ಸಿದ್ದರಾಮಯ್ಯ ಅವರು ಕುರುಬ ಸಮುದಾಯಕ್ಕೆ ದೇವ್ರು ಇದ್ದಂಗೆ. ಬಡವರಿಗೆ ಭಾಗ್ಯ ಕೊಟ್ಟ ದೇವರಾಗಿದ್ದಾರೆ. ಹೀಗಾಗಿ ನಾವು ಅವರಿಗೆ ಕೈ ಮುಗಿಯುತ್ತೇವೆ ಎಂದು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಪಿ.ಎಲ್. ಗಾದಿಲಿಂಗನಗೌಡ ಹೇಳಿದರು.

ಬಳ್ಳಾರಿ: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆಯಿಂದ ಕುರುಬ ಸಮುದಾಯಕ್ಕೆ ಅತ್ಯಂತ ನೋವಾಗಿದೆ ಎಂದು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಪಿ.ಎಲ್. ಗಾದಿಲಿಂಗನಗೌಡ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾದ ಬಳಿಕ ಇಡೀ ರಾಜ್ಯದ ಅಹಿಂದ ಸಮುದಾಯದ ಹಿತ ಕಾಯುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದರು. ಬಡವರ ಕಲ್ಯಾಣಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದರು. ಅತ್ಯುತ್ತಮವಾಗಿ ಹಣಕಾಸು ಹೊಣೆಗಾರಿಕೆಯನ್ನು ನಿಭಾಯಿಸಿದರು. ಕೇಂದ್ರ ಸರ್ಕಾರದಿಂದ ಬರಬೇಕಾದ ಬಾಕಿ ತೆರಿಗೆ ಹಣದ ನಡುವೆಯೂ ಗ್ಯಾರಂಟಿ ಯೋಜನೆಗಳಿಗೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಂಡರು. ರಾಜ್ಯ ಸರ್ಕಾರದ ಭಾಗ್ಯ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿವೆ ಎಂದು ಹೇಳಿದರು.

ರಾಜ್ಯದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ ಸಿದ್ದರಾಮಯ್ಯ ಅವರು, ಕೃಷಿ ಮತ್ತು ನೀರಾವರಿ ಯೋಜನೆಗಳ ಅನುಷ್ಠಾನಗಳಿಗೆ ಆದ್ಯತೆ ನೀಡಿದರು. ಚುನಾವಣೆ ಮುನ್ನ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದ ನಾಯಕ ಎಂದು ಇಡೀ ನಾಡಿನ ಜನರು ಬಣ್ಣಿಸುತ್ತಿದ್ದಾರೆ. ಹೀಗಿರುವಾಗ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರಿಂದ ರಾಜಿನಾಮೆ ಪಡೆದುಕೊಂಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಕುರುಬರಿಗೆ ದೇವ್ರು ಇದ್ದಂಗೆ: ಸಿದ್ದರಾಮಯ್ಯ ಅವರು ಕುರುಬ ಸಮುದಾಯಕ್ಕೆ ದೇವ್ರು ಇದ್ದಂಗೆ. ಬಡವರಿಗೆ ಭಾಗ್ಯ ಕೊಟ್ಟ ದೇವರಾಗಿದ್ದಾರೆ. ಹೀಗಾಗಿ ನಾವು ಅವರಿಗೆ ಕೈ ಮುಗಿಯುತ್ತೇವೆ. ಒಂದು ರೀತಿಯಲ್ಲಿ ಅವರು ನಮ್ಮ ಸಮುದಾಯದ ಮನೆದೇವ್ರು ಆಗಿದ್ದಾರೆ. ದೇವರ ತೇರು ಹೋಗುವಾಗ ಎಲ್ಲರೂ ಕೈ ಮುಗಿದಂತೆ ನಾವು ಸಿದ್ದರಾಮಯ್ಯ ಅವರನ್ನು ದೇವರೆಂದೇ ಕೈ ಮುಗಿಯುತ್ತೇವೆ ಎಂದು ಹೇಳಿದರು.

ಸಿದ್ದರಾಮಯ್ಯ ರಾಜಿನಾಮೆ ವಿಚಾರದಲ್ಲಿ ಯಾವುದೇ ಹೇಳಿಕೆ ನೀಡಬೇಡಿ ಎಂದು ನಮ್ಮ ಸಂಘದ ರಾಜ್ಯ ಸಮಿತಿ ತಿಳಿಸಿತ್ತು. ಹೀಗಾಗಿ ಸುಮ್ಮನಾಗಿದ್ದೆವು. ಬಳಿಕ ಸಾಂಕೇತಿಕವಾಗಿ ಸುದ್ದಿಗೋಷ್ಠಿ ಮಾಡಿ ಸಿದ್ದರಾಮಯ್ಯ ಅವರ ರಾಜಿನಾಮೆ ಕುರುಬ ಸಮುದಾಯಕ್ಕೆ ಅತ್ಯಂತ ನೋವಾಗಿದೆ ಎಂದು ತಿಳಿಸಬಹುದು ಎಂದು ಹೇಳಿತು. ಹೀಗಾಗಿ ಸಾಂಕೇತಿಕವಾಗಿ ನಮ್ಮ ಅನಿಸಿಕೆ ಹೇಳುತ್ತಿದ್ದೇನೆ ಎಂದು ಪಿ.ಎಲ್. ಗಾದಿಲಿಂಗನಗೌಡ ಹೇಳಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಮೋಹನ್ ಹಾಗೂ ಸಂಘದ ಯುವ ಮುಖಂಡ ಕೆ. ಗಂಗಾಧರ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.