ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿ ನಿರ್ಭಯ ಕಾರ್ಯನಿರ್ವಹಣೆ

| Published : Jul 15 2024, 01:47 AM IST

ಸಾರಾಂಶ

ಮಾಜಿ ಸಚಿವ ಎಚ್.ಆಂಜನೇಯ ಅವರನ್ನು ರಾಜ್ಯ ಸರ್ಕಾರದ ಪರವಾಗಿ ಸಿಎಂ ಸಿದ್ದರಾಮಯ್ಯ ಸನ್ಮಾನಿಸಿದರು. ಲೋಕಸಭಾ ಮಾಜಿ ಸ್ಪೀಕರ್ ಮೀರಾಕುಮಾರಿ, ಸಚಿವರಾದ ಎಚ್.ಸಿ.ಮಹಾದೇವಪ್ಪ, ಕೆ.ಎಚ್.ಮುನಿಯಪ್ಪ ಇತರರಿದ್ದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಅಹಿಂದ ವರ್ಗದ ಕಣ್ಮಣಿ ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿ ನಿರ್ಭಯವಾಗಿ ಕಾರ್ಯನಿರ್ವಹಿಸಬೇಕು. ಈ ಕಾರ್ಯಕ್ಕೆ ಇಡೀ ದಲಿತ ಸಮುದಾಯ ಅವರೊಟ್ಟಿಗೆ ನಿಲ್ಲಲಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ಬೆಂಗಳೂರಿನಲ್ಲಿ ನಡೆದ ಡಾ.ಬಾಬು ಜಗಜೀವನರಾಮ್ ಭವನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಉತ್ತಮವಾಗಿ ಆಡಳಿತ ನಡೆಸುತ್ತಿರುವುದನ್ನು ಕೆಲ ಜನರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಆದ್ದರಿಂದಲೇ ಅನಗತ್ಯವಾಗಿ ಟೀಕೆ, ಆರೋಪ ಮಾಡಿ ಎದೆಗುಂದಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ನೊಂದವರು, ಬಡವರು, ಶೋಷಿತರು, ಅಹಿಂದ ವರ್ಗದ ಪ್ರಗತಿಗೆ ಯೋಜನೆಗಳನ್ನು ರೂಪಿಸಿರುವ ಕಾರಣಕ್ಕೆ ಹಾಗೂ ಎಲ್ಲ ವರ್ಗದ ಜನರು ಮೆಚ್ಚಿಕೊಳ್ಳುವ ರೀತಿ ಮಾದರಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯನವರ ಕುರಿತು ಕೆಲವರಲ್ಲಿ ಸಹಜವಾಗಿ ಅಸೂಯೆ ಉಂಟಾಗಿದೆ. ಆದ್ದರಿಂದ ಸುಳ್ಳು ಆರೋಪ ಮಾಡುವಲ್ಲಿ ಕೆಲ ದುಷ್ಟ ಶಕ್ತಿಗಳು ನಿರತವಾಗಿವೆ ಎಂದು ಆರೋಪಿಸಿದರು.

ಐದು ವರ್ಷಗಳ ಕಾಲ ನನ್ನನ್ನು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗದ ಖಾತೆ ಸಚಿವರಾಗಿ ಸ್ವತಂತ್ರವಾಗಿ ಕಾರ್ಯನಿರ್ಹಿಸಲು ಅವಕಾಶ ಕೊಟ್ಟಿದ್ದ ಸಿದ್ದರಾಮಯ್ಯ ಅವರ 2013-18 ಆಡಳಿತ ದಲಿತರ ಪಾಲಿಗೆ ಸುವರ್ಣ ಯುಗವಾಗಿತ್ತು. ಸಚಿವನಾಗಿ ಹಾಸ್ಟೆಲ್ ನಿರ್ಮಾಣ ಸೇರಿ ನೂರಾರು ಜನಪರ ಕೆಲಸ ಮಾಡಿದ್ದೇನೆ. ಮುಖ್ಯವಾಗಿ ಡಾ.ಬಾಬು ಜಗಜೀವನರಾಮ್ ಭವನ ಇಡೀ ದೇಶವೇ ಇತ್ತ ತಿರುಗಿ ನೋಡುವ ರೀತಿ ನಿರ್ಮಾಣ ಮಾಡಲು ಶ್ರಮಿಸಿದ್ದೇನೆ. ಇದಕ್ಕೆಲ್ಲ ಬೆಂಬಲವಾಗಿ ನಿಂತಹವರು ಸಿದ್ದರಾಮಯ್ಯ ಎಂದು ಹೇಳಿದರು.

ಕರ್ನಾಟಕ ಸರ್ಕಾರದ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್‌. ಆಂಜನೇಯ ಅವರನ್ನು ಸನ್ಮಾನಿಸಿದರು. ರಾಜ್ಯದ ವಿವಿಧ ದಲಿತ ಸಂಘಟನೆಗಳ ಮುಖಂಡರು ಬೆಳ್ಳಿಗಧೆ ನೀಡಿ ಗೌರವಿಸಿದರು.

ಈ ವೇಳೆ ಲೋಕಸಭಾ ಮಾಜಿ ಸ್ಪೀಕರ್ ಮೀರಾಕುಮಾರಿ, ಸಚಿವರಾದ ಎಚ್.ಸಿ.ಮಹಾದೇವಪ್ಪ, ಕೆ.ಎಚ್.ಮುನಿಯಪ್ಪ, ಕರ್ನಾಟಕ ಆದಿ ಜಾಂಬವ ಅಭಿವೃದ್ದಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಇತರರು ಉಪಸ್ಥಿತರಿದ್ದರು.