ಸಾರಾಂಶ
ನಟ ದರ್ಶನ್ ಹಾಗೂ ಸಹಚರರಿಂದ ಬರ್ಬರವಾಗಿ ಹತ್ಯೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ ಅವರ ತಂದೆ ಮತ್ತು ತಾಯಿ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ದುಃಖ ತೋಡಿಕೊಂಡರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಟ ದರ್ಶನ್ ಹಾಗೂ ಸಹಚರರಿಂದ ಬರ್ಬರವಾಗಿ ಹತ್ಯೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ ಅವರ ತಂದೆ ಮತ್ತು ತಾಯಿ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ದುಃಖ ತೋಡಿಕೊಂಡರು. ಜೊತೆಗೆ ಮಗನ ಹತ್ಯೆಗೈದವರಿಗೆ ಕಠಿಣ ಶಿಕ್ಷೆಯಾಗಬೇಕು, ಸೊಸೆಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಮನವಿ ಮಾಡಿದರು. ಅವರ ಅಳಲು ಆಲಿಸಿ ಸಾಂತ್ವನ ಹೇಳಿದ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದರು. ಪ್ರಕರಣದಲ್ಲಿ ಎಲ್ಲ ಆರೋಪಿಗಳಿಗೂ ಕಾನೂನು ಪ್ರಕಾರ ಶಿಕ್ಷೆ ಆಗಲಿದೆ. ಇದನ್ನು ಯಾರಿಂದಲೂ ತಪ್ಪಿಸಲಾಗಲ್ಲ. ಸೊಸೆಯ ವಿದ್ಯಾರ್ಹತೆಯ ವಿವರಣೆ ನೀಡಿದರೆ ಪರಿಶೀಲಿಸಿ ತಿಳಿಸುವುದಾಗಿ ಭರವಸೆ ನೀಡಿದರು ಎನ್ನಲಾಗಿದೆ.
ಮುಖ್ಯಮಂತ್ರಿಗಳ ಕಾವೇರಿ ನಿವಾಸಕ್ಕೆ ಮಾಜಿ ಸಚಿವ ಎಚ್.ಆಂಜನೇಯ ಅವರೊಂದಿಗೆ ಆಗಮಿಸಿದ ಮೃತ ರೇಣುಕಾಸ್ವಾಮಿ ಅವರ ತಂದೆ, ತಾಯಿ ದುಡಿಯುವ ಮಗನನ್ನು ಕಳೆದುಕೊಂಡು ನಾವು ಅನುಭವಿಸುತ್ತಿರುವ ನೋವು ಯಾರಿಗೂ ಬೇಡ ಎಂದು ಕಣ್ಣೀರು ಹಾಕಿದರು. ನಮ್ಮ ಮಗನ ಹತ್ಯೆಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರಿಗೂ ಕಾನೂನಾತ್ಮಕವಾಗಿ ಕಠಿಣ ಶಿಕ್ಷೆ ಕೊಡಿಸಬೇಕೆಂದು ಎಂದು ಕೈಮುಗಿದು ಬೇಡಿಕೊಂಡರು. ಪ್ರಕರಣದಲ್ಲಿ ಪೊಲೀಸ್ ತನಿಖೆಯ ಬಗ್ಗೆ ಸಮಾಧಾನ ವ್ಯಕ್ತಪಡಿಸಿದ ಅವರು ಇದೇ ವೇಳೆ ಪತಿಯನ್ನು ಕಳೆದುಕೊಂಡಿರುವ ಸೊಸೆಯ ಜೀವನೋಪಾಯಕ್ಕೆ ಸರ್ಕಾರಿ ಉದ್ಯೋಗ ಕಲ್ಪಿಸುವಂತೆ ಮನವಿ ಮಾಡಿದರು. ಗರ್ಭಿಣಿಯಾಗಿರುವ ಸೊಸೆಗೆ ಯಾವುದೇ ಆದಾಯ ಮೂಲಗಳಿಲ್ಲ. ಸರ್ಕಾರವೇ ಆಧಾರ ಕಲ್ಪಿಸಬೇಕು ಎಂದು ಕೋರಿಕೊಂಡರು.