ಪ್ರಚಾರ ಬಿಟ್ಟು ಗಾಯಾಳು ನೆರವಿಗೆ ಸಿದ್ದೇಶ್ವರ ಪುತ್ರಿ ಅಶ್ವಿನಿ

| Published : Apr 19 2024, 01:08 AM IST

ಪ್ರಚಾರ ಬಿಟ್ಟು ಗಾಯಾಳು ನೆರವಿಗೆ ಸಿದ್ದೇಶ್ವರ ಪುತ್ರಿ ಅಶ್ವಿನಿ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಸಂಸದ ಜಿ.ಎಂ.ಸಿದ್ದೇಶ್ವರ ಪುತ್ರಿ ಜಿ.ಎಸ್.ಅಶ್ವಿನಿ ಹರಿಹರ ಬೈಪಾಸ್ ಬಳಿ ಮುಳ್ಳಿನ ಲೋಡ್ ತುಂಬಿದ್ದ ಟ್ರ್ಯಾಕ್ಟರ್ ಟ್ರ್ಯಾಲಿ ಪಲ್ಟಿಯಾಗಿ, ಅದರಡಿ ಸಿಲುಕಿದ್ದ ನಾಲ್ಕೈದು ಯುವಕರನ್ನು ಹರಿಹರ ಆಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆಗೆ ವ್ಯವಸ್ಥೆ ಮಾಡಿರುವುದು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಊರಿನ ಜಾತ್ರೆಗೆ ಮುಳ್ಳಿನ ಗಿಡ ತುಂಬಿಕೊಂಡು ಹೊರಟಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ, ಅದರ ಕೆಳಗೆ ಮುಳ್ಳುಗಳಡಿ ಸಿಲುಕಿದ್ದ ನಾಲ್ಕೈದು ಜನ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಮೂಲಕ ಸಂಸದ ಜಿ.ಎಂ.ಸಿದ್ದೇಶ್ವರ, ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪುತ್ರಿ ಜಿ.ಎಸ್.ಅಶ್ವಿನಿ ಮಾನವೀಯತೆ ಮೆರೆದ ಘಟನೆ ಹರಿಹರ ಹೊರ ವಲಯದ ಬೈಪಾಸ್ ರಸ್ತೆ ಬಳಿ ಗುರುವಾರ ವರದಿಯಾಗಿದೆ.

ತಮ್ಮ ತಾಯಿ ಗಾಯತ್ರಿ ಸಿದ್ದೇಶ್ವರ ಪರ ಪ್ರಚಾರಕ್ಕೆಂದು ದಾವಣಗೆರೆಯಿಂದ ಹರಿಹರ ತಾ. ಮಲೆಬೆನ್ನೂರು ಕಡೆಗೆ ಜಿ.ಎಸ್.ಅಶ್ವಿನಿ ತೆರಳುತ್ತಿದ್ದರು. ಹರಿಹರ ಬೈಪಾಸ್ ರಸ್ತೆಯ ಬಳಿ ಮುಳ್ಳುಗಳು ತುಂಬಿದ್ದ ನಾಲ್ಕೈದು ಟ್ರ್ಯಾಕ್ಟರ್ ಪೈಕಿ ಒಂದು ಟ್ರ್ಯಾಕ್ಟರ್ ಪಲ್ಟಿಯಾಗಿ ಅದು ಹಾಗೂ ಮುಳ್ಳುಗಳ ಅಡಿಯಲ್ಲಿ ನಾಲ್ಕೈದು ಯುವಕರು ಸಿಲುಕಿರುವುದನ್ನು ಕಂಡ ಜಿ.ಎಸ್.ಅಶ್ವಿನಿ ತಮ್ಮ ವಾಹನ ನಿಲ್ಲಿಸುವಂತೆ ಹೇಳಿ, ಗಾಯಾಳುಗಳ ನೆರವಿಗೆ ಧಾವಿಸಿದ್ದಾರೆ.

ಮಲೆಬೆನ್ನೂರು ಸಮೀಪದ ಅರಲಹಳ್ಳಿ ಗ್ರಾಮಸ್ಥರು ತಮ್ಮ ಊರಿನ ಜಾತ್ರೆಗಾಗಿ ನಾಲ್ಕು ಟ್ರ್ಯಾಕ್ಟರ್ ಗಳಲ್ಲಿ ಮುಳ್ಳಿನ ಗಿಡ ತುಂಬಿಕೊಂಡು ಹೋಗುತ್ತಿದ್ದ ವೇಳೆ ಮುಳ್ಳು ತುಂಬಿದ್ದ ಟ್ರ್ಯಾಕ್ಟರ್ ಟ್ರ್ಯಾಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. ಆ ಟ್ರ್ಯಾಕ್ಟರ್‌ನಲ್ಲಿದ್ದ ನಾಲ್ಕೈದು ಜನ ಅದರ ಅಡಿಯಲ್ಲಿ ಸಿಲುಕಿದ್ದರು. ಅಪಾಯದಲ್ಲಿದ್ದವರನ್ನು ಸ್ಥಳೀಯರು ಹಾಗೂ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿ, ರಕ್ಷಣೆ ಮಾಡಿದ್ದರು. ಇತ್ತ ತಮ್ಮ ತಾಯಿ ಗಾಯತ್ರಿ ಸಿದ್ದೇಶ್ವರ ಪರ ಪ್ರಚಾರಕ್ಕೆ ಮಲೆಬೆನ್ನೂರಿಗೆ ಹೊರಟಿದ್ದ ಜಿ.ಎಸ್‌.ಅಶ್ವಿನಿ ಪ್ರಚಾರ ಮೊಟಕುಗೊಳಿಸಿ, ಗ್ರಾಮಸ್ಥರು, ಸ್ಥಳೀಯರ ಸಹಕಾರದಿಂದ ಗಾಯಾಳುಗಳನ್ನು ಹರಿಹರದ ಆಸ್ಪತ್ರೆಗೆ ತಮ್ಮ ವಾಹನದಲ್ಲಿ ಕರೆ ತಂದು, ಚಿಕಿತ್ಸೆಗೆ ವ್ಯವಸ್ಥೆ ಮಾಡಿಸಿದ್ದಾರೆ.

ಹರಿಹರ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿಗಳು, ವೈದ್ಯರೊಂದಿಗೆ ಚರ್ಚಿಸಿ, ಗಾಯಾಳುಗಳಿಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ. ಸಂಪೂರ್ಣ ಚಿಕಿತ್ಸೆ ಮುಗಿಯುವವರೆಗೂ ಸ್ಥಳದಲ್ಲೇ ಹಾಜರಿದ್ದ ಜಿ.ಎಸ್.ಅಶ್ವಿನಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿ, ಧೈರ್ಯ ತುಂಬಿದ್ದಾರೆ. ತಮ್ಮ ತಾಯಿ ಪರ ಪ್ರಚಾರಕ್ಕೆ ಹೋಗುವುದನ್ನು ಬಿಟ್ಟು ಮಾನವೀಯತೆ ಮೆರೆದ ಜಿ.ಎಸ್.ಅಶ್ವಿನಿ ಮಾನವೀಯ ಸ್ಪಂದನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಗಾಯಾಳುಗಳಿಗೆ ಯಾವುದೇ ಅಪಾಯವಿಲ್ಲವೆಂಬುದನ್ನು ವೈದ್ಯರಿಂದ ಖಚಿತಪಡಿಸಿಕೊಂಡ ನಂತರ ಜಿ.ಎಸ್.ಅಶ್ವಿನಿ ಮಲೆಬೆನ್ನೂರಿಗೆ ಪ್ರಚಾರಕ್ಕೆ ತೆರಳಿದರು.