ಸಿದ್ದರಾಮಯ್ಯ ರಾಜಕಾರಣದಲ್ಲಿ ಬೆಳೆಯಲು ದೇವೇಗೌಡರು ಕಾರಣ: ಎ. ಮಂಜು

| Published : Dec 01 2024, 01:34 AM IST

ಸಿದ್ದರಾಮಯ್ಯ ರಾಜಕಾರಣದಲ್ಲಿ ಬೆಳೆಯಲು ದೇವೇಗೌಡರು ಕಾರಣ: ಎ. ಮಂಜು
Share this Article
  • FB
  • TW
  • Linkdin
  • Email

ಸಾರಾಂಶ

ಸಿದ್ದರಾಮಯ್ಯ ರಾಜಕಾರಣದಲ್ಲಿ ಬೆಳೆಯಲು ದೇವೇಗೌಡರು ಕಾರಣ. ಯಾಕೆ ಅವರ ಅಹಂಕಾರ ಮುರಿಯಬೇಕು ಎಂದು ಎ. ಮಂಜು ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸಿದ್ದರಾಮಯ್ಯನವರು ರಾಜಕಾರಣದಲ್ಲಿ ಬೆಳೆಯಲು ದೇವೇಗೌಡರು ಕಾರಣ. ಯಾಕೆ ಅವರ ಅಹಂಕಾರವನ್ನು ಮುರಿಯಬೇಕು ಎಂದು ಶಾಸಕ ಎ. ಮಂಜು ಪ್ರಶ್ನಿಸಿದ್ದಾರೆ.

ಹಾಸನದಲ್ಲಿ ಎಚ್ ಡಿಡಿ, ಎಚ್ ಡಿಕೆ ಅಹಂಕಾರ ಮುರಿಯಲು ಕಾಂಗ್ರೆಸ್ ಸ್ವಾಭಿಮಾನಿ ಸಮಾವೇಶ ಮಾಡುತ್ತಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ರಾಜಕಾರಣದಲ್ಲಿ ಯಾರು ಯಾರಿಗೂ ಶಾಶ್ವತ ಮಿತ್ರರೂ ಅಲ್ಲ ಶತ್ರುಗಳು ಅಲ್ಲ. ಮೋದಿಯವರ ಬಗ್ಗೆ ಸಿದ್ದರಾಮಯ್ಯ 52 ಇಂಚಿನ ಎದೆ ಅಂತ ಹೇಳುತ್ತಿದ್ದರು.ಈಗ ಮಾತನಾಡುತ್ತಿದ್ದಾರಾ? ನಿಂತು ಹೋಗಿಲ್ವಾ. ಯಾವತ್ತೋ ಒಂದು ದಿನ ಸಿದ್ದರಾಮಯ್ಯ ಅವರು ಮಾತನಾಡುವುದು ನಿಂತು ಹೋಗುತ್ತದೆ. ಅಷ್ಟಕ್ಕೂ ಇದು ಅವರ ಪಕ್ಷದ ಕಾರ್ಯಕ್ರಮ. ಅದನ್ನು ಮಾಡುವುದು ಬೇಡ ಅಂತ ಹೇಳುವುದಕ್ಕೆ ನಾವ್ಯಾರು? ಪಕ್ಷದಿಂದ ಮಾಡುತ್ತಾರೋ ಇಲ್ಲ ಸಿದ್ದರಾಮಯ್ಯನವರ ಸ್ವಂತದ್ದು ಅಂತ ಮಾಡುತ್ತಾರೋ ನೋಡೋಣ. ಅದು ಮೊದಲು ಗೊತ್ತಾಗಬೇಕಲ್ವಾ ಅದು ಇನ್ನು ತೀರ್ಮಾನ ಆಗಿಲ್ವಲ್ಲ ಎಂದು ಹೇಳಿದರು.

ಚುನಾವಣೆಯಲ್ಲಿ ಒಬ್ಬರ ಪರ ಮಾತನಾಡುವುದು, ವಿರುದ್ಧ ಮಾತನಾಡುವುದು ಸಹಜ. ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಗೆದ್ದಿದ್ದೇವೆ ಅಂತ ಬೀಗುವುದು ಒಳ್ಳೆಯದಲ್ಲ. ಉಪಚುನಾವಣೆಗಳು ಸರ್ಕಾರದ ಪರ ಇರುವುದು ಸಹಜ. ಚುನಾವಣೆ ಗೆದ್ದ ತಕ್ಷಣ ಹೀಗೆ ಮಾತನಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ ಗೆ ತಿರುಗೇಟು ನೀಡಿದರು.

ಚನ್ನಪಟ್ಟಣದಲ್ಲಿ ಬಿಜೆಪಿಯವರು ನಿಖಿಲ್ ಕುಮಾರಸ್ವಾಮಿ ಸೋಲಿಗೆ ಕಾರಣರಾದರು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಚುನಾವಣೆಯಲ್ಲಿ ಸೋತಿರುವುದು ಖಚಿತ.

ಈ ಕುರಿತು ಎನ್ ಡಿಎ ನಲ್ಲಿ, ಪಕ್ಷದಲ್ಲಿ ಮಾತನಾಡಿಕೊಳ್ಳುತ್ತೇವೆ. ಆದರೆ ಸೋಲಿನ ವಿಚಾರವನ್ನು ಯಾರದ್ದೋ ಮೇಲೆ ಹಾಕುವಂತಹದ್ದಲ್ಲ. ಅಹಿಂದ ಮತಗಳು ಒಂದಾಗಿದ್ದರಿಂದ ನಾವು ಸೋತಿದ್ದೇವೆ. ಜಾತ್ಯತೀತ ಮತಗಳು ನಮಗೆ ಬರಲಿಲ್ಲ.

ಹೀಗಾಗಿ ಚುನಾವಣೆಯಲ್ಲಿ ಅವರು ಗೆದ್ದಿದ್ದಾರೆ ಎಂದರು.

ವಾಜಪೇಯಿಯವರು ಸೋತಿರಲಿಲ್ಲವೆ? ದೇವೇಗೌಡ್ರು, ಸಿದ್ದರಾಮಯ್ಯ ನಾನೂ ಕೂಡ ಸೋತಿರಲಿಲ್ಲವೆ. ಚುನಾವಣೆ ಸಂದರ್ಭ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಿಲ್ಲ. ಬದಲಾಗಿ ಎಲ್ಲಾ ಹಣವನ್ನು ಉಪಚುನಾವಣೆ ಕ್ಷೇತ್ರಗಳಿಗೆ ಹಾಕಿದರು. ಆ ಮೂಲಕ ಓಟು ಹಾಕಿಸಿಕೊಂಡರು. ದಿನಗಳು ಬದಲಾಗಲೇಬೇಕು ಎಂದರು.

ಶಾಸಕ ಜಿ. ಡಿ ದೇವೇಗೌಡ ಸ್ವಪಕ್ಷದವರ ವಿರುದ್ಧವೇ ತಿರುಗಿ ಬಿದ್ದಿರುವ ವಿಚಾರಕ್ಕೆ ದೇವೇಗೌಡ ವಿರುದ್ಧ ಎ ಮಂಜು ಅಸಮಾಧಾನ ವ್ಯಕ್ತಪಡಿಸಿ,

ಪಕ್ಷದಲ್ಲಿ ಯಾವ ಆಂತರಿಕ ಕಲಹವೂ ಇಲ್ಲ. ಎಲ್ಲಿ ಅನುಕೂಲ, ಅನಾನುಕೂಲ ಜಾಸ್ತಿ ಆಗುತ್ತದೆ. ಅದರ ಬಗ್ಗೆ ಯೋಚಿಸುವ ರಾಜಕಾರಣಿಗಳು ಜಾಸ್ತಿ ಆಗಿದ್ದಾರೆ. ಸೈದ್ಧಾಂತಿಕ ರಾಜಕಾರಣ ಈಗ ಇಲ್ಲ. ನನಗೆ ಏನು ಲಾಭ ಅಥವಾ ನಷ್ಟವಾಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ಇದ್ದಾರೆ. ಹಗರಣಗಳು ಇರುತ್ತವೆ ಅದು ಹೊರಗೆ ಬರುತ್ತವೆ ಎನ್ನುವ ಯೋಚನೆ ಇರುತ್ತದೆ. ಒಂದು ಪಕ್ಷದಲ್ಲಿ ಇದ್ದ ಮೇಲೆ ಹೊಂದಾಣಿಕೆ ಇರಬೇಕು.

ಚುನಾವಣೆಗೆ ನನ್ನನ್ನು ಕರೆದಿಲ್ಲ ಎನ್ನುತ್ತಾರೆ. ಯಾರನ್ನು ಯಾಕೆ ಕರೆಯಬೇಕು ಎಂದು ಮಂಜು ಪ್ರಶ್ನಿಸಿದರು.