ಸಮಾಜ ನಿರ್ಮಾಣಕ್ಕೆ ಯುವಜನತೆಗೆ ಸಿದ್ದೇಶ್ವರ ಶ್ರೀ ಪ್ರೇರಣೆ: ಚಕ್ರವರ್ತಿ ಸೂಲಿಬೆಲೆ

| Published : Dec 27 2023, 01:31 AM IST / Updated: Dec 27 2023, 01:32 AM IST

ಸಮಾಜ ನಿರ್ಮಾಣಕ್ಕೆ ಯುವಜನತೆಗೆ ಸಿದ್ದೇಶ್ವರ ಶ್ರೀ ಪ್ರೇರಣೆ: ಚಕ್ರವರ್ತಿ ಸೂಲಿಬೆಲೆ
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯಪುರ: ನಗರದ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಸಿದ್ದೇಶ್ವರ ಮಹಾಸ್ವಾಮಿಗಳವರ ಗುರುನಮನ ಮಹೋತ್ಸವ ಅಂಗವಾಗಿ ಸ್ವಚ್ಛತೆ-ಸಮಯ ಪಾಲನೆ-ವ್ಯಸನಮುಕ್ತಿ ವಿಷಯದ ಕುರಿತು ಹಮ್ಮಿಕೊಂಡಿದ್ದ 4ನೇ ಗೋಷ್ಠಿಯಲ್ಲಿ ಸ್ವಚ್ಛತೆ-ಸಮಯ ಪಾಲನೆ-ವ್ಯಸನಮುಕ್ತಿ ವಿಷಯದ ಕುರಿತು ಹಮ್ಮಿಕೊಂಡಿದ್ದ 4ನೇ ಗೋಷ್ಠಿಯಲ್ಲಿ ಖ್ಯಾತ ವಾಗ್ಮಿ ಹಾಗೂ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಯಾರು ಸಮಯ ಪರಿಪಾಲನೆ ಮಾಡುತ್ತಾರೆ, ಯಾರು ಸಮಯಕ್ಕೆ ಬೆಲೆ ಕೊಡುತ್ತಾರೋ ಅಂತಹವರನ್ನು ಇಡೀ ಜಗತ್ತೇ ಗುರುತಿಸುವಂತಹ ಸಮಯ ಬರುತ್ತದೆ ಎಂದು ಶ್ರೀ ಸಿದ್ಧೇಶ್ವರ ಅಪ್ಪನವರು ಸದಾ ಹೇಳುತ್ತಿದ್ದರು ಎಂದು ಖ್ಯಾತ ವಾಗ್ಮಿ ಹಾಗೂ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ನಗರದ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಸಿದ್ದೇಶ್ವರ ಮಹಾಸ್ವಾಮಿಗಳವರ ಗುರುನಮನ ಮಹೋತ್ಸವ ಅಂಗವಾಗಿ ಸ್ವಚ್ಛತೆ-ಸಮಯ ಪಾಲನೆ-ವ್ಯಸನಮುಕ್ತಿ ವಿಷಯದ ಕುರಿತು ಹಮ್ಮಿಕೊಂಡಿದ್ದ 4ನೇ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಶ್ರೀ ಸಿದ್ಧೇಶ್ವರ ಅಪ್ಪನವರು ತರುಣರೊಂದಿಗೆ ಸಮಾಜ ನಿರ್ಮಿಸುವಲ್ಲಿ ಸದಾ ಮುಂದಿರುತ್ತಿದ್ದರು. ಯುವಕರಲ್ಲಿ ಅವರ ಜವಬ್ದಾರಿಗಳ ಬಗ್ಗೆ ಅರಿವು ಮೂಡಿಸುತ್ತಿದ್ದರು. ಅವರು ಎಲ್ಲಿಯೇ ಹೋಗಲಿ ಪ್ರವಚನ ನೀಡಲಿಕ್ಕೆ ಅಲ್ಲಿದ್ದ ಯುವಕರಲ್ಲಿ ಹೊಸ ಚೈತನ್ಯ ಹುಟ್ಟು ಹಾಕುತ್ತಿದ್ದರು. ಸಮಾಜವನ್ನು ಕಟ್ಟುವಲ್ಲಿ ಯುವಜನತೆ ಪ್ರೇರೇಪಿಸುತ್ತಿದ್ದರು. ಅಷ್ಟೊಂದು ಮಹಾನ್ ಶಕ್ತಿ ನಡೆದಾಡುವ ದೇವರು ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರಲ್ಲಿತ್ತು ಎಂದರು.

ನಿಡಸೋಸಿ ಜಗದ್ಗುರು ಶ್ರೀ ದುರುದುಂಡೇಶ್ವರ ಸಿದ್ಧ ಸಂಸ್ಥಾನ ಮಠದ ಉತ್ತರಾಧಿಕಾರಿಗಳಾದ ಶ್ರೀ ನಿಜಲಿಂಗೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿ,

ಶ್ರೀ ಸಿದ್ಧೇಶ್ವರ ಅಪ್ಪನವರಿಗೆ ಸ್ವಚ್ಛತೆ ಬಗ್ಗೆ ವಿಶೇಷವಾದ ಕಾಳಜಿ ಇತ್ತು. ಎಲ್ಲೆಡೆಯೂ ಸ್ವಚ್ಛತೆ ಬಯಸುತ್ತಿದ್ದರು. ಅವರು ಯಾವಾಗಲೂ ಜನರ ಮನಸ್ಸು ಸ್ವಚ್ಛವಾಗಿರಬೇಕು, ಮನೆಯೂ ಸ್ವಚ್ಛವಾಗಿರಬೇಕು, ಊರು ಸ್ವಚ್ಛವಾಗಿರಬೇಕು ಎಂದು ತಮ್ಮ ಮಾತುಗಳಲ್ಲಿ ಹೇಳುತ್ತಿದ್ದರು.

ಯುವಕರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಅಪ್ಪನವರು ಅವರು ಮಾಡಬೇಕಾದ ಕೆಲಸ, ಜವಾಬ್ದಾರಿಗಳ ಬಗ್ಗೆ ಸದಾ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಸದಾ ತಮ್ಮ ಮಾತುಗಳಲ್ಲಿ ಯುವಕರು ಸ್ವಚ್ಛತೆಗೆ, ಸಮಯ ಪಾಲನೆಗೆ ಒತ್ತು ನೀಡಬೇಕೆಂದು ಹೇಳುತ್ತಿದ್ದರು. ಅವರ ತತ್ವಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕಿದೆ ಎಂದು ಹೇಳಿದರು.

ನಾನು ಮಂಗಳೂರಿನಲ್ಲಿ ಸ್ವಚ್ಛತಾ ಅಭಿಯಾನ ಶುರು ಮಾಡಿದ್ದೆ. ಪ್ರತಿ ವಾರವೂ ಸ್ವಚ್ಛತಾ ಅಭಿಯಾನ ಮಾಡುತ್ತಿದ್ದೆವು. ಈ ಅಭಿಯಾನಕ್ಕೆ ಶ್ರಮದಾನ ಮಾಡುವವರನ್ನು ನಾವು ಒತ್ತಾಯಪೂರ್ವಕವಾಗಿ ಯಾರನ್ನು ಕರೆದುಕೊಂಡು ಬರಲಿಲ್ಲ. ಸ್ವಯಂ ಪ್ರೇರಿತವಾಗಿ ಯಾರು ಬರುತ್ತಾರೋ ಅವರನ್ನು ಮಾತ್ರ ಕರೆದುಕೊಂಡು ಬರುತ್ತಿದ್ದೆವು. ಕೊನೆಗೆ ಒಂದು ದಿನ ಸುಮಾರು 4 ಸಾವಿರಕ್ಕೂ ಹೆಚ್ಚು ಜನ ಶ್ರಮದಾನ ಮಾಡಲು ಬಂದರು. ನಮಗೆ ಅತ್ಯಂತ ಖುಷಿ ಮತ್ತು ನಮ್ಮ ಅಭಿಯಾನದ ಯಶಸು ಕಂಡೆವು. ಅದೇ ಅಭಿಯಾನವನ್ನು ನಾವು ಇಂದು ಸಂಕೇಶ್ವರದಲ್ಲಿ ಪ್ರಾರಂಭಿಸಿದ್ದೇವೆ. ಅದರಂತೆ ಸ್ವಚ್ಛತೆ ಬಗ್ಗೆ ನಾವೆಲ್ಲರೂ ಜಾಗ್ರತರಾಗಿರಬೇಕು ಎಂದು ಹೇಳಿದರು.

ಸ್ವಾಮಿ ವಿವೇಕಾನಂದರು ಯಾವಾಗಲೂ ಒಂದು ಮಾತು ಹೇಳುತ್ತಿದ್ದರು. ನಾನು ಮುಖ್ಯವಲ್ಲ ನನ್ನ ಸಂದೇಶಗಳು ಮಾತ್ರ ಮುಖ್ಯ ಅವುಗಳನ್ನು ಮಾತ್ರ ಅನುಸರಿಸಿ ನನ್ನನಲ್ಲ ಎಂದು. ಅದೇ ರೀತಿ ಶ್ರೀ ಸಿದ್ಧೇಶ್ವರ ಅಪ್ಪನವರು ಸಹ ನನ್ನ ಅಲ್ಲ ನನ್ನ ಚಿಂತನೆಗಳನ್ನು, ವಿಚಾರಗಳನ್ನು, ತತ್ವಗಳನ್ನು ಅನುಸರಿಸಿ ಎಂದು ಹೇಳುತ್ತಿದ್ದರು. ಎಂದಿಗೂ ಅವರು ತಮ್ಮ ಹೆಸರನ್ನು, ಪ್ರಚಾರವನ್ನು ಬಯಸಿದವರಲ್ಲ ಎಂದರು.

ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಶರಣಾನಂದ ಮಹಾಸ್ವಾಮೀಜಿ, ಬಸವರಾಜ ನಾಟಿಕಾರ, ಜಂಬುನಾಥ ಕಂಚ್ಯಾಣಿ ಮುಂತಾದವರು ಇದ್ದರು.