ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರನ್ನು ಕೊಂದಿರಬಹುದು. ಆದರೆ ಅವರ ವಿಚಾರಧಾರೆ, ಸತ್ಯ, ಅಹಿಂಸೆಯನ್ನು ಕೊಲ್ಲಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.ಗಾಂಧಿ ಭವನದಲ್ಲಿ ಗಾಂಧೀ ಜಯಂತಿ ಅಂಗವಾಗಿ ಆಯೋಜಿಸಿದ್ದ ವಿಶ್ವ ಅಹಿಂಸಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗಾಂಧೀಜಿಯವರನ್ನು ಕೊಂದಿರಬಹುದು. ಆದರೆ ಅವರ ವಿಚಾರಧಾರೆ, ಸತ್ಯ, ಅಹಿಂಸೆಯನ್ನು ಕೊಲ್ಲಲು ಸಾಧ್ಯವಿಲ್ಲ. ಗಾಂಧೀಜಿಯವರು ದೇಶಕ್ಕೆ ಅಹಿಂಸಾ ಮಾರ್ಗದಲ್ಲಿ ಸ್ವಾತಂತ್ರ್ಯ ತಂದುಕೊಟ್ಟರು. ಇಂದು ನಾವು ಸ್ವಾತಂತ್ರ್ಯದ ಗಾಳಿ ಸೇವಿಸುತ್ತಿದ್ದೇವೆ ಎಂದರೆ ಇದಕ್ಕೆ ಗಾಂಧೀಜಿ ಸೇರಿದಂತೆ ಹಲವರ ಶ್ರಮ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.
ಕೇವಲ ಭಾಷಣದಿಂದ ಮಹಾತ್ಮಗಾಂಧಿ ಮತ್ತು ಅಂಬೇಡ್ಕರ್ ಅವರ ಆಶಯಗಳು ಈಡೇರಲ್ಲ. ಇವರ ಬದುಕಿನ ಮೌಲ್ಯ ಮತ್ತು ಸಂದೇಶಗಳನ್ನು ಅಳವಡಿಸಿಕೊಳ್ಳಬೇಕು. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಅತ್ಯಂತ ಪ್ರಾಮಾಣಿಕ ನಾಯಕರಾಗಿದ್ದರು. ನಾನು ಪ್ರಾಮಾಣಿಕತೆ ಬಗ್ಗೆ ಉದ್ದುದ್ದ ಭಾಷಣ ಮಾಡಲು ಹೋಗುವುದಿಲ್ಲ. ಇವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವುದೇ ನಾವು ಈ ಮಹಾತ್ಮರಿಗೆ ಸಲ್ಲಿಸುವ ಗೌರವಾಗಿದೆ ಎಂದು ತಿಳಿಸಿದರು.ಗಾಂಧೀಜಿಯವರು ಭಾರತಕ್ಕೆ ಮಾತ್ರ ನಾಯಕರಲ್ಲ, ಪ್ರಪಂಚಕ್ಕೇ ನಾಯಕರು ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹೇಳಿಕೆ ನೀಡಿದ್ದಾರೆ. ಅಸ್ಪೃಶ್ಯತೆ ನಿವಾರಣೆಯಾಗಿ ಸಮ ಸಮಾಜ ನಿರ್ಮಾಣವಾಗಬೇಕು. ನಮ್ಮ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಗಾಂಧಿ ಭವನ ನಿರ್ಮಿಸಲು ₹90 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಸೂಕ್ತ ಜಾಗ ಸಿಗದಿರುವ ಜಿಲ್ಲೆಗಳಲ್ಲಿ ಭವನ ನಿರ್ಮಾಣವಾಗಿಲ್ಲ. ನಿರ್ಮಾಣ ಕಾರ್ಯಕ್ಕೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.
‘ಎಲ್ಲರ ಗಾಂಧೀ’ ಕೃತಿಯ ಲೇಖಕ ಡಾ। ನಟರಾಜ್ ಹುಳಿಯಾರ್ ಅವರಿಗೆ ಇದೇ ಸಂದರ್ಭದಲ್ಲಿ ಜಯಶ್ರೀ ದತ್ತಿ ಪುರಸ್ಕಾರ ಪ್ರದಾನ ಮಾಡಲಾಯಿತು. ಗಾಂಧೀ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕೃಷ್ಣ, ಗಾಂಧಿ ಭವನದ ಕಾರ್ಯದರ್ಶಿ ವಿಶುಕುಮಾರ್ ಉಪಸ್ಥಿತರಿದ್ದರು.50 ಕಡೆ ಸ್ಮಾರಕ ನಿರ್ಮಾಣ: ಮಹಾತ್ಮ ಗಾಂಧೀಜಿಯವರು ರಾಜ್ಯದ 50 ಸ್ಥಳಗಳಲ್ಲಿ ಸಂಚರಿಸಿದ್ದು, ಈ ಸ್ಥಳಗಳಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
‘ಗಾಂಧೀಜಿಯವರನ್ನು ಪಡೆದಿರುವ ಭಾರತೀಯರೇ ಪುಣ್ಯವಂತರು’ ಎಂದು ದಕ್ಷಿಣ ಆಫ್ರಿಕಾದ ಚಿಂತಕರು ಹೇಳಿದ್ದಾರೆ. ಗಾಂಧೀಜಿಯವರು ರಾಜ್ಯದಲ್ಲಿ ಎಲ್ಲೆಲ್ಲಿ ಸಭೆ ನಡೆಸಿದ್ದರು, ವಾಸ್ತವ್ಯ ಹೂಡಿದ್ದರು ಅಲ್ಲಿ ಸ್ಮಾರಕ ನಿರ್ಮಾಣ ಮಾಡಿ ಯುವ ಪೀಳಿಗೆ ಗಾಂಧೀಜಿಯವರ ತತ್ವ ಸಿದ್ಧಾಂತವನ್ನು ತಲುಪಿಸುವ ಕಾರ್ಯ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.ಅಂತರ್ಜಾತಿ ವಿವಾಹಕ್ಕೆ ವೇದಿಕೆ: ಗಾಂಧಿ ಭವನದಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮವು ಅಂತರ್ಜಾತಿ ವಿವಾಹಕ್ಕೆ ವೇದಿಕೆಯಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಜೋಡಿಯೊಂದು ಸರಳವಾಗಿ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿತು.
ಗಾಂಧಿ ಭವನದಲ್ಲಿ ಸಂಯೋಜನಾಧಿಕಾರಿ ಆಗಿರುವ ಲಿಂಗಾಯತ ಸಮುದಾಯದ ಟಿ.ಎಸ್.ತನುಜ್ ಅವರು ಕುರುಬ ಸಮುದಾಯಕ್ಕೆ ಸೇರಿದ ಎ.ಎಂ.ಯಶೋಧಾ ಅವರನ್ನು ಸರಳವಾಗಿ ವಿವಾಹವಾದರು. ನೂತನ ಜೋಡಿಗೆ ಸಿದ್ದರಾಮಯ್ಯ ಅವರು ಶುಭ ಕೋರಿದರು.ಗಾಂಧಿ ಭವನದಲ್ಲಿ ಗಾಂಧಿ ಜಯಂತಿ ಅಂಗವಾಗಿ ಆಯೋಜಿಸಿದ್ದ ವಿಶ್ವ ಅಹಿಂಸಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೇಖಕ ನಟರಾಜ್ ಹುಳಿಯಾರ್ ಅವರಿಗೆ ಜಯಶ್ರೀ ದತ್ತಿ ಪುರಸ್ಕೃತ ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಿದರು. ಸಚಿವ ಎಚ್.ಕೆ.ಪಾಟೀಲ್, ಗಾಂಧೀ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕೃಷ್ಣ, ಗಾಂಧಿ ಭವನದ ಕಾರ್ಯದರ್ಶಿ ವಿಶುಕುಮಾರ್ ಹಾಜರಿದ್ದರು.
=====ಗಾಂಧಿ ಭವನದ ಸಂಯೋಜನಾಧಿಕಾರಿ ತನುಜ್ ಟಿ.ಎಸ್. ಮತ್ತು ಎ.ಎಂ.ಯಶೋಧಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಅಂತರ್ಜಾತಿ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.