ಸಿದ್ದೇಶ್ವರ ಸರ್ವಾಧಿಕಾರಿ ಧೋರಣೆ ಬಿಜೆಪಿಗೆ ಹಿನ್ನಡೆ

| Published : Oct 23 2023, 12:15 AM IST

ಸಾರಾಂಶ

ಹಿರಿಯ ಮುಖಂಡ ಕಕ್ಕರಗೊಳ್ಳ ಕೆ.ಪಿ.ಕಲ್ಲಿಂಗಪ್ಪ ಆರೋಪ । ಎಸ್‌.ಎ.ರವೀಂದ್ರನಾಥ ಮಧ್ಯಪ್ರವೇಶಿಸಿ ಜಿಲ್ಲೆಯ ಗೊಂದಲ ನಿವಾರಿಸಲಿ

* ಹಿರಿಯ ಮುಖಂಡ ಕಕ್ಕರಗೊಳ್ಳ ಕೆ.ಪಿ.ಕಲ್ಲಿಂಗಪ್ಪ ಆರೋಪ । ಎಸ್‌.ಎ.ರವೀಂದ್ರನಾಥ ಮಧ್ಯಪ್ರವೇಶಿಸಿ ಜಿಲ್ಲೆಯ ಗೊಂದಲ ನಿವಾರಿಸಲಿ

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಾಜಿ ಸಚಿವರು, ಮಾಜಿ ಶಾಸಕರ ವಿರುದ್ಧ ವಿನಾಕಾರಣ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಸರ್ವಾಧಿಕಾರಿ ಧೋರಣೆ ತೋರುತ್ತಾ, ಮುಖಂಡರನ್ನು ಉಚ್ಚಾಟಿಸುತ್ತಿರುವುದರಿಂದ ಬಿಜೆಪಿಗೆ ಜಿಲ್ಲೆಯಲ್ಲಿ ಹಿನ್ನಡೆಯಾಗುತ್ತಿದೆ ಎಂದು ಪಕ್ಷದ ಹಿರಿಯ ಮುಖಂಡ ಕಕ್ಕರಗೊಳ್ಳ ಕೆ.ಪಿ.ಕಲ್ಲಿಂಗಪ್ಪ ಆರೋಪಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲಿ ಬಲಿಷ್ಠವಾಗಿದ್ದ ಬಿಜೆಪಿಗೆ ಸಂಸದರ ಸರ್ವಾಧಿಕಾರಿ ಧೋರಣೆಯಿಂದಾಗಿ ಹಿನ್ನಡೆಯಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಹಿರಿಯ ನಾಯಕರಾದ ಮಾಜಿ ಸಚಿವ ಎಸ್‌.ಎ.ರವೀಂದ್ರನಾಥ ಮಧ್ಯಪ್ರವೇಶಿಸಿ, ಕಾರ್ಯಕರ್ತರಲ್ಲಿ ಮೂಡಿರುವ ಗೊಂದಲ ನಿವಾರಿಸಲಿ ಎಂದರು.

ಮಾಜಿ ಶಾಸಕರಾದ ಜಗಳೂರಿನ ಟಿ.ಗುರುಸಿದ್ದನಗೌಡ, ಚನ್ನಗಿರಿ ಮಾಡಾಳು ವಿರೂಪಾಕ್ಷಪ್ಪ ಸೇರಿ ಅನೇಕ ಹಿರಿಯ ಮುಖಂಡರು, ಕಾರ್ಯಕರ್ತರ ಪಕ್ಷದಿಂದ ಹೊರಗಿಡುವ ಹುನ್ನಾರವನ್ನು ಸಂಸದ ಸಿದ್ದೇಶ್ವರ ಮಾಡುತ್ತಿದ್ದು, ಇದರಿಂದ ಪಕ್ಷ ಸಂಘಟನೆಗೂ ತೀವ್ರ ಹಿನ್ನಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ರವೀಂದ್ರನಾಥ ಮಧ್ಯ ಪ್ರವೇಶದ ಅಗತ್ಯವಿದೆ ಎಂದು ತಿಳಿಸಿದರು.

ಪಕ್ಷಕ್ಕಾಗಿ ಹಗಲಿರುಳು ದುಡಿದವರ ಹೀಗೆ ಗುರಿಯಾಗಿಟ್ಟು, ನಿಷ್ಠಾವಂತ ಮುಖಂಡರು, ಕಾರ್ಯಕರ್ತರನ್ನು ಪಕ್ಷದಿಂದ ಉಚ್ಚಾಟಿಸಿದರೆ ಪಕ್ಷದ ಗತಿ ಏನಾಗುತ್ತದೆಂಬ ಅರಿವು ಇರಬೇಕು. ಪಕ್ಷದ ರಾಜ್ಯ ನಾಯಕರು ಇದರ ಬಗ್ಗೆ ಗಮನ ಹರಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಲೋಕಸಭೆ ಚುನಾವಣೆ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುವ ಜೊತೆಗೆ ಪಕ್ಷಕ್ಕೂ ದೊಡ್ಡ ಪ್ರಮಾಣದ ಹಾನಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪಕ್ಷದ ಮುಖಂಡರಾದ ಪ್ರವೀಣ ಜಾಧವ್, ದಂದೂರು ಜಯಪ್ರಕಾಶ, ಪಿ.ಎಸ್‌.ರಾಜು, ಅಗ್ನಿ ಸುರೇಶ, ಅಜಯಕುಮಾರ, ಸಿದ್ದೇಶ, ಸಂದೀಪ್‌, ಮಾರುತಿ, ಚೇತನಕುಮಾರ ಇತರರಿದ್ದರು. .................

ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ರೇಣುಕಾಚಾರ್ಯಗೆ ಟಿಕೆಟ್‌

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯರಿಗೆ ಬಿಜೆಪಿ ಟಿಕೆಟ್ ಸಿಗಲಿದ್ದು, ಕ್ಷೇತ್ರದಲ್ಲಿ ರೇಣುಕಾಚಾರ್ಯ ಬಹುಮತದೊಂದಿಗೆ ಜಯ ದಾಖಲಿಸುವ ವಿಶ್ವಾಸವಿದೆ ಎಂದು ಬಿಜೆಪಿ ಹಿರಿಯ ಮುಖಂಡ ಕಕ್ಕರಗೊಳ್ಳ ಕೆ.ಪಿ.ಕಲ್ಲಿಂಗಪ್ಪ ಹೇಳಿದರು.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಜಿಲ್ಲೆಯಲ್ಲಿ ಉತ್ತಮ ಹೆಸರು ಮಾಡಿದ್ದು, ಲೋಕಸಭೆ ಚುನಾವಣೆಯಲ್ಲಿ ರೇಣುಕಾಚಾರ್ಯರಿಗೆ ಬಿಜೆಪಿ ಟಿಕೆಟ್‌ ನಿಶ್ಚಿತ ಎಂದರು. ರೇಣುಕಾಚಾರ್ಯ ವಿರುದ್ಧ ಜಿಲ್ಲೆಯಲ್ಲಿ ಕೆಲ ವ್ಯಕ್ತಿಗಳು ಸುಳ್ಳು ಹೇಳಿಕೆಗಳ ನೀಡುತ್ತಿದ್ದಾರೆ. ನಿಷ್ಠಾವಂತ ಕಾರ್ಯಕರ್ತರಿಗೆ ಇಂತಹ ಸುಳ್ಳು ಹೇಳಿಕೆಗಳಿಂದ ನೋವುಂಟಾಗಿದೆ. ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರ ಮಾತಿಗೆ ಬೆಲೆ ಸಿಗುತ್ತಿಲ್ಲ. ತಕ್ಷಣವೇ ಇಂತಹದ್ದಕ್ಕೆಲ್ಲಾ ಪಕ್ಷದ ವರಿಷ್ಠರು ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

.......