ಶ್ರೀ ಗುರುಸಿದ್ದರಾಮೇಶ್ವರರು ಕೇವಲ ಒಬ್ಬ ವ್ಯಕ್ತಿಯಲ್ಲ, ಸಮಾಜವನ್ನು ರೂಪಿಸುವ ಶಕ್ತಿಯಾಗಿದ್ದರು ಎಂದು ಉಪವಿಭಾಗಾಧಿಕಾರಿ ನಾಹಿದಾ ಜಮ್ ಜಮ್ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ತುಮಕೂರು ಶ್ರೀ ಗುರುಸಿದ್ದರಾಮೇಶ್ವರರು ಕೇವಲ ಒಬ್ಬ ವ್ಯಕ್ತಿಯಲ್ಲ, ಸಮಾಜವನ್ನು ರೂಪಿಸುವ ಶಕ್ತಿಯಾಗಿದ್ದರು ಎಂದು ಉಪವಿಭಾಗಾಧಿಕಾರಿ ನಾಹಿದಾ ಜಮ್ ಜಮ್ ಅಭಿಪ್ರಾಯಪಟ್ಟರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಭೋವಿ ಸಮಾಜದ ಎಲ್ಲ ಸಂಘ ಸಂಸ್ಥೆ ವತಿಯಿಂದ ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಕಾರ್ಯಕ್ರಮವನ್ನು ನೆರವೇರಿಸಿ ಅವರು ಮಾತನಾಡಿದರು.ನಾವು ಮಾಡುವ ಪ್ರತಿಯೊಂದು ಕಾರ್ಯದಲ್ಲೂ ಪಾಪ–ಪುಣ್ಯಗಳ ಅರಿವು ಇರಬೇಕು ಎಂಬ ಸಂದೇಶವನ್ನು ತಮ್ಮ ಜೀವನದ ಮೂಲಕ ಸಾರಿದ ಮಹಾನ್ ಚೇತನರು ಸಿದ್ದರಾಮೇಶ್ವರರು. ಕಾಯಕವೇ ಕೈಲಾಸ ಎಂಬ ತತ್ವವನ್ನು ನಂಬಿ, ಶ್ರಮ, ನಿಷ್ಠೆ ಮತ್ತು ನೀತಿಯ ಮೂಲಕ ಸೊಲ್ಲಾಪುರವನ್ನು ಕೈಲಾಸದಂತೆ ರೂಪಿಸಿ ತೋರಿಸಿದವರು. ಕಾಯಕವನ್ನು ನಂಬಿದರೆ ಸಮಾಜವನ್ನು ಹೇಗೆ ಉತ್ತಮ ದಿಕ್ಕಿನಲ್ಲಿ ಬದಲಾಯಿಸಬಹುದು ಎಂಬುದಕ್ಕೆ ಅವರು ಜೀವಂತ ಉದಾಹರಣೆ. ಇಂತಹ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಇಂದಿನ ಯುವಜನತೆ ಸ್ಫೂರ್ತಿಯಾಗಿ ಸ್ವೀಕರಿಸಿ, ಶ್ರಮಪೂರ್ಣ ಮತ್ತು ಮೌಲ್ಯಾಧಾರಿತ ಜೀವನವನ್ನು ನಡೆಸಬೇಕಾಗಿದೆ ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದಲಿಂಗಪ್ಪ ಮಾತನಾಡಿ, ಸಿದ್ದರಾಮೇಶ್ವರ ಜಯಂತಿಯ ಉದ್ದೇಶವು ಅವರ ಆದರ್ಶಗಳನ್ನು ಇಂದಿನ ಯುವಜನತೆ ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕೆಂಬುದಾಗಿದೆ. ಅವರು ಮಾಡಿದ ಕಾಯಕಗಳು ಯಾವುದೇ ಕಾಲಕ್ಕೂ ತಿರಸ್ಕರಣೆಯಾಗದಂತಹ ಶಾಶ್ವತ ಮೌಲ್ಯಗಳನ್ನು ಹೊಂದಿದ್ದವು. ಜನರ ಮೂಲಭೂತ ಅಗತ್ಯಗಳನ್ನು ಅರಿತು ನಾಗರಿಕರಿಗೆ ಕೆರೆ, ಬಾವಿ, ಕಟ್ಟಡಗಳಂತಹ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಿ ಜನಸೇವೆಗೆ ತಮ್ಮ ಜೀವನವನ್ನು ಸಮರ್ಪಿಸಿದ್ದರು ಎಂದರು. ಕಾರ್ಮಿಕರೊಂದಿಗೆ ನಿಂತು ದುಡಿದು, ಶ್ರಮದ ಗೌರವವನ್ನು ಸಾರಿದ ಮಹಾನ್ ಚೇತನರಾಗಿದ್ದ ಸಿದ್ದರಾಮೇಶ್ವರರು, ಕಾಯಕದಲ್ಲಿ ಜಾತಿ–ಧರ್ಮದ ಭೇದ-ಭಾವ ಇರಬಾರದೆಂಬ ಸಂದೇಶವನ್ನು ಸಮಾಜಕ್ಕೆ ನೀಡಿದರು. ಅವರ ಸೇವೆ ಮತ್ತು ಕಾಯಕ ತತ್ವವು ಸಮಾನತೆ, ಮಾನವೀಯತೆ ಹಾಗೂ ಸಾಮಾಜಿಕ ನ್ಯಾಯದ ಪ್ರತೀಕವಾಗಿದ್ದು, ಇಂದಿನ ಯುವಜನತೆಗೆ ದಾರಿದೀಪವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಮಂಜುನಾಥ್ ಹಾಗೂ ಭೋವಿ ಸಮುದಾಯದ ಮುಖಂಡರಾದ ಊರುಕೆರೆ ಉಮೇಶ್, ವಿಶ್ವನಾಥ್, ಪಿ.ಜಿ. ವೆಂಕಟಸ್ವಾಮಿ, ಎಚ್.ಹನುಮಂತರಾಯಪ್ಪ, ಪುರುಷೋತ್ತಮ್, ಕಾಶಿನಾಥ್, ಗೋವಿಂದರಾಜು, ಮಧುಗಿರಿ ಹನುಮಂತರಾಯಪ್ಪ, ಗಿರಿಯಪ್ಪ, ಗುತ್ತಿಗೆದಾರ ಕೃಷ್ಣಮೂರ್ತಿ, ತಿಪ್ಪೇಸ್ವಾಮಿ ಸೇರಿದಂತೆ ಮತ್ತಿತರರು ಹಾಜರಿದ್ದರು.