ಸಾರಾಂಶ
ಕೊಪ್ಪಳ:
1991ರಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದಾಗ ಮೋಸದಿಂದ ತಮ್ಮನ್ನು ಸೋಲಿಸಲಾಗಿದೆ ಎಂದು ಹೇಳಿಕೆ ನೀಡುವ ಮೂಲಕ ಮತದಾರರಿಗೆ ಅವಮಾನ ಮಾಡಿರುವ ಸಿಎಂ ಸಿದ್ದರಾಮಯ್ಯ ಕೂಡಲೇ ಬೇಷರತ್ ಕ್ಷಮೆಯಾಚಿಸಬೇಕೆಂದು ಜೆಡಿಎಸ್ ಆಗ್ರಹಿಸಿದೆ.ಬಿಹಾರದಲ್ಲಿ ಮತಗಳ್ಳತನ ಮಾಡಲಾಗಿದೆ ಎಂದು ಆರೋಪಿಸಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ''''''''ವೋಟ್ ಚೋರಿ'''''''' ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಸಿದ್ದರಾಮಯ್ಯ ಕುರಿತು ಪ್ರಕಟಣೆ ನೀಡುವ ಮೂಲಕ ಜೆಡಿಎಸ್ ಮುಖಂಡರು ತಿರುಗೇಟು ನೀಡಿದ್ದಾರೆ.
ಮುಖ್ಯಮಂತ್ರಿಗೆ ಸಾಮಾನ್ಯ ಜ್ಞಾನವೂ ಕೈಕೊಟ್ಟಂತಿದೆ. ಅಂದಿನ ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷದಿಂದ ತಾವು ಸ್ಪರ್ಧಿಸಿದ್ದರು ಎಂಬುದನೇ ಅವರು ಮರೆತಂತಿದೆ. ಅಂದು ಅಕ್ರಮ ಹಾಗೂ ವಾಮಮಾರ್ಗದಿಂದ ಕಾಂಗ್ರೆಸ್ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಜಯಗಳಿಸಿತ್ತು ಎಂಬುದನ್ನು ಅವರೇ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಬೇಜವಾಬ್ದಾರಿ ಹೇಳಿಕೆ ನೀಡಿ, ಕೊಪ್ಪಳದ ಮತದಾರರಿಗೆ ಅಗೌರವ ತೋರಿರುವ ಸಿದ್ದರಾಮಯ್ಯ ಜನರ ಕ್ಷಮೆ ಯಾಚಿಸಲೇಬೇಕೆಂದು ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಜಿಲ್ಲಾಧ್ಯಕ್ಷ ಸುರೇಶ್ ಭೂಮರೆಡ್ಡಿ, ರಾಜ್ಯ ಕಾರ್ಯಾಧ್ಯಕ್ಷ ರಾಜು ನಾಯಕ, ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ ಹಾಗೂ ಪಕ್ಷದ ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ್ರು ಒತ್ತಾಯಿಸಿದ್ದಾರೆ.ಸಿದ್ದರಾಮಯ್ಯನವರ ಹೇಳಿಕೆ ಗಮನಿಸಿದರೆ 2024ರ ಲೋಕಸಭಾ ಚುನಾವಣೆಯಲ್ಲಿಯೂ ಸಹ ಕಾಂಗ್ರೆಸ್ ಅಕ್ರಮವಾಗಿ ಜಯಗಳಿಸಿದಂತಿದೆ. ತವರಿನಲ್ಲಿ ಸೋಲುವ ಭಯದಿಂದ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚುವರಿಯಾಗಿ ಸ್ಪರ್ಧಿಸುವುದು, ಜಯದ ನಂತರ ರಾಜೀನಾಮೆ ಕೊಡುವುದು, ಆನಂತರ ಅಲ್ಲಿನ ಮತದಾರರಿಗೆ ಅವಮಾನ ಮಾಡುವುದು ಸಿದ್ದರಾಮಯ್ಯನವರಿಗೆ ಸಿದ್ಧಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ 2ನೇ ಬಾರಿಗೆ ಮುಖ್ಯಮಂತ್ರಿಯಾಗಿ, ಆ ಪಕ್ಷದ ವಿರುದ್ಧವೇ ಆರೋಪ ಮಾಡಿ ಈಗ ಜನರ ದಾರಿ ತಪ್ಪಿಸಲು ಬಿಹಾರದಲ್ಲಿ ಹಮ್ಮಿಕೊಂಡಿರುವ ''''''''ವೋಟ್ ಚೋರಿ'''''''' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿರುವುದು ನೈತಿಕವಾಗಿ ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಪಕ್ಷದ ವಿರುದ್ಧ ಮಾತನಾಡಿದ ವಾಲ್ಮೀಕಿ ಸಮಾಜದ ಕೆ. ರಾಜಣ್ಣ ಅವರನ್ನು ಅವಮಾನಕಾರಿಯಾಗಿ ಮಂತ್ರಿ ಸ್ಥಾನದಿಂದ ವಜಾಗೊಳಿಸಿದ ಕಾಂಗ್ರೆಸ್ ಹೈಕಮಾಂಡ್ ಈಗ ಸಿದ್ದರಾಮಯ್ಯನವರ ವಿರುದ್ಧ ಕ್ರಮಕೈಗೊಳ್ಳುವ ಶಕ್ತಿ ಪ್ರದರ್ಶಿಸುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.