ಬಸವತತ್ವದ ಚಿಂತನೆಯಲ್ಲಿ ಅರಳಿದ ಸಿದ್ದರಾಮೇಶ್ವರ: ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ

| Published : Jan 16 2025, 12:48 AM IST

ಬಸವತತ್ವದ ಚಿಂತನೆಯಲ್ಲಿ ಅರಳಿದ ಸಿದ್ದರಾಮೇಶ್ವರ: ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ದೇಶವು ಸಾಂಸ್ಕೃತಿಕ, ಸಂಪ್ರದಾಯಗಳ ನಾಡು. ಈ ನಾಡಿನಲ್ಲಿ ಹಲವಾರು ಜಾತಿ, ಪಂಗಡಗಳಿದ್ದು, ಸರ್ವರೂ ಒಂದೇ ಎಂಬ ಭಾವನೆಯಿಂದ ಮಹನೀಯರು, ಸಾಧುಗಳು, ಋಷಿ ಮುನಿಗಳು ದೇಶದ ಏಕತೆಗೆ, ಏಳಿಗೆಗೆ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಕಾಯಕಯೋಗಿ ಶ್ರೀ ಗುರುಸಿದ್ಧರಾಮೇಶ್ವರ 852ನೇ ಜಯಂತಿ ಬುಧವಾರ ನಡೆಯಿತು.

ಕಾರ್ಯಕ್ರಮದಲ್ಲಿ ಶಾಸಕರಾದ ಕೆ.ಎಚ್.ಪುಟ್ಟಸ್ವಾಮಿಗೌಡ, ವಿವಿಧ ಸಂಘಟನೆಗಳ ಮುಖಂಡರು ಸೇರಿದಂತೆ ಸಮುದಾಯದ ಮುಖಂಡರು, ಸಾರ್ವಜನಿಕರು, ಅಧಿಕಾರಿಗಳು, ನೌಕರರು ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಶಾಸಕರಾದ ಕೆ.ಎಚ್.ಪುಟ್ಟಸ್ವಾಮಿಗೌಡ ಮಾತನಾಡಿ, ಬಸವ ತತ್ವದ ವೈಚಾರಿಕ ಚಿಂತನೆಯಲ್ಲಿ ಅರಳಿದ ಸಿದ್ಧರಾಮೇಶ್ವರರು, ಉಪದೇಶಿಸಿರುವ ಜ್ಞಾನ ಸಂದೇಶಗಳನ್ನು ಅವಲೋಕನ ಮಾಡಿಕೊಳ್ಳುವುದರ ಮೂಲಕ ಅವುಗಳನ್ನು ತನು- ಮನಗಳಲ್ಲಿ ಕ್ರಿಯಾತ್ಮಕವಾಗಿ ರೂಪಿಸಿಕೊಳ್ಳುವ ಪ್ರಯತ್ನದೊಂದಿಗೆ ಅವರಿಗೆ ಸಲ್ಲಿಸುವ ನಮನ ನಿಜಕ್ಕೂ ಅರ್ಥಪೂರ್ಣನಿಸುತ್ತದೆ.

ಭಾರತ ದೇಶವು ಸಾಂಸ್ಕೃತಿಕ, ಸಂಪ್ರದಾಯಗಳ ನಾಡು. ಈ ನಾಡಿನಲ್ಲಿ ಹಲವಾರು ಜಾತಿ, ಪಂಗಡಗಳಿದ್ದು, ಸರ್ವರೂ ಒಂದೇ ಎಂಬ ಭಾವನೆಯಿಂದ ಮಹನೀಯರು, ಸಾಧುಗಳು, ಋಷಿ ಮುನಿಗಳು ದೇಶದ ಏಕತೆಗೆ, ಏಳಿಗೆಗೆ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಅದರಲ್ಲಿ ಶ್ರೀ ಗುರುಸಿದ್ಧರಾಮೇಶ್ವರರು ಭಾರತ ದೇಶದ ಪ್ರಜೆಗಳು ಶಾಂತಿ, ಸಹಬಾಳ್ವೆಯಿಂದ ಒಂದಾಗಿ ಜೀವನ ನಡೆಸಬೇಕು ಎಂದು ತೋರಿಸಿಕೊಟ್ಟ ಆದರ್ಶಗಳು, ಮಾರ್ಗಗಳು, ಗುರುಗಳು ರಚಿಸಿದ ವಚನಗಳು ಇಂದಿನ ಸಮಾಜಕ್ಕೆ ಮಾದರಿಯಾಗಿವೆ ಎಂದು ಅವರ ಸೇವೆಯನ್ನು ಸ್ಮರಿಸಿದರು.

ಪ್ರತಿಯೊಂದು ಜನಾಂಗಕ್ಕೆ ಸಮಾಜ ತಿದ್ದಲು ವಚನಗಳನ್ನು ಸಿದ್ಧರಾಮರು ರಚಿಸಿದರು. ಅವರ ವಚನಗಳು ಶ್ರೇಷ್ಠ ವಾದವು. ಈ ಸಮುದಾಯದ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು, ಸರ್ಕಾರ ಸಹ ಹಲವು ಸೌಲಭ್ಯಗಳನ್ನು ನೀಡುತ್ತಿದೆ, ಅವುಗಳನ್ನು ಬಳಸಿಕೊಂಡು ಸಮಾಜ ಮುನ್ನೆಲೆಗೆ ಬರಬೇಕು ಎಂದು ತಿಳಿಸಿದರು.

ತಹಸೀಲ್ದಾರ್ ಮಹೇಶ್.ಎಸ್.ಪತ್ರಿ ಮಾತನಾಡಿ, ಸಮಾಜ ಸುಧಾರಣೆಗಾಗಿ ಸಿದ್ಧರಾಮೇಶ್ವರರ ಕೊಡುಗೆ ಅಪಾರವಾಗಿದೆ. ವಚನ ಸಾಹಿತ್ಯ ರೂಪದಲ್ಲಿ ಬದಲಾವಣೆಗೆ ನಾಂದಿ ಹಾಡಿದ್ದರು. ಅಕ್ಕಮಹಾದೇವಿ, ಬಸವಣ್ಣ ಮುಂತಾದವರು ಅನುಭವ ಮಂಟಪದಲ್ಲಿ ಸಮಾಜದ ಬದಲಾವಣೆಗೆ ಹೆಚ್ಚು ಒತ್ತುಕೊಟ್ಟರು. ಸಮುದಾಯದವರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಾಗ ಮಾತ್ರ ಸಮಾಜದಲ್ಲಿ ಸಮುದಾಯ ಮುಂದುವರಿಯಲು ಸಾದ್ಯವೆಂದು ತಿಳಿಸಿದರು.

ತಾಪಂ ಇಒ ಜೆ.ಕೆ.ಹೊನ್ನಯ್ಯ ಮಾತನಾಡಿ, ಯಾವುದೇ ಸಮುದಾಯ ಮುಂದುವರಿಯಬೇಕಾದರೆ ಹಿಂದೆ ಗುರು ಮತ್ತು ಮುಂದೆ ಗುರಿ ಇರಬೇಕು. ಈ ಸಮುದಾಯದವರು ಸಿದ್ಧರಾಮೇಶ್ವರರನ್ನು ಆಯ್ಕೆ ಮಾಡಿಕೊಂಡಿರುವುದು ಇದೆ ಉದ್ದೇಶಕ್ಕಾಗಿ. ಇವರು ಸಮಾಜಕ್ಕೆ, ಸಮುದಾಯಕ್ಕೆ ಹಲವು ಕೊಡುಗೆ ನೀಡಿದ್ದಾರೆ, ಸಿದ್ಧರಾಮೇಶ್ವರ ಮತ್ತು ಅಲ್ಲಮ ಪ್ರಭು ಸಮಕಾಲೀನರಾದರೂ 852 ವರ್ಷಗಳ ಹಿಂದೆ ಸಿದ್ಧರಾಮರು ಅಲ್ಲಮಪ್ರಭು ನೀಡಿದ ಕೆಲವು ಹೇಳಿಕೆಗಳನ್ನು ಖಂಡಿಸಿದ್ದರು ಎಂದು ತಿಳಿಸಿದರು.

ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದು ಸಾಧನೆ ಮಾಡಿರುವ ಸಮುದಾಯದ ವಿದ್ಯಾರ್ಥಿಗಳಿಗೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಲವು ಗಣ್ಯರಿಗೆ ಸನ್ಮಾನ ಮಾಡಲಾಯಿತು.

ನಗರಸಭೆ ಪೌರಾಯುಕ್ತೆ ಡಿ.ಎಂ.ಗೀತಾ, ನಗರಸಭೆ ಅಧ್ಯಕ್ಷರಾದ ಲಕ್ಷ್ಮೀನಾರಾಯಣಪ್ಪ, ಆರ್. ವೆಂಕಟೇಶ್ ನಾಗೇಂದ್ರ, ವೆಂಕಟರಮಣಪ್ಪ, ಉದಯ್, ರಂಗಮ್ಮ ಲಕ್ಷ್ಮೀಪತಿ, ಗಂಗಾಧರಪ್ಪ, ಬಾಲರಾಜು, ರತ್ನಮ್ಮ, ವೆಂಕಟೇಶ್, ರಾಮಾಂಜಿ ಮತ್ತು ಅಧಿಕಾರಿಗಳು, ತಾಲೂಕಿನ ಭೋವಿ ಸಮುದಾಯದ ಅಧ್ಯಕ್ಷರು, ಪದಾಧಿಕಾರಿಗಳು, ಸಮುದಾಯದ ಪ್ರಮುಖ ಮುಖಂಡರು, ಜನಪ್ರತಿನಿಧಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.