ಸಾರಾಂಶ
ಅಹಿಂದ ಹೆಸರಿನಲ್ಲಿ ಎಸ್ಸಿ ಮತ್ತು ಎಸ್ಪಿಗಳ ಶೇ ೯೦ ರಷ್ಟು ಮತ ಪಡೆದು ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರ್ಕಾರ, ದಲಿತ ವಿರೋಧಿ ನೀತಿ ಅನುಸರಿಸುತ್ತ ಎಸ್ಪಿ, ಎಸ್ಪಿ ನೌಕರರಿಗೆ ನೇಮಕಾತಿ ಮತ್ತು ಬಡ್ತಿಯಲ್ಲಿ ದೊಡ್ಡಮಟ್ಟದ ಅನ್ಯಾಯ ಮಾಡಿದೆ ಎಂದು ಬಿಎಸ್‌ಪಿ ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ ಆರೋಪಿಸಿದರು.
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಅಹಿಂದ ಹೆಸರಿನಲ್ಲಿ ಎಸ್ಸಿ ಮತ್ತು ಎಸ್ಪಿಗಳ ಶೇ ೯೦ ರಷ್ಟು ಮತ ಪಡೆದು ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರ್ಕಾರ, ದಲಿತ ವಿರೋಧಿ ನೀತಿ ಅನುಸರಿಸುತ್ತ ಎಸ್ಪಿ, ಎಸ್ಪಿ ನೌಕರರಿಗೆ ನೇಮಕಾತಿ ಮತ್ತು ಬಡ್ತಿಯಲ್ಲಿ ದೊಡ್ಡಮಟ್ಟದ ಅನ್ಯಾಯ ಮಾಡಿದೆ ಎಂದು ಬಿಎಸ್‌ಪಿ ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ ಆರೋಪಿಸಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಎಸ್ಸಿ ಎಸ್ಟಿ ಸದನ ಸಮಿತಿಗೆ ಯಾವುದೇ ಮಹತ್ವ ಮತ್ತು ಬೆಲೆ ಇಲ್ಲದಂತೆ ಮಾಡಿರುವ ಸಿಎಂ ಸಿದ್ದರಾಮಯ್ಯ, ರಾಜ್ಯದ ಪದವಿಪೂರ್ವ ಶಿಕ್ಷಣ, ಗೃಹ, ಅರಣ್ಯ, ತೋಟಗಾರಿಕೆ, ಕೃಷಿ, ನಗರಾಭಿವೃದ್ಧಿ, ಸಾರಿಗೆ, ಡಿಪಿಎಆರ್, ಇಂಧನ ಸೇರಿದಂತೆ ಹಲವಾರು ಇಲಾಖೆಗಳಲ್ಲಿ ಮುಂಬಡ್ತಿಗೆ ಅರ್ಹರಾಗಿರುವ ಎಸ್ಸಿ, ಎಸ್ಪಿ ನೌಕರರಿಗೆ ಸಕಾಲದಲ್ಲಿ ಬಡ್ತಿ ನೀಡದೆ ವಂಚನೆ ಮಾಡಲಾಗುತ್ತಿದೆ. ಇದರಿಂದಾಗಿ ಸಾವಿರಾರು ಎಸ್ಸಿ, ಎಸ್ಪಿ ನೌಕರರು ಬಡ್ತಿಯಿಂದ ವಂಚಿತರಾಗಿ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ ಎಂದರು. ವೋಟು ಮತ್ತು ಅಧಿಕಾರಕ್ಕಾಗಿ ನಾವು ದಲಿತ ಪರ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರ, ರಾಜ್ಯದ ೩೧ ಜಿಲ್ಲೆಗಳಲ್ಲಿ ಕೇವಲ ಒಂದು ಜಿಲ್ಲೆಗೆ ಮಾತ್ರ ಎಸ್ಸಿ, ಎಸ್ಪಿ ಸಮಾಜಕ್ಕೆ ಸೇರಿದ ಜಿಲ್ಲಾಧಿಕಾರಿಯನ್ನು ನೇಮಕ ಮಾಡಿ ಎಸ್ಸಿ, ಎಸ್ಟಿ ಜನಾಂಗದ ಐಎಎಸ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಯಂತಹ ಮಹತ್ವದ ಹುದ್ದೆಗಳನ್ನು ನೀಡದೆ ವಂಚನೆ ಮಾಡಿದ್ದಾರೆ ಎಂದರು.ಪದವಿ ಪೂರ್ವ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು ೮೦ ಮಂದಿ ಎಸ್ಸಿ, ಎಸ್ಟಿ ಉಪನ್ಯಾಸಕರಿಗೆ ೨೦೧೬ರಲ್ಲಿಯೇ ಪ್ರಾಂಶುಪಾಲರಾಗಿ ಬಡ್ತಿ ನೀಡಬೇಕಾಗಿತ್ತು, ಆದರೆ ಇವರಿಗೆ ಬಡ್ತಿ ತಪ್ಪಿಸಲು ಶಾಲಾ ಶಿಕ್ಷಣ ಇಲಾಖೆ ಮುಂದಾಗಿತ್ತು. ಇದರ ವಿರುದ್ಧ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ನೇತೃತ್ವದ ಎಸ್ಸಿ, ಎಸ್ಪಿ ಸದನ ಸಮಿತಿಗೆ ದೂರು ನೀಡಲಾಗಿತ್ತು. ಮಧ್ಯಪ್ರವೇಶ ಮಾಡಿದ್ದ ಸದನ ಸಮಿತಿ ಎಸ್ಸಿ, ಎಸ್ಪಿ ಉಪನ್ಯಾಸಕರಿಗೆ ಬಡ್ತಿ ನೀಡುವವರೆಗೆ ಯಾವುದೇ ಬಡ್ತಿ ನಿರ್ಧಾರ ಕೈಗೊಳ್ಳಬಾರದು ಎಂದು ತಡೆ ನೀಡಿತ್ತು.ಸಾಂವಿಧಾನಿಕ ಸಂಸ್ಥೆಯಾಗಿರುವ ಶಾಸಕ ನರೇಂದ್ರಸ್ವಾಮಿ ನೇತೃತ್ವದ ಸದನ ಸಮಿತಿಯ ಆದೇಶವನ್ನು ಕಡೆಗಣಿಸಿ ೮೦ ಉಪನ್ಯಾಸಕರಿಗೆ ಅನ್ಯಾಯ ಮಾಡಲೆಂದೇ ಇತರರಿಗೆ ಬಡ್ತಿ ನೀಡಲಾಗಿದೆ. ಆ ಮೂಲಕ ಎಸ್ಸಿ, ಎಸ್ಟಿ ಸದನ ಸಮಿತಿಗೆ ಯಾವುದೇ ಮಹತ್ವ ಮತ್ತು ಬೆಲೆ ಇಲ್ಲದಂತೆ ಈ ಸರ್ಕಾರ ಮಾಡಿದೆ ಎಂದರು ಇನ್ನು ನಗರಾಭಿವೃದ್ಧಿಯ ಅಡಿಯಲ್ಲಿ ಬರುವ ನಗರ ನೀರು ಸರಬರಾಜು ಮಂಡಳಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಇಂಜಿನಿಯರ್ ಒಬ್ಬರಿಗೆ ಬಡ್ತಿ ನೀಡಿದರೆ, ಅತಿ ಕಿರಿಯ ವಯಸ್ಸಿಗೆ ಮುಖ್ಯ ಇಂಜಿನಿಯರ್ ಆಗುತ್ತಾರೆ ಎಂದು ಕಳೆದ ಎಂಟು ವರ್ಷಗಳಿಂದ ಬಡ್ತಿಯಿಂದ ವಂಚಿಸಿಕೊಂಡು ಬರಲಾಗುತ್ತಿದೆ. ಸಚಿವ ಡಾ. ಎಚ್. ಸಿ. ಮಹದೇವಪ್ಪ ನೇತೃತ್ವದ ಸಮಾಜ ಕಲ್ಯಾಣ ಇಲಾಖೆಯ ಸ್ಪಷ್ಟ ಆದೇಶವಿದ್ದರೂ ನಗರಾಭಿವೃದ್ಧಿ ಕಾರ್ಯದರ್ಶಿ ಬಡ್ತಿ ನಿಯಮಗಳನ್ನು ಗಾಳಿಗೆ ತೂರಿ ವಂಚಿಸುತ್ತಿದ್ದಾರೆ ಎಂದರು. ರಾಜ್ಯ ಕಾಂಗ್ರೆಸ್ ಸರ್ಕಾರ ಎಸ್ಸಿ, ಎಸ್ಪಿ ನೌಕರರಿಗೆ ನೇಮಕಾತಿ ಮತ್ತು ಬಡ್ತಿಯಲ್ಲಿ ಇಷ್ಟೆಲ್ಲಾ ಅನ್ಯಾಯ ಎಸಗುತ್ತಿದ್ದರೂ ಸಚಿವರಾದ ಡಾ. ಜಿ. ಪರಮೇಶ್ವರ್, ಡಾ. ಎಚ್. ಸಿ. ಮಹದೇವಪ್ಪ, ಕೆ.ಎಚ್. ಮುನಿಯಪ್ಪ, ಸತೀಶ್ ಜಾರಕಿಹೊಳಿ, ಕೆ. ಎಸ್. ರಾಜಣ್ಣ, , ಶಿವರಾಜ್ ತಂಗಡಗಿ, ಪ್ರಿಯಾಂಕ ಖರ್ಗೆ, ಆರ್. ಬಿ. ತಿಮ್ಮಾಪುರ್ ರಂತಹ ಹಿರಿಯ ಎಸ್ಸಿ, ಎಸ್ಟಿ ಸಚಿವರು ಹಾಗೂ ಮೀಸಲು ಕ್ಷೇತ್ರಗಳಿಂದ ಗೆದ್ದಿರುವ ಶಾಸಕರುಗಳು ಬಾಯಿ ಮುಚ್ಚಿಕೊಂಡು ಕುಳಿತಿರುವುದು ನಾಚಿಕೆಗೇಡು ಎಂದರು, ಎರಡೂವರೆ ವರ್ಷಗಳಿಂದ ಎಸ್ಸಿ, ಎಸ್ಪಿ ಆಯೋಗಕ್ಕೆ ಅಧ್ಯಕ್ಷರನ್ನೇ ನೇಮಕ ಮಾಡದೆ ಇರುವ ಈ ಸರ್ಕಾರಕ್ಕೆ ದಲಿತರ ಪರ ಎಂದು ಹೇಳಿಕೊಳ್ಳಲು ಯಾವ ನೈತಿಕತೆ ಇದೆ?. ಎಸ್ಸಿ ಎಸ್ಟಿ, ಮತ್ತು ಟಿಎಸ್ಪಿ ಹಣವನ್ನು ಗ್ಯಾರಂಟಿ ಮತ್ತು ಇತರೆ ಯೋಜನೆಗಳಿಗೆ ೨೫ ಸಾವಿರ ಕೋಟಿ ರೂಪಾಯಿಗಳನ್ನು ವರ್ಗಾವಣೆ ಮಾಡಿಕೊಂಡು ಇಡೀ ಸಮಾಜಕ್ಕೆ ಅನ್ಯಾಯ ಮಾಡಿದೆ ಎಂದರು. ಸರ್ಕಾರ ಈ ಅನ್ಯಾಯಗಳನ್ನು ಸರಿಪಡಿಸದಿದ್ದರೆ, ಈ ದಲಿತ ವಿರೋಧಿ ನೀತಿಗಳನ್ನು ಖಂಡಿಸಿ ಬಹುಜನ ಸಮಾಜ ಪಾರ್ಟಿ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಎನ್. ನಾಗಯ, ರಾಜ್ಯ ಸಮಿತಿ ಸದಸ್ಯ ಬ್ಯಾಡಮೂಡ್ಲು ಬಸವಣ್ಣ, ಜಿಲ್ಲಾ ಉಸ್ತುವಾರಿ ವಕೀಲ ಪುಟ್ಟಸ್ವಾಮಿ, ಜಿಲ್ಲಾಧ್ಯಕ್ಷ ಬ.ಮ. ಕೃಷ್ಣಮೂರ್ತಿ, ಪ್ರದಾನಕಾರ್ಯದರ್ಶಿ, ಪ್ರಕಾಶ್, ಎಸ್.ಪಿ. ಮಹೇಶ್ ಇದ್ದರು.