಹಲವೂ ಇದೆ.

ನ್ಯಾಯಾಲಯವು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದರೆ ಸೆ.2ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ತನಿಖೆಗೆ ಅನುಮತಿ ನೀಡಲಿದೆಯೇ? ಇದರ ವಿರುದ್ಧ ಸಿದ್ದರಾಮಯ್ಯ ಕಾನೂನು ಹೋರಾಟ ಮುಂದುವರೆಸಲಿದ್ದಾರೆಯೇ? ಗುರುವಾರದ ತೀರ್ಪಿನಿಂದ ವೈಯಕ್ತಿಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಥಾನ ಹಾಗೂ ರಾಜ್ಯ ರಾಜಕೀಯ ವಲಯದಲ್ಲಿ ಆಗಲಿರುವ ಬದಲಾವಣೆಗಳೇನು ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಶುರುವಾಗಿದ್ದು, ಎಲ್ಲರ ಚಿತ್ತ ನ್ಯಾಯಾಲಯದ ಆದೇಶದತ್ತ ನೆಟ್ಟಿದೆ.

ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿದರೆ ಗುರುವಾರ ಹೈಕೋರ್ಟ್‌ ಪ್ರಾಸಿಕ್ಯೂಷನ್‌ ಪರ ತೀರ್ಪು ನೀಡಿದರೆ ಸಿದ್ದರಾಮಯ್ಯ ಅವರು ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಬಹುದು. ಅಲ್ಲೂ ಪ್ರಾಸಿಕ್ಯೂಷನ್‌ ಆದೇಶ ಎತ್ತಿ ಹಿಡಿದು ತೀರ್ಪು ಬಂದರೆ ಸುಪ್ರೀಂಕೋರ್ಟ್‌ ಮೊರೆ ಹೋಗಬಹುದು. ಇದೆಲ್ಲ ಪ್ರಕ್ರಿಯೆ ಒಂದೆರಡು ತಿಂಗಳು ನಡೆಯಬಹುದು. ಅಲ್ಲಿಯವರೆಗೂ ಯಾವುದೇ ರೀತಿಯ ಬದಲಾವಣೆ ಸಾಧ್ಯತೆಯಿಲ್ಲ.

ಒಂದು ವೇಳೆ ಸುಪ್ರೀಂಕೋರ್ಟ್ ತೀರ್ಪು ಉಲ್ಟಾ ಆದರೆ ಆಗ ಏನಾಗಬಹುದು ಎಂಬುದೇ ಮಿಲಿಯನ್‌ ಡಾಲರ್‌ ಪ್ರಶ್ನೆ. ಮೂಲಗಳ ಪ್ರಕಾರ ರಾಜಕೀಯ ವಲಯದಲ್ಲಿ ಸ್ಥಿತ್ಯಂತರದ ಸಾಧ್ಯತೆಗಳು ಆಗ ಮೂಡಲು ಆರಂಭಿಸುತ್ತವೆ.

ಸಿದ್ದರಾಮಯ್ಯ ಪರ ನಿಂತಿರುವ ಹೈಕಮಾಂಡ್:

ತೀರ್ಪು ಏನೇ ಬಂದರೂ ಸಿದ್ದರಾಮಯ್ಯ ಅವರ ಪರವಾಗಿ ಗಟ್ಟಿಯಾಗಿ ನಿಲ್ಲಲು ಹೈಕಮಾಂಡ್‌ ನಿರ್ಧಾರ ಮಾಡಿದೆ. ಹೈಕೋರ್ಟ್‌ನಲ್ಲಿ ಸಿದ್ದರಾಮಯ್ಯ ಅವರ ಅರ್ಜಿಗೆ ಸೋಲುಂಟಾದರೂ ಸುಪ್ರೀಂಕೋರ್ಟ್‌ನಲ್ಲಿ ಹೋರಾಟ ಮಾಡಬೇಕು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಲ್ಲಿದ್ದೇ ಎಲ್ಲಾ ಕಾನೂನು ಹೋರಾಟವನ್ನು ಎದುರಿಸಬೇಕು. ಇದಕ್ಕೆ ಪಕ್ಷ ಗಟ್ಟಿಯಾಗಿ ಬೆಂಬಲಕ್ಕೆ ನಿಲ್ಲಬೇಕು ಎಂದು ತೀರ್ಮಾನಿಸಿದ್ದು, ಕೆಪಿಸಿಸಿಗೂ ಸೂಚನೆ ನೀಡಿದೆ.

ಒಂದೊಮ್ಮೆ ಸುಪ್ರೀಂಕೋರ್ಟ್‌ನಲ್ಲೂ ಸಿದ್ದರಾಮಯ್ಯ ವಿರುದ್ಧ ತೀರ್ಪು ಬಂದು ಎಫ್‌ಐಆರ್‌ ದಾಖಲಾದರೆ, ಪರಿಣಾಮ ಇಂಡಿಯಾ ಒಕ್ಕೂಟ ಹಾಗೂ ಪ್ರತಿಪಕ್ಷಗಳಿಂದ ಒತ್ತಡ ಬಂದರೆ ಹೈಕಮಾಂಡ್‌ ಮುಖ್ಯಮಂತ್ರಿಗಳ ಬದಲಾವಣೆ ಯೋಚನೆ ಮಾಡಬಹುದು ಎನ್ನಲಾಗಿದೆ.

ಇದೆಲ್ಲಾ ಬೆಳವಣಿಗೆಗಳ ಸಾಧ್ಯತೆ ಹಿನ್ನೆಲೆಯಲ್ಲಿ ಗುರುವಾರ ಹೈಕೋರ್ಟ್‌ನಲ್ಲಿ ನಡೆಯಲಿರುವ ವಿಚಾರಣೆ ತೀವ್ರ ಪ್ರಾಮುಖ್ಯತೆ ಗಳಿಸಿದೆ. ರಾಜ್ಯ ರಾಜಕೀಯದ ಭವಿಷ್ಯವನ್ನು ನಿರ್ಧರಿಸುವ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ.

ಸಿದ್ದು ಸಲ್ಲಿಸಿದ ಅರ್ಜಿ:

ರಾಜ್ಯಪಾಲರು ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಮುಖ್ಯಮಂತ್ರಿಗಳ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದು ತೀವ್ರ ಸಂಚಲನ ಉಂಟು ಮಾಡಿತ್ತು. ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸಿದ್ದರಾಮಯ್ಯ ಅವರು ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ರಿಟ್‌ ಅರ್ಜಿ ಆ.19 ವಿಚಾರಣೆಗೆ ಬಂದಿತ್ತು.

ಈ ವೇಳೆ ನಾಗಪ್ರಸನ್ನ ಅವರ ಪೀಠವು ಆ.29ರವರೆಗೆ ಆತುರದ ಕ್ರಮ ಜರುಗಿಸಬಾರದು ಎಂದು ಕೆಳ ನ್ಯಾಯಾಲಯಗಳು ಹಾಗೂ ಲೋಕಾಯುಕ್ತ ನ್ಯಾಯಾಲಯಕ್ಕೆ ಸೂಚನೆ ನೀಡಿದ್ದರು.

ಇದರಿಂದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮೇಲೂ ಪರಿಣಾಮ ಉಂಟಾಗಿತ್ತು. ಪ್ರಕರಣ ಕುರಿತು ವಿಶೇಷ ತನಿಖಾದಳ ಅಥವಾ ಬೇರೆ ಯಾವುದೇ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ದಾಖಲಿಸಿದ್ದ ದೂರನ್ನು ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಾಲಯವು ಪ್ರಕರಣವನ್ನು ನ.2ರವರೆಗೆ ಮುಂದೂಡಬೇಕಾಯಿತು. ಹೀಗಾಗಿ ಸಿದ್ದರಾಮಯ್ಯ ಅವರಿಗೆ ತಾತ್ಕಾಲಿಕ ರಿಲೀಫ್‌ ದೊರೆತಿತ್ತು.

ಗುರುವಾರ (ಆ.29) ರಂದು ಹೈಕೋರ್ಟ್‌ ನೀಡಬಹುದಾದ ತೀರ್ಪು ಜನಪ್ರತಿನಿಧಿಗಳ ನ್ಯಾಯಾಲಯದ ಅಂತಿಮ ತೀರ್ಪು ಪ್ರಕಟವಾಗುವುದನ್ನು ನಿರ್ಧರಿಸುವುದರಿಂದ ವಿಚಾರಣೆ ತೀವ್ರ ಮಹತ್ವ ಪಡೆದುಕೊಂಡಿದೆ.

ಕುತೂಹಲ

1. ಸಿದ್ದು ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ಹೈಕೋರ್ಟ್‌ ತೀರ್ಪು ಕಾದಿರಿಸುತ್ತಾ?

2. ವಾದ- ಪ್ರತಿವಾದ ಪೂರ್ಣಗೊಳ್ಳದೆ ಅರ್ಜಿ ವಿಚಾರಣೆ ಮುಂದಕ್ಕೆ ಹೋಗುತ್ತಾ? 

3. ತೀರ್ಪು ಏನಾದರೂ ಬಂದರೆ ಅದು ಸಿದ್ದು ಪರ ಇರುತ್ತಾ? ವಿರುದ್ಧ ಇರುತ್ತಾ?