ಕಾಂಗ್ರೆಸ್ ಅಧಿಕ ಸ್ಥಾನ ಪಡೆದರೆ ಸಿಎಂ ಆಗಿ ಸಿದ್ದರಾಮಯ್ಯ ಮುಂದುವರಿಕೆ : ಇಕ್ಬಾಲ್ ಅನ್ಸಾರಿ

| Published : Apr 04 2024, 01:10 AM IST / Updated: Apr 04 2024, 08:11 AM IST

ಕಾಂಗ್ರೆಸ್ ಅಧಿಕ ಸ್ಥಾನ ಪಡೆದರೆ ಸಿಎಂ ಆಗಿ ಸಿದ್ದರಾಮಯ್ಯ ಮುಂದುವರಿಕೆ : ಇಕ್ಬಾಲ್ ಅನ್ಸಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕ ಸ್ಥಾನ ಪಡೆದರೆ ಮಾತ್ರ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರಿಯುತ್ತಾರೆ.

  ಗಂಗಾವತಿ :  ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕ ಸ್ಥಾನ ಪಡೆದರೆ ಮಾತ್ರ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರಿಯುತ್ತಾರೆ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿದರು.

ನಗರದ ಕೊಪ್ಪಳ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಬುಧವಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಲೋಕಸಭೆ ಚುನಾವಣೆ ಮುಖ್ಯಮಂತ್ರಿಗೆ ನಿರ್ಣಾಯಕವಾಗಿದ್ದು, ಈ ದಿಸೆಯಲ್ಲಿ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಗೆಲ್ಲಬೇಕು ಎಂದರು.

ಮೂಲ ಕಾಂಗ್ರೆಸ್‌ನವರಿಂದಲೇ ಕಾಂಗ್ರೆಸ್ ಅಭ್ಯರ್ಥಿ ಜಯ ಸಾಧಿಸುತ್ತಾರೆ. ನಗರದಲ್ಲಿ ನಕಲಿ ಕಾಂಗ್ರೆಸ್ ಮುಖಂಡರು ಬಹಳಷ್ಟಿದ್ದಾರೆ. ಅವರಲ್ಲಿ ವೋಟ್ ಬ್ಯಾಂಕ್ ಇಲ್ಲ. ವಿಧಾನಸಭೆ ಚುನಾವಣೆಯ ವೇಳೆಯಲ್ಲಿ ಕಾಂಗ್ರೆಸ್ ತೊರೆದು ರೆಡ್ಡಿಯ ಜೊತೆಗೆ ಹೋಗಿರುವ 10 ರಿಂದ 12 ಜನ ನಗರಸಭೆ ಸದಸ್ಯರು ಭಿಕ್ಷುಕರಿದ್ದಂತೆ, ಹಣದ ಆಮಿಷಕ್ಕೆ ಒಳಗಾಗಿ ರೆಡ್ಡಿಯ ಜೊತೆಗೆ ಹೋಗಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಲೋಕಸಭಾ ಚುನಾವಣೆಯ ವೇಳೆಯಲ್ಲಿ ಬಿಜೆಪಿ, ಕಾಂಗ್ರೆಸ್ ನಡುವೆ ಸುಳ್ಳು-ಸತ್ಯದ ನಡುವೆ ಯುದ್ಧ ನಡೆಯುತ್ತಿದೆ. ನಾವು ಸಿದ್ದರಾಮಯ್ಯ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮಾಡಿರುವ ಅಭಿವೃದ್ಧಿಯ ಕೆಲಸ ಮುಂದಿಟ್ಟುಕೊಂಡು ಮತ ಕೇಳಲು ಹೊರಟಿದ್ದೇವೆ. ಬಿಜೆಪಿಯವರು 10 ವರ್ಷ ಸುಳ್ಳು ಹೇಳಿಕೊಂಡು ಹೊರಟಿದ್ದಾರೆ. ಚುನಾವಣೆಯಲ್ಲಿ ಜನರು ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಮಾತನಾಡಿ, ಬಿಜೆಪಿಯವರು ಹೇಗೆ ಗೆಲ್ಲುತ್ತಾರೆ ಗೊತ್ತಿಲ್ಲ. ಕೆಲವರು ಇವಿಎಂ ಯಂತ್ರ ತಿರುಚುತ್ತಾರೆ ಎನ್ನುತ್ತಾರೆ. ಆದರೆ ಬಿಜೆಪಿ ಜನಪ್ರಿಯ ಕಾರ್ಯ ಮಾಡಿಲ್ಲ. ಅದಾನಿ, ಅಂಬಾನಿ ವಿಕಾಸ ಆಗಿದ್ದಾರೆಯೇ ಹೊರತು, ಬಡ ಜನರು ವಿಕಾಸ ಹೊಂದಿಲ್ಲ ಎಂದು ಹೇಳಿದರು.

ನಂತರ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಮಾತನಾಡಿದರು. ಕಾಡಾ ಅಧ್ಯಕ್ಷ ಹಸೇನಸಾಬ್ ದೋಟಿಹಾಳ, ಕರಕುಶಲ ನಿಗಮದ ಮಾಜಿ ಅಧ್ಯಕ್ಷೆ ಲಲಿತಾರಾಣಿ, ಪ್ರಮುಖರಾದ ಅಮರೇಶ ಗೋನಾಳ, ವಿಶ್ವನಾಥ ಮಾಲಿ ಪಾಟೀಲ್, ಮಲ್ಲಿಕಾರ್ಜುನ ತಟ್ಟಿ ಹಾಗೂ ಇತರರಿದ್ದರು.