ರೈತರು, ದಲಿತರನ್ನು ಕಡೆಗಣಿಸಿ ಸಿದ್ದರಾಮಯ್ಯರಿಂದ ಅಲ್ಪಸಂಖ್ಯಾತರ ಓಲೈಕೆ ಬಜೆಟ್ ಮಂಡನೆ

| Published : Mar 09 2025, 01:48 AM IST

ರೈತರು, ದಲಿತರನ್ನು ಕಡೆಗಣಿಸಿ ಸಿದ್ದರಾಮಯ್ಯರಿಂದ ಅಲ್ಪಸಂಖ್ಯಾತರ ಓಲೈಕೆ ಬಜೆಟ್ ಮಂಡನೆ
Share this Article
  • FB
  • TW
  • Linkdin
  • Email

ಸಾರಾಂಶ

ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ ರೈತ ಹಾಗೂ ದಲಿತ ವಿರೋಧಿಯಾಗಿದೆ. ಕಾಂಗ್ರೆಸ್ ದಲಿತ ವಿರೋಧಿ ನೀತಿ ಅನುರಿಸಿತ್ತಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ವರ್ಗದವರ ಬೆಂಬಲ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಬಜೆಟ್ ಮೂಲಕ ದಲಿತ ವಿರೋಧಿ ಎನ್ನುವುದನ್ನು ತೋರಿಸಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರೈತರು, ದಲಿತರ ಕಡೆಗಣಿಸಿ, ಅಲ್ಪಸಂಖ್ಯಾತರ ಓಲೈಕೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸಿದ್ದಾರೆ ಎಂದು ಆರೋಪಿಸಿ ಹಣೆಗೆ ನಾಮ ಬಳಿದುಕೊಂಡು ಶಂಖ- ಜಾಗಟೆ ಬಾರಿಸಿ ಬಿಜೆಪಿ ಕಾರ್‍ಯಕರ್ತರು ನಗರದಲ್ಲಿ ವಿನೂತನ ಪ್ರತಿಭಟನೆ ನಡೆಸಿದರು.

ನಗರದ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸಿ.ಎಂ.ಸಿದ್ದರಾಮಯ್ಯ ಮತ್ತು ಬಜೆಟ್ ವ್ಯಂಗ್ಯ ಚಿತ್ರಪಟಗಳನ್ನು ಪ್ರದರ್ಶಿಸಿ, ಹಲಾಲ್ ಬಜೆಟ್, ಮೂಗಿಗೆ ತುಪ್ಪು ಸವರಿದ ಬಜೆಟ್, ದಲಿತ ವಿರೋಧಿ ಬಜೆಟ್ ಎಂದು ಘೋಷಣೆ ಕೂಗಿದರು.

ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ಮಾತನಾಡಿ, ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ ರೈತ ಹಾಗೂ ದಲಿತ ವಿರೋಧಿಯಾಗಿದೆ. ಕಾಂಗ್ರೆಸ್ ದಲಿತ ವಿರೋಧಿ ನೀತಿ ಅನುರಿಸಿತ್ತಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ವರ್ಗದವರ ಬೆಂಬಲ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಬಜೆಟ್ ಮೂಲಕ ದಲಿತ ವಿರೋಧಿ ಎನ್ನುವುದನ್ನು ತೋರಿಸಿದೆ ಎಂದು ದೂರಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಎಚ್.ಸಿ.ಮಹದೇವಪ್ಪ, ಪ್ರಿಯಾಂಕ್ ಖರ್ಗೆ ಅವರು ಬಜೆಟ್‌ನಲ್ಲಿ ದಲಿತ ಸಮುದಾಯಕ್ಕೆ ಅನುದಾನ ಮೀಸಲಿರಿಸುವಂತೆ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕೃಷಿ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸುವ ಮೂಲಕ ರೈತರನ್ನು ವಂಚಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ. ಕೃಷಿ, ತೋಟಗಾರಿಕೆ, ಪಶುಪಾಲನೆ ಇಲಾಖೆ ಸೇರಿಯೂ 15 ಸಾವಿರ ಕೋಟಿ ರು. ಬಜೆಟ್ ನೀಡಿಲ್ಲ. ಯುವಕರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಇವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆದ್ಯತೆ ನೀಡಿಲ್ಲ ಎಂದು ಕಿಡಿಕಾರಿದರು.

ಶಾದಿ ಭಾಗ್ಯಕ್ಕೆ ತಲಾ 50 ಸಾವಿರ ರು. ಆರ್ಥಿಕ ನೆರವು ನೀಡುತ್ತಿದ್ದಾರೆ. ಯುವ ರೈತರನ್ನು ಮದುವೆಯಾದರೆ ಮೂರು ಲಕ್ಷ ರು. ಅಥವಾ ಉಚಿತವಾಗಿ ಒಂದು ಟ್ರ್ಯಾಕ್ಟರ್, ಟಿಲ್ಲರ್ ಕೊಡಿ. ಇಲ್ಲದಿದ್ದರೆ ಮುಂದೆ ಕೃಷಿ ಮಾಡುವವರೇ ಇಲ್ಲದಂತಾಗುತ್ತದೆ ಎಂದು ಎಚ್ಚರಿಸಿದರು.

ಬಜೆಟ್ ನಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡರಿಗೆ ಗೌರವ ಧನ 6 ಸಾವಿರ ರು. ಹೆಚ್ಚಳ ಮಾಡಿರುವ ಸಿಎಂ ಅಲ್ಪಸಂಖ್ಯಾತರ ಕಾಲೋನಿಗಳು ಹಾಗೂ ಬಡಾವಣೆ ಅಭಿವೃದ್ಧಿಗೆ 1 ಸಾವಿರ ಕೋಟಿ ನೀಡಿದ್ದಾರೆ. ಹೆಚ್ಚುವರಿ ಉರ್ದು ಶಾಲೆಗಳ ನಿರ್ಮಾಣ ಹಾಗೂ ಉತ್ತೇಜನಕ್ಕೆ 100 ಕೋಟಿ ಕೊಟ್ಟಿದ್ದಾರೆ. ರಾಜ್ಯದ ಇತಿಹಾಸದಲ್ಲೇ ಅತಿ ಹೆಚ್ಚು ಸಾಲ ಮಾಡಿದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಮಾತನಾಡಿ, ಮೇಕೆದಾಟು ಯೋಜನೆಗೆ ಸರ್ಕಾರ ನಯಾ ಪೈಸೆ ಇಟ್ಟಿಲ್ಲ. ನಂದಿನಿ ಹಾಲಿನ ಪ್ರೋತ್ಸಾಹ ಧನವನ್ನು 7 ರು. ಗಳಿಗೆ ಏರಿಕೆ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದರು. ಆದರೆ, ಈವರೆಗೂ ಅದು ಸಾಧ್ಯವಾಗಿಲ್ಲ ಎಂದು ದೂರಿದರು.

ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ಮಾತನಾಡಿ, ನಕಲಿ ವೈದ್ಯರ ಹಾವಳಿ ತಡೆಗೆ ಬಜೆಟ್‌ನಲ್ಲಿ ಯಾವುದೇ ಕ್ರಮ ಸೂಚಿಸಿಲ್ಲ. ಜಿಲ್ಲೆಯ ಕೆ.ಎಸ್. ನರಸಿಂಹಸ್ವಾಮಿ ಮತ್ತು ಮೇಲುಕೋಟೆ ಪು.ತಿ.ನ ಟ್ರಸ್ಟ್‌ಗಳಿಗೆ ಅನುದಾನ ಕೋರಿರುವ ಮನವಿಯನ್ನೂ ಪರಿಗಣಿಸಿಲ್ಲ ಎಂದು ಟೀಕಿಸಿದರು.

ತವರು ಜಿಲ್ಲೆ ಮೈಸೂರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿರುವ ಮುಖಮಂತ್ರಿಗಳು, ಮಂಡ್ಯ ಜಿಲ್ಲಾ ಅಸ್ಪತ್ರೆಗೆ ಹೆಚ್ಚಿದ ರೋಗಿಗಳ ಒತ್ತಡ ನಿವಾರಿಸಲು ಹೆಚ್ಚುವರಿಯಾಗಿ 32 ಕೋಟಿ ರೂ.ಗಳ ಯೋಜನೆಯ ಪ್ರಸ್ತಾಪನೆಯನ್ನು ಸಲ್ಲಿಸಲಾಗಿತ್ತಾದರೂ ಅದರ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪವನ್ನೂ ಮಾಡಿಲ್ಲ ಎಂದು ಕಿಡಿಕಾರಿದರು.

ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಗಳಾ ಮಾತನಾಡಿ, ಅಲ್ಪಸಂಖ್ಯಾತ ಮಹಿಳೆಯರ ಸರಳ ವಿವಾಹಕ್ಕೆ 50 ಸಾವಿರ ರೂ.ಗಳವರೆಗೆ ಅನುದಾನ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇತರೆ ವರ್ಗದ ಜನರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್‍ಯದರ್ಶಿ ವಿವೇಕ್, ಮುಖಂಡರಾದ ಯೋಗೇಶ್, ಆನಂದ್, ಶಿವಣ್ಣ, ಪ್ರಸನ್ನಕುಮಾರ್, ಚಂದ್ರು, ಶಿವಕುಮಾರ್, ಶಿವಲಿಂಗಯ್ಯ, ಶಿವಕುಮಾರ್ ಆರಾಧ್ಯ, ಜ್ಯೋತಿ, ಶ್ವೇತಾ, ಲಕ್ಷ್ಮಿ, ವಸಂತ್, ಮಳವಳ್ಳಿ ಕೃಷ್ಣ, ಧನಂಜಯ, ನಾಗಾನಂದ, ಎಂ.ಸಿ. ಸಿದ್ದು, ಅಶೋಕ್ ಕುಮಾರ್, ನವೀನ್ , ಮಂಗಳ, ವೀಣಾ ಸೇರಿದಂತೆ ಹಲವರು ಭಾಗವಹಿಸಿದ್ದರು.