ಮುಂದೆ ಸಿದ್ದು, ಪರಂ ವಿಡಿಯೋ ಕೂಡ ಬರಬಹುದು: ರಮೇಶ್ ಜಾರಕಿಹೊಳಿ

| Published : May 08 2024, 01:02 AM IST

ಸಾರಾಂಶ

ಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ಅವರ ವಿಡಿಯೋಗಳೂ ಬರಬಹುದು. ದಯವಿಟ್ಟು ಗೃಹ ಸಚಿವರು, ಸಿಎಂ ಪಕ್ಷಾತೀತವಾಗಿ ಇಂಥದ್ದಕ್ಕೆಲ್ಲ ಇತಿಶ್ರೀ ಹಾಡಬೇಕು. ಈ ಸಂಬಂಧ ನಾನು ಸಿಎಂ ಅವರನ್ನು ಕೈಮುಗಿದು ಕೇಳಿಕೊಳ್ಳುತ್ತೇನೆ ಎಂದು ಶಾಸಕ ರಮೇಶ್‌ ಜಾರಕಿಹೊಳಿ ಹೇಳಿದರು.

ಬೆಳಗಾವಿ: ಈಗ ಒಬ್ಬರಿಗೆ (ಪ್ರಜ್ವಲ್‌ ರೇವಣ್ಣ) ಆಗಿದೆ. ಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ಅವರ ವಿಡಿಯೋಗಳೂ ಬರಬಹುದು. ದಯವಿಟ್ಟು ಗೃಹ ಸಚಿವರು, ಮುಖ್ಯಮಂತ್ರಿಗಳು ಪಕ್ಷಾತೀತವಾಗಿ ಇಂಥದ್ದಕ್ಕೆಲ್ಲ ಇತಿಶ್ರೀ ಹಾಡಬೇಕು. ಈ ಸಂಬಂಧ ನಾನು ಮುಖ್ಯಮಂತ್ರಿ ಅವರನ್ನು ಕೈಮುಗಿದು ಕೇಳಿಕೊಳ್ಳುತ್ತೇನೆ ಎಂದು ಮಾಜಿ ಸಚಿವ, ಶಾಸಕ ರಮೇಶ್‌ ಜಾರಕಿಹೊಳಿ ಹೇಳಿದರು. ಸಂಸದ ಪ್ರಜ್ವಲ್ ವಿಡಿಯೋ ವೈರಲ್ ವಿಚಾರ ಕುರಿತು ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಸೀಡಿ ವಿಚಾರದ ಕುರಿತು ಮೊದಲಿಂದಲೂ ಮೇಲಿಂದ ಮೇಲೆ ಹೇಳಿಕೊಂಡು ಬಂದಿದ್ದೇನೆ. ಆಗ ಎಲ್ಲರೂ ನನ್ನನ್ನು ನಿರ್ಲಕ್ಷ್ಯಿಸಿ ನಗುತ್ತಾ ಕೂತಿದ್ದರು. ಇಂದು ಒಬ್ಬರಿಗೆ (ಪ್ರಜ್ವಲ್‌) ಆಗಿದೆ. ಮುಂದೆ ಸಿದ್ದರಾಮಯ್ಯ ಹಾಗೂ ಪರಮೇಶ್ವರ ಅವರಿಗೂ ಇದೇ ಸ್ಥಿತಿ ಬರಬಹುದು ಎಂದು ಎಚ್ಚರಿಸಿದರು.

ಪ್ರಜ್ವಲ್‌​ ಲೈಂಗಿಕ ದೌರ್ಜನ್ಯ ಪ್ರಕರಣ ಯಾರೂ ಹೆಮ್ಮೆ ಪಡುವ ವಿಷಯವಲ್ಲ. ಎಲ್ಲರೂ ತಲೆತಗ್ಗಿಸುವ ವಿಷಯ. ಬಹಳ ಕೆಟ್ಟ ರೀತಿಯಲ್ಲಿ ಆ ಪ್ರಕರಣ ಆಗಿದೆ. ರೇವಣ್ಣ ಕಾನೂನು ರೀತಿ ಹೋರಾಟ ಮಾಡಲಿ. ಕಾನೂನೊಂದೇ ಅದಕ್ಕಿರುವ ಉತ್ತರ ಎಂದು ತಿಳಿಸಿದರು.

ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋಗೆ ಸಂಬಂಧಿಸಿ ಡಿ.ಕೆ.ಶಿವಕುಮಾರ್ ಅವರ ಆಡಿಯೋ ರಿಲೀಸ್ ಕುರಿತು ಪ್ರತಿಕ್ರಿಯಿಸಿದ ಅವರು, ಆ ಆಡಿಯೋದಲ್ಲಿ ಅಲ್ಲಿ, ಇಲ್ಲಿ ಅಂತ ಸುತ್ತುಹಾಕಿರೋದು ಇದೆ. ಆದರೆ ನನ್ನ ಕೇಸ್​ನಲ್ಲಿ ನೇರ ಸಾಕ್ಷ್ಯಇದೆ. ಡಿ.ಕೆ.ಶಿವಕುಮಾರ್‌ ನೇರವಾಗಿ ಭಾಗಿಯಾಗಿರುವ ಕುರಿತು ನನ್ನ ಬಳಿ ಸಾಕ್ಷ್ಯಗಳಿವೆ. ನನ್ನ ಕೇಸ್​ನಲ್ಲಿ ಡಿ.ಕೆ.ಶಿವಕುಮಾರ್ ಮಾತಾಡಿದ್ದಕ್ಕೆ ಸಾಕ್ಷ್ಯ ಕೊಡುತ್ತೇನೆ. ನನ್ನ ಬಗ್ಗೆ ಷಡ್ಯಂತ್ರ ಮಾಡಿದ್ದೂ ಇದೆ. ಆದರೆ, ಆ ಸಾಕ್ಷ್ಯಗಳನ್ನೆಲ್ಲ ಮಾಧ್ಯಮಕ್ಕೆ ಕೊಡಲ್ಲ. ಸಿಬಿಐಗೆ ಪ್ರಕರಣದ ತನಿಖೆ ಕೊಟ್ಟರೆ ಸಾಕ್ಷ್ಯ ಕೊಡುತ್ತೇನೆ ಎಂದು ವಿವರಿಸಿದರು.

ಜೂ.4ರ ನಂತರ ಇತಿಶ್ರೀ ಹಾಡೋಣ: ನನ್ನ ಕೇಸ್​ನಲ್ಲೂ ಎಸ್‌ಐಟಿ ಮೇಲೆ ನನಗೆ ವಿಶ್ವಾಸ ಇಲ್ಲ. ಇದೀಗ ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲೂ ನನಗೆ ಎಸ್ಐಟಿ ಮೇಲೆ ಯಾವುದೇ ನಂಬಿಕೆ ಇಲ್ಲ‌. ಸಿಬಿಐಗೆ ಕೇಸ್ ಕೊಟ್ಟರೂ ಹಾಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಮೇಲುಸ್ತುವಾರಿ ಮಾಡಬೇಕು. ಮಹಾನ್ ನಾಯಕ ಹಣದಲ್ಲಿ ಬಹಳಷ್ಟು ಪ್ರಭಾವಿಗಳು ಇದ್ದಾರೆ. ಹಣ ಕೊಟ್ಟು ಎಲ್ಲವನ್ನೂ ಖರೀದಿಸುತ್ತೇನೆ ಅನ್ನುವ ಸೊಕ್ಕು ಆ ಮಹಾನ್‌ ನಾಯಕನಿಗಿದೆ. ದೇಶದಲ್ಲಿ ಕಾನೂನು ಉಳಿಯಬೇಕು ಅಂದರೆ ಈ ಕೇಸ್​ನಲ್ಲಿ ಆತ ಫಿಕ್ಸ್ ಆಗಬೇಕು. ನನ್ನ ಕೇಸ್​ನಲ್ಲಿ ಬರೀ ಡಿ.ಕೆ.ಶಿವಕುಮಾರ್ ಭಾಗಿಯಾಗಿಲ್ಲ. ನಮ್ಮವರೂ ಇದ್ದಾರೆ. ಜೂ.4ರ ನಂತರ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ. ಸತತ 4 ವರ್ಷಗಳಿಂದ ಪ್ರಶ್ನೆಯಾಗಿ ಕಾಡುತ್ತಿರುವ ವಿಚಾರಕ್ಕೆ ಜೂ.4ರ ನಂತರ ಇತಿಶ್ರೀ ಹಾಡೋಣ ಎಂದರು.

ರಾಜಕಾರಣದಲ್ಲಿ ನನ್ನ ವಿರೋಧಿಗಳು ಪ್ರಬಲರು ಎಂದು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ. ನಮ್ಮ ವಿರೋಧಿಗಳು ಪ್ರಬಲರು ಎಂದು ಅಂದುಕೊಂಡೇ ನಾವು ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿಯಿಂದ ಹಣ ಹಂಚಿಕೆ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಹಣ ಕೊಟ್ಟು ಮತ ತೆಗೆದುಕೊಳ್ಳುವುದಾದರೆ ಎಲ್ಲರೂ ಎಂಪಿ, ಎಂಎಲ್‌ಎ ಆಗುತ್ತಾರೆ. ಹಣದಿಂದ ಗೆಲ್ಲಲು ಸಾಧ್ಯವಿಲ್ಲ. ಅಭ್ಯರ್ಥಿ ವೀಕ್ ಆದರೆ ಹಣ ಹಂಚುತ್ತಾರೆಯೇ ಹೊರತು ಆತ್ಮವಿಶ್ವಾಸ ಇರುವ ಅಭ್ಯರ್ಥಿ ಹಣ ಹಂಚುವುದಿಲ್ಲ. ಪಕ್ಷ, ಮತದಾರರ ಮೇಲೆ ವಿಶ್ವಾಸ ಇದ್ದರೆ ಹಣ ಹಂಚುವುದಿಲ್ಲ. ಕಾಂಗ್ರೆಸ್‌ನವರಂತೆ ಬಿಜೆಪಿಯವರು ಈ ಮಟ್ಟಕ್ಕೆ ಇಳಿಯಲ್ಲ ಎಂದು ಪರೋಕ್ಷವಾಗಿ ಸಚಿವೆ ಹೆಬ್ಬಾಳಕರ ವಿರುದ್ಧ ವಾಗ್ದಾಳಿ ನಡೆಸಿದರು.